ಚೆನ್ನೈ: ಇಲ್ಲಿನ ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಬುಧವಾರ (ಏಪ್ರಿಲ್ 12ರಂದು) ಮತ್ತೊಂದು ಜಿದ್ದಾಜಿದ್ದಿನ ಐಪಿಎಲ್ ಪಂದ್ಯ ನಡೆಯಿತು. ಕೊನೇ ಓವರ್ನ ಕೊನೇ ಎಸೆತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿಗೆ 6 ರನ್ಗಳು ಬೇಕಾಗಿತ್ತು. ಆದರೆ, ಸಿಕ್ಸರ್ ಬಾರಿಸಿ ವಿಜಯ ಸಾಧಿಸಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮೂರು ರನ್ಗಳ ಗೆಲುವು ಲಭಿಸಿದೆ. ಒಂದು ವೇಳೆ ಸಿಕ್ಸರ್ ಬಾರಿಸಿ ಗೆಲುವು ಸಾಧಿಸಿದ್ದರೆ ಹಾಲಿ ಆವೃತ್ತಿಯಲ್ಲಿ ಮತ್ತೊಂದು ರೋಚಕ ವಿಜಯ ಲಭಿಸುತ್ತಿತ್ತು.
ಈ ಫಲಿತಾಂಶಕ್ಕೆ ಮೊದಲು ಚೆನ್ನೈ ಸೂಪಕ್ ಕಿಂಗ್ಸ್ ತಂಡದ ಬ್ಯಾಟರ್ ಅಜಿಂಕ್ಯ ರಹಾನೆ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಆರ್. ಅಶ್ವಿನ್ ನಡುವೆ ಮೈದಾನದಲ್ಲೆ ಜಟಾಪಟಿ ನಡೆಯಿತು. ಈ ಸಂದರ್ಭವೂ ಪಂದ್ಯದ ಹೈಲೈಟ್ ಎನಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ತಂಡ 8 ವಿಕೆಟ್ ನಷ್ಟಕ್ಕೆ 175 ರನ್ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಪಾಲಿನ 20 ಓವರ್ಗಳು ಮುಕ್ತಾಯಗೊಂಡಾಗ 6 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೆಯಲ್ಲಿ ರವೀಂದ್ರ ಜಡೇಜಾ (25 ರನ್) ಹಾಗೂ ಮಹೇಂದ್ರ ಸಿಂಗ್ ಧೋನಿ (32 ರನ್) ಗೆಲುವಿನ ಯತ್ನ ನಡೆಸಿದೂ ಯಶಸ್ಸು ಸಿಗಲಿಲ್ಲ.
ಇದನ್ನೂ ಓದಿ :IPL 2023: ಚೆನ್ನೈ ವಿರುದ್ಧ ರಾಜಸ್ಥಾನ್ಗೆ ಸೂಪರ್ ಗೆಲುವು
ಅದಕ್ಕಿಂತ ಮೊದಲು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಳಿದ ಅಜಿಂಕ್ಯ ರಹಾನೆ 19 ಎಸೆತಗಳಲ್ಲಿ 31 ರನ್ ಬಾರಿಸಿದ್ದರು. ಈ ನಡುವೆ ಅವರು ಹಿರಿಯ ಬೌಲರ್ ಆರ್ ಅಶ್ವಿನ್ ಅವರೊಂದಿಗೆ ಮೈದಾನದಲ್ಲೇ ಜಟಾಪಟಿ ನಡೆಸಿದರು. ಪವರ್ ಪ್ಲೇ ಅವಧಿಯ ಕೊನೇ ಓವರ್ (6ನೇ ಓವರ್) ಎಸೆದಿದ್ದು ಆರ್. ಅಶ್ವಿನ್. ಈ ಓವರ್ನಲ್ಲಿ ಆರ್. ಅಶ್ವಿನ್ ಚೆಂಡೆಸೆಯಲು ಮುಂದೆ ಬಂದಾಗ ಅಜಿಂಕ್ಯ ರಹಾನೆ ಒಂದು ಹೆಜ್ಜೆ ಮುಂದೆ ಇಟ್ಟರು. ತಕ್ಷಣ ಅಶ್ವಿನ್ ಚೆಂಡೆಸೆಯದೇ ಸುಮ್ಮನೆ ನಿಂತರು. ಇದರಿಂದ ಅಜಿಂಕ್ಯ ರಹಾನೆಗೆ ನಿರಾಸೆ ಎದುರಾಯಿತು. ಪ್ರತಿಕಾರವಾಗಿ ಅಶ್ವಿನ್ ಮುಂದಿನ ಎಸೆತ ಎಸೆಯುವ ವೇಳೆ ಅಜಿಂಕ್ಯ ರಹಾನೆ ಹಿಂದಕ್ಕೆ ಸರಿದರು. ಇವರಿಬ್ಬರ ಈ ಜಟಾಪಟಿ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿತು.
ಪಂದ್ಯದಲ್ಲಿ ಏನಾಯಿತು?
ಅತ್ಯಂತ ರೋಚಕವಾಗಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ನ 17ನೇ ಪಂದ್ಯದಲ್ಲಿ ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ಕೈ ಮೇಲಾಗಿದೆ. ಅಂತಿಮ ಎಸೆತದಲ್ಲಿ 5 ರನ್ ಬಾರಿಸುವ ಸವಾಲಿನಲ್ಲಿ ಧೋನಿ ಎಡವಿದ ಕಾರಣ ರಾಜಸ್ಥಾನ್ ತಂಡ 3 ರನ್ಗಳ ರೋಚಕ ಗೆಲುವು ದಾಖಲಿಸಿತು.
ಚೆನ್ನೈಯ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ಥಾನ್ ನಿಗದಿತ 20 ಓವರ್ಗಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತನ್ನ ಪಾಲಿನ ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿ ಕೇವಲ ಮೂರು ರನ್ ಅಂತರದಿಂದ ಸೋಲು ಕಂಡಿತು.