ಮೊಹಾಲಿ: ಆಸ್ಟ್ರೇಲಿಯಾ(IND vs AUS) ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ 5 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ದ್ವಿತೀಯ ಪಂದ್ಯ ಭಾನುವಾರ ಇಂದೋರ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಮೊಹಾಲಿಯಲ್ಲಿ ಪಂದ್ಯ ಮುಕ್ತಾಯಗೊಂಡ ಬಳಿಕವೂ ಹಿರಿಯ ಮತ್ತು ಅನುಭವಿ ಸ್ಪಿನ್ನ್ ಬೌಲರ್ ಆರ್. ಅಶ್ವಿನ್(Ravichandran Ashwin) ತಡರಾತ್ರಿವರೆಗೂ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿರುವ ವಿಡಿಯೊ ವೈರಲ್(Viral Video) ಆಗಿದೆ.
ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಅಶ್ವಿನ್ ಅವರನ್ನು ಆಸೀಸ್ ಸರಣಿಗೆ ಆಯ್ಕೆ ಮಾಡಿ ಮೊದಲ ಪಂದ್ಯದಲ್ಲೇ ಆಡುವ ಅವಕಾಶ ಕಲ್ಪಿಸಲಾಯಿತು. 10 ಓವರ್ ಎಸೆದ ಅಶ್ವಿನ್ 47 ರನ್ ನೀಡಿ ಒಂದು ವಿಕೆಟ್ ಕಿತ್ತರು. ಆದರೆ ಬ್ಯಾಟಿಂಗ್ ಮಾಡುವ ಅವಕಾಶ ಲಭಿಸಿರಲಿಲ್ಲ. ಆದರೂ ಅವರು ಮುಂದಿನ ಪಂದ್ಯಕ್ಕೆ ಸಜ್ಜಾಗುವ ನಿಟ್ಟಿನಲ್ಲಿ ಪಂದ್ಯ ಮುಗಿದ ಬಳಿಕ ನೆಟ್ಸ್ನಲ್ಲಿ ಏಕಾಂಗಿಯಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಈ ವಿಡಿಯೊ ಟ್ವಿಟರ್ನಲ್ಲಿ ವೈರಲ್ ಆಗಿದೆ.
ಅಕ್ಷರ್ ಬದಲು ವಿಶ್ವಕಪ್ ಆಡುವರೇ ಅಶ್ವಿನ್?
ವಿಶ್ವಕಪ್ಗೆ ಭಾರತ ತಂಡವನ್ನು ಪ್ರಕಟಿಸಿದ ವೇಳೆ ಅಶ್ವಿನ್ಗೆ ಅವಕಾಶ ನೀಡದ ಕುರಿತು ಅನೇಕ ಮಾಜಿ ಕ್ರಿಕೆಟಿಗರು ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಟೂರ್ನಿ ಭಾರತದಲ್ಲೇ ನಡೆಯುವ ಕಾರಣ ಅಶ್ವಿನ್ ಮತ್ತು ಜಡೇಜಾ ಕಾಂಬಿನೇಶನ್ ಉತ್ತಮವಾಗಿರುತ್ತಿತ್ತು. ಅಲ್ಲದೆ ಅಶ್ವಿನ್ ಭಾರತದ ಪಿಚ್ನಲ್ಲಿ ಅಪಾರ ಪಂದ್ಯಗಳನ್ನು ಆಡಿದ ಅನುಭವವನ್ನು ಹೊಂದಿದ್ದರು. ಬ್ಯಾಟಿಂಗ್ ಕೂಡ ಮಾಡಬಲ್ಲರು. ಹೀಗಾಗಿ ಅವರಿಗೆ ಅವಕಾಶ ನೀಡಬೇಕಿತ್ತು ಎನ್ನುವುದು ಹಲವರ ವಾದವಾಗಿತ್ತು.
ಟ್ವಿಟರ್ ವಿಡಿಯೊ
— Nihari Korma (@NihariVsKorma) September 23, 2023
ಏಷ್ಯಾಕಪ್ನಲ್ಲಿ ಅಕ್ಷರ್ ಪಟೇಲ್ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಆಟಗಾರನಾಗಿದ್ದಾರೆ. ಒಂದೊಮ್ಮೆ ಅವರು ಗಾಯದಿಂದ ಹೊರಬಿದ್ದರೆ ಅವರ ಸ್ಥಾನಕ್ಕೆ ಅಶ್ವಿನ್ ಆಯ್ಕೆಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅವರಿಗೆ ಆಸೀಸ್ ಸರಣಿಯಲ್ಲಿ ದಿಢೀರ್ ಅವಕಾಶ ನೀಡಿದಂತೆ ತೋರುತ್ತಿದೆ. ಇನ್ನೊಂದೆಡೆ ವಾಷಿಂಗ್ಟನ್ ಸುಂದರ್ ಕೂಡ ಈ ರೇಸ್ನಲ್ಲಿದ್ದಾರೆ. ಹೀಗಾಗಿ ಅಶ್ವಿನ್ ಆಸೀಸ್ ವಿರುದ್ಧ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಆಯ್ಕೆ ಸಮಿತಿಯ ಗಮನಸೆಳೆಯುವ ನಿಟ್ಟಿನಲ್ಲಿ ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ನಡೆಸಿ ಮುಂದಿ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ನಿರೀಕ್ಷಿತ ಪ್ರದರ್ಶನ ತೋರುವ ಪಣ ತೊಟ್ಟಂತಿದೆ.
ಇದನ್ನೂ ಓದಿ ind vs aus : 21ನೇ ಶತಮಾನದಲ್ಲಿ ಭಾರತ ಕ್ರಿಕೆಟ್ ತಂಡದ ವಿಶೇಷ ದಾಖಲೆ, ಮೊಹಾಲಿ ಕ್ರೀಡಾಂಗಣವೇ ಸಾಕ್ಷಿ
ಪಂದ್ಯ ಗೆದ್ದ ಭಾರತ
ಇಲ್ಲಿನ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 276 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ. 48.4 ಓವರ್ಗಳಲ್ಲಿ. 5 ವಿಕೆಟ್ ಕಳೆದುಕೊಂಡು 281 ರನ್ ಬಾರಿಸಿ ಜಯಶಾಲಿಯಾಯಿತು. ಭಾರತ ತಂಡದ ಪರ ಬೌಲಿಂಗ್ನಲ್ಲಿ 51 ರನ್ಗಳಿಗೆ 5 ವಿಕೆಟ್ ಉರುಳಿಸಿದ ಮೊಹಮ್ಮದ್ ಶಮಿ ಹಾಗೂ ಬ್ಯಾಟಿಂಗ್ ಮೂಲಕ ತಲಾ ಅರ್ಧ ಶತಕಗಳನ್ನು ಬಾರಿಸಿದ ಶುಭ್ಮನ್ ಗಿಲ್ (74) ಹಾಗೂ ಋತುರಾಜ್ ಗಾಯಕ್ವಾಡ್ (71), ಸೂರ್ಯಕುಮಾರ್ ಯಾದವ್ (50), ಮತ್ತು ಕೆ. ಎಲ್ ರಾಹುಲ್ (58*) ಗೆಲುವಿನ ರೂವಾರಿಗಳು ಎನಿಸಿಕೊಂಡರು.