ಬರ್ಮಿಂಗ್‌ಹ್ಯಾಮ್: ಜುಲೈ ೨೮ಂದು ನಡೆಯಲಿರುವ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ (CWG 2022) ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತ ತ್ರಿವರ್ಣ ಧ್ವಜದೊಂದಿಗೆ ಪರೇಡ್ ಮಾಡುವ ಅವಕಾಶ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧೂ ಅವರಿಗೆ ಲಭಿಸಿದೆ. ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಗಾಯಗೊಂಡು ಕ್ರೀಡಾಕೂಟಕ್ಕೆ ಅಲಭ್ಯರಾಗಿರುವ ಕಾರಣ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಸಿಂಧೂ ಅವರಿಗೆ ಅವಕಾಶ ಕಲ್ಪಿಸಿದೆ.
ಉದ್ಘಾಟನಾ ಸಮಾರಂಭದ ವೇಳೆ ಭಾರತದ ಕ್ರೀಡಾಪಟುಗಳ ನಿಯೋಗ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದೆ. ಅದರ ನೇತೃತ್ವ ವಹಿಸುವ ಕ್ರೀಡಾಪಟುಗಳು ತ್ರಿವರ್ಣ ಧ್ವಜವನ್ನು ತೆಗೆದುಕೊಂಡು ಮುಂಬದಿ ಸಾಗಲಿದ್ದಾರೆ. ಆ ಅವಕಾಶ ಪಿ.ವಿ. ಸಿಂಧೂ ಅವರಿಗೆ ಲಭಿಸಿದೆ.
ನೀರಜ್ ಅವರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಯಾರನ್ನು ಧ್ವಜಧಾರಿಯನ್ನಾಗಿ ಮಾಡಬೇಕು ಎಂಬ ಚರ್ಚೆಯ ಬಳಿಕ ಸಿಂಧೂಗೆ ಅವಕಾಶ ಕಲ್ಪಿಸಲಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದಿರುವ ಮೀರಾಬಾಯಿ ಚಾನು ಹಾಗೂ ಲವ್ಲಿನ ಬೊರ್ಗೊಹೈನ್ ಅವರ ಹೆಸರನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಅಂತಿಮವಾಗಿ ಸಿಂಧೂಗೆ ಅವಕಾಶ ನೀಡಲಾಗಿದೆ.
ನಾಲ್ವರ ಸಮಿತಿಯ ನಿರ್ಧಾರ
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ಅನಿಲ್ ಖನ್ನಾ, ಕಾರ್ಯದರ್ಶಿ ರಾಜೀವ್ ಮೆಹ್ತಾ, ಖಜಾಂಜಿ ಅನ್ನದಾನೇಶ್ವರ ಪಾಂಡೆ ಹಾಗೂ ಚೆಪ್ ಡಿ ಮಿಷನ್ ರಾಜೇಶ್ ಭಂಡಾರಿ ಅವರನ್ನು ಒಳಗೊಂಡಿರುವ ಸಮಿತಿ ಸಿಂಧೂ ಅವರ ಹೆಸರನ್ನು ಅಂತಿಮಗೊಳಿಸಿದೆ.
“ಪಿ.ವಿ ಸಿಂಧೂ ಅವರು ಭಾರತ ತಂಡದ ಧ್ವಜಧಾರಿಯಾಗಲಿದ್ದಾರೆ ಎಂಬುದನ್ನು ತಿಳಿಸಲು ಹರ್ಷ ವ್ಯಕ್ತಪಡಿಸುತ್ತಿದ್ದೇವೆ. ಮೀರಾಬಾಯಿ ಚಾನು ಹಾಗೂ ಲವ್ಲಿನಾ ಅವರ ಹೆಸರನ್ನು ಪರಿಗಣನೆಗೆ ತೆಗೆದುಕೊಂಡಿರಲಾಗಿದ್ದರೂ, ಎರಡು ಬಾರಿ ಪದಕ ಗೆದ್ದಿರುವ ಸಿಂಧೂಗೆ ಅವಕಾಶ ನೀಡಲಾಯಿತು,” ಎಂದು ಹಂಗಾಮಿ ಅಧ್ಯಕ್ಷ ಅನಿಲ್ ಖನ್ನಾ ಅವರು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | CWG-2022 | ಇಬ್ಬರು ಕ್ರಿಕೆಟ್ ಆಟಗಾರ್ತಿಯರಿಗೆ ಕೊರೊನಾ ಸೋಂಕು