ಪುಣೆ: ದಕ್ಷಿಣ ಆಫ್ರಿಕಾದ ಸ್ಟಾರ್ ಎಡಗೈ ಬ್ಯಾಟರ್ ಕ್ವಿಂಟನ್ ಡಿ ಕಾಕ್(Quinton de Kock) ಅವರು ನ್ಯೂಜಿಲ್ಯಾಂಡ್ ವಿರುದ್ಧ(New Zealand vs South Africa) ಶತಕ ಬಾರಿಸುವ ಮೂಲಕ ವಿಶ್ವಕಪ್‌ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ವಿಶ್ವಕಪ್ ಆವೃತ್ತಿಯೊಂದಲ್ಲಿ ಅತ್ಯಧಿಕ ಶತಕ ಬಾರಿಸಿದ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಪುಣೆಯ ಮಹಾರಾಷ್ಟ್ರಾ ಕ್ರಿಕೆಟ್ ಅಸೋಸಿಯೇಶನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ದಕ್ಷಿಣ ಆಫ್ರಿಕಾಕ್ಕೆ ಆರಂಭಕಾರ ಡಿ ಕಾಕ್ ಅವರು ಶತಕ ಬಾರಿಸಿ ನೆರವಾಗಿದ್ದಾರೆ. ಶತಕ ಬಾರಿಸುವ ಮೂಲಕ ಹಲವು ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದಿದ್ದಾರೆ.
Quinton de Kock is making the #CWC23 his own with yet another hundred to his name 🤩@mastercardindia Milestones 🏏#NZvSA pic.twitter.com/FS4VmBKULk
— ICC Cricket World Cup (@cricketworldcup) November 1, 2023
ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ಅತ್ಯಧಿಕ 4 ಶತಕ ಬಾರಿಸಿದ್ದ ಲಂಕಾದ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಡಿ ಕಾಕ್ ಈ ಶತಕದ ಮೂಲಕ ಸರಿಗಟ್ಟಿದ್ದಾರೆ. ಸಂಗಕ್ಕಾರ 2015ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಇದೀಗ ಡಿ ಕಾಕ್ ಕೂಡ 4 ಶತಕ ಬಾರಿಸುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ದಾಖಲೆ ಮಾತ್ರವಲ್ಲದೆ ದಕ್ಷಿಣ ಆಫ್ರಿಕಾ ಪರ ಅತ್ಯಧಿಕ ಏಕದಿನ ಶತಕ ಬಾರಿಸಿದ ಮೂರನೇ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಡಿ ಕಾಕ್ ಅವರ 21 ಶತಕ ಇದಾಗಿದೆ. 27 ಶತಕ ಬಾರಿಸಿರುವ ಹಾಶಿಮ್ ಆಮ್ಲಾ ಮೊದಲ ಸ್ಥಾನದಲ್ಲಿದ್ದಾರೆ. 25 ಶತಕ ಬಾರಿಸಿದ ಎಬಿ ಡಿ ವಿಲಿಯರ್ಸ್ ದ್ವಿತೀಯ ಸ್ಥಾನದಲ್ಲಿದ್ದಾರೆ.
ಆರಂಭಿಕ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿದ ಡಿ ಕಾಕ್ ಮುಂದಿನ ಎಡರು ಪಂದ್ಯದಲ್ಲಿ ಸಿಂಗಲ್ ಡಿಜಿಟ್ಗೆ ಔಟಾಗಿದ್ದರು. ಆ ಬಳಿಕ ಬಾಂಗ್ಲಾದೇಶ ವಿರುದ್ಧ ಮತ್ತು ಇದೀಗ ಕಿವೀಸ್ ವಿರುದ್ಧವೂ ಶತಕ ಬಾರಿಸುವ ಮೂಲಕ ಮತ್ತೆ ಸತತ ಪಂದ್ಯಗಳಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. 103 ಎಸೆತಗಳಿಂದ ಅವರು ಶತಕ ಪೂರ್ತಿಗೊಳಿಸಿದ ಅವರು ಅಂತಿಮವಾಗಿ 114 ರನ್ಗೆ ವಿಕೆಟ್ ಔಟಾದರು.
ಇದನ್ನೂ ಓದಿ ರೆಸ್ಟೋರೆಂಟ್ನಲ್ಲಿ ಜತೆಯಾಗಿ ಕಾಣಿಸಿಕೊಂಡ ಸಾರಾ-ಗಿಲ್; ಕ್ಲ್ಯಾರಿಟಿ ಸಿಕ್ಕಿತು ಎಂದ ನೆಟ್ಟಿಗರು
ರೋಹಿತ್ಗೆ ಮೊದಲ ಸ್ಥಾನ
ಪ್ರಸ್ತುತ ಟೀಮ್ ಇಂಡಿಯಾದ ನಾಯಕನಾಗಿರುವ ರೋಹಿತ್ ಶರ್ಮ ಅವರು ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರನಾಗಿದ್ದಾರೆ. ಅವರು 2019ರಲ್ಲಿ ಲಂಡನ್ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 5 ಶತಕ ಬಾರಿಸಿದ್ದರು. ಈ ಮೂಲಕ ಲಂಕಾದ ಕುಮಾರ ಸಂಗಕ್ಕರ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದರು. ಈ ಆವೃತ್ತಿಯಲ್ಲಿ ರೋಹಿತ್ 9 ಪಂದ್ಯಗಳನ್ನು ಆಡಿ ಒಟ್ಟು 648 ರನ್ ಗಳಿಸಿದ್ದರು. ವಿಶ್ವಕಪ್‌ನಲ್ಲಿ ಒಟ್ಟು ರೋಹಿತ್ 7 ಶತಕ ಬಾರಿಸಿದ್ದಾರೆ. 2015 ರಲ್ಲಿ ಮತ್ತು ಹಾಲಿ ಆವೃತ್ತಿಯ ವಿಶ್ವಕಪ್‌ನಲ್ಲಿ ಒಂದು ಶತಕ ಬಾರಿಸಿದ್ದಾರೆ. ಈ ಮೂಲಕ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹಿರಿಮೆಯನ್ನು ಹೊಂದಿದ್ದಾರೆ.
ಡಿ ಕಾಕ್ ಅವರು ಇನ್ನೊಂದು ಶತಕ ಬಾರಿಸಿದರೆ ರೋಹಿತ್ ಅವರು 5 ಶತಕದ ದಾಖಲೆಯನ್ನು ಸರಿಗಟ್ಟುವ ಅವಕಾಶವಿದೆ. ಅವರ ಬ್ಯಾಟಿಂಗ್ ಫಾರ್ಮ್ ಗಮನಿಸುವಾಗ ಇನ್ನೊಂದು ಶತಕ ಬಾರಿಸುವುದು ಖಚಿತ ಎನ್ನಬಹುದು. ವಿಶ್ವಕಪ್ ಬಳಿಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಲಿದ್ದಾರೆ. ಈಗಾಗಲೇ ಅವರು ಟೂರ್ನಿ ಆರಂಭಕ್ಕೂ ಮುನ್ನವೇ ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದರು.