ಬೆಂಗಳೂರು: ಚಂದ್ರಯಾನ 3ರ ಯಶಸ್ಸಿನ ಬಳಿಕ ಪ್ರತಿಯೊಬ್ಬ ಭಾರತೀಯನೂ ಕಾದು ಕುಳಿತಿದ್ದ ವಿಶ್ವಕಪ್ ಚೆಸ್(chess world cup 2023) ಪಂದ್ಯಾವಳಿಯ ಗುರುವಾರ ನಡೆದ ಫೈನಲ್ ಟೈ ಬ್ರೇಕರ್ ಸ್ಪರ್ಧೆಯಲ್ಲಿ ಭಾರತದ ಆರ್. ಪ್ರಜ್ಞಾನಂದ(R Praggnanandhaa) ಸೋಲು ಕಂಡಿದ್ದಾರೆ. ಆದರೆ ಅವರು ಭಾರತೀಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವದ ಅಗ್ರ ಶ್ರೇಯಾಂಕದ ಮ್ಯಾಗ್ನಸ್ ಕಾರ್ಲ್‌ಸನ್(Magnus Carlsen) ವಿರುದ್ಧ 1-0 ಅಂತರದ ಸೋಲು ಕಂಡರೂ ಪ್ರಜ್ಞಾನಂದ ಅವರು ಇಲ್ಲಿಯ ವರೆಗೆ ಬೆಳೆದು ಬಂದ ಹಾದಿ ಎಂತವರನ್ನು ರೋಮಾಂಚನಗೊಳಿಸುತ್ತದೆ.
ಗುರುವಾರ ನಡೆದ ಟೈ ಬ್ರೇಕರ್ ಪಂದ್ಯದಲ್ಲಿ ಮೊದಲ ಸೆಟ್ನಲ್ಲಿ ಪ್ರಜ್ಞಾನಂದ ಹಿನ್ನಡೆ ಅನುಭವಿಸಿದರು. ಮೊದಲ ಸುತ್ತಿನ ಫಸ್ಟ್ ಗೇಮ್ನ 16 ಚಲನೆಗಳ ನಂತರ, ಕಾರ್ಲ್‌ಸೆನ್‌ನ ‘ಬಿಷಪ್’ ಗಾಗಿ ಪ್ರಜ್ಞಾನಂದ ತನ್ನ ‘ನೈಟ್’ (ಹೋರ್ಸ್ ಹೆಡ್) ತ್ಯಾಗ ಮಾಡಿದರು. ಇದರ ಬೆನ್ನಲ್ಲೇ ಇಬ್ಬರು ತಮ್ಮ ರಾಣಿಯನ್ನೂ ಕೂಡ ಕಳೆದುಕೊಂಡರು. ಆದರೆ 21ನೇ ನಡೆಯ ವೇಳೆಗೆ ಕಾರ್ಲ್‌ಸೆನ್ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಇದೇ ವೇಳೆ ಪ್ರಜ್ಞಾನಂದ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. 25 ನಡೆಗಳ ಬಳಿಕ ಪ್ರಜ್ಞಾನಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ 34 ನಡೆಗಳ ವೇಳೆಗೆ ಇಬ್ಬರು ರೂಕ್ ಕಾಯಿಕೆಯನ್ನು ಕಳೆದುಕೊಂಡಿದ್ದರು. 47 ಚಲನೆಯ ಬಳಿಕ ಟೈಬ್ರೇಕ್ನ ಮೊದಲ ಗೇಮ್ನಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದ ಕಾರ್ಲ್‌ಸೆನ್ 1-0 ಮುನ್ನಡೆ ಸಾಧಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರ ಚೆಸ್ ಕ್ಷೇತ್ರದ ಏಳು-ಬೀಳು ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ತಾಯಿಯ ಪರಿಶ್ರಮ
ಚೆನ್ನೈಯ 18 ವರ್ಷದ ಪ್ರಜ್ಞಾನಂದನ ಈ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ಅವನ ತಾಯಿ ನಾಗಲಕ್ಷ್ಮೀಗೆ(Nagalakshmi) ಅವರಿಗೆ ಸಲ್ಲುತ್ತದೆ. ಪ್ರಜ್ಞಾನಂದ ಇಂದು ಇಡೀ ದೇಶದ ಕಣ್ಮಣಿ. ಅವರು ಫೈನಲ್ ಸೋತರೂ ಕೂಡ ಭಾರತೀಯರಿಗೆ ಅವರ ಸಾಧನೆ ಎಂದಿಗೂ ಸದಾ ನೆನಪಿನಲ್ಲಿರುತ್ತದೆ. ಅವರ ಈ ಎಲ್ಲ ಸಾಧನೆಯ ಹಿಂದೆ ತಾಯಿಯ ಪರಿಶ್ರಮ ಇದ್ದೇ ಇದೆ. ಟಿವಿ ಹುಚ್ಚನ್ನು ಬಿಡಿಸುವ ಸಲುವಾಗಿ ತಂದೆ ರಮೇಶ್‌ಬಾಬು ತಮ್ಮ ಮಕ್ಕಳಿಬ್ಬರಿಗೆ ಚೆಸ್‌ಬೋರ್ಡ್ ತಂದು ಕೊಟ್ಟಿದ್ದರು. ಇಲ್ಲಿಂದ ಶುರುವಾದ ಚೆಸ್ ಆಟ ಇದೀಗ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
ಎಲ್ಲೇ ಹೋದರು ಮನೆ ಊಟ
ಪ್ರಜ್ಞಾನಂದ ಎಲ್ಲೇ ಹೋದರು ಅವರಿಗೆ ಮನೆಯ ಊಟವೇ ಬೇಕು. ಹೀಗಾಗಿ ಅವರ ತಾಯಿ ಮಗ ಪಾಲ್ಗೊಳ್ಳುವ ಎಲ್ಲ ಟೂರ್ನಿಯಲ್ಲಿ ಜತೆಗೆ ಇದ್ದು ಆತನ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿರುತ್ತಾರೆ. ತಾಯಿಯ ಈ ಪರಿಶ್ರಮಕ್ಕೆ ಕೆಲ ದಿನಗಳ ಹಿಂದೆ ಅನೇಕ ಭಾರತೀಯ ಕ್ರೀಡಾ ದಿಗ್ಗಜರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಒಂದು ಇಂಡಕ್ಷನ್ ಸ್ಟೌವ್, ಅಕ್ಕಿ, ರಸಂ ಹಾಗೂ ಸಾಂಬರ್ ಪದಾರ್ಥಗಳನ್ನು ಪ್ರಜ್ಞಾನಂದ ತಾಯಿ ನಾಗಲಕ್ಷ್ಮೀ ಜತೆಯಲ್ಲೇ ತೆಗೆದುಕೊಂಡು ಹೋಗುತ್ತಾರೆ. ಈ ತಾಯಿ-ಮಗನ ಪ್ರೀತಿಯನ್ನು ಹೊಗಳಿಕೆಗೆ ಪದಗಳೇ ಸಿಗುತ್ತಿಲ್ಲ.
ಇದನ್ನೂ ಓದಿ Chess World Cup: ಸೋತರೂ ಕೋಟ್ಯಂತರ ಭಾರತೀಯರ ಮನಗೆದ್ದ ಪ್ರಜ್ಞಾನಂದ
ಅಪಾರ ದೈವ ಭಕ್ತ
ಪ್ರಜ್ಞಾನಂದನ ಎಲ್ಲೇ ಹೋಗಲಿ ಅವರ ಹಣೆಯಲ್ಲಿ ವಿಭೂತಿ ಮಾತ್ರ ತಪ್ಪುವುದಿಲ್ಲ. ಪರಮ ದೈವ ಭಕ್ತರಾಗಿರುವ ಅವರು ವಿಶ್ವ ಮಟ್ಟದ ಪಂದ್ಯಾವಳಿ ಇರಲಿ, ಶಾಲೆಯಲ್ಲೇ ಇರಲಿ ಅಥವಾ ಮನೆಯಲ್ಲೇ ಇರಲಿ ಹಣೆಯಲ್ಲಿ ವಿಭೂತಿ ಹಚ್ಚಿರುತ್ತಾರೆ. ಹಿಂದೊಮ್ಮೆ ಅವರು ಸಂದರ್ಶನದಲ್ಲಿ ತಮ್ಮ ವಿಭೂತಿಯ ರಹಸ್ಯವನ್ನು ಹೇಳಿದ್ದರು. ವಿಭೂತಿ ನನ್ನ ಹಣೆಯಲ್ಲಿದ್ದರೆ ಏನೋ ಒಂದು ಶಕ್ತಿ ನನ್ನೊಳಗೆ ಇದ್ದಂತೆ ಎಂದು ಹೇಳಿದ್ದರು. ತಮಿಳುನಾಡಿನವರಾದ ಅವರು ಆರಂಭದಲ್ಲಿ ಕಷ್ಟದ ದಿನಗಳನ್ನೇ ಎದುರಿಸಿ ಇಂದು ಈ ಮಟ್ಟಕ್ಕೆ ಬೆಳೆದು ನಿಂತು ಇಡೀ ವಿಶ್ವವೇ ಅವರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಅಕ್ಕ ಕೂಡ ಗ್ರ್ಯಾನ್‌ಮಾಸ್ಟರ್
ಪ್ರಜ್ಞಾನಂದ ಅವರ ಅಕ್ಕ ವೈಶಾಲಿ ಕೂಡ ಉತ್ತಮ ಚೆಸ್‌ಪಟು. 2020ರಲ್ಲಿ ಭಾರತ ಮೊದಲ ಬಾರಿಗೆ ಆನ್‌ಲೈನ್ ಒಲಿಂಪಿಯಾಡ್ ಚಿನ್ನದ ಪದಕ ಜಯಿಸಿತ್ತು. ಈ ವಿಜೇತ ತಂಡದ ಆಟಗಾರರಲ್ಲಿ ವೈಶಾಲಿ ಕೂಡ ಒಬ್ಬರಾಗಿದ್ದರು. ಪ್ರಜ್ಞಾನಂದಗೆ ತಮ್ಮ ಅಕ್ಕನೇ ಮೊದಲ ಎದುರಾಳಿ. ಅಕ್ಕನ ಎದುರು ಗೆಲ್ಲುತ್ತಲೇ ಸಾಗಿದ ತಮ್ಮ ಇಂದು ವಿಶ್ವದ ನಂ.1 ಆಟಗಾರನ ಮುಂದೆ ಕೂತು ಆಡುವ ಮಟ್ಟಕ್ಕೆ ಬೆಳೆದುನಿಂತಿದ್ದಾರೆ. ತಮ್ಮನ ಈ ಸಾಧನೆಗೆ ಅಕ್ಕ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಶಾಲಿ ಕೂಡ ವುಮೆನ್ಸ್ ಗ್ರ್ಯಾನ್‌ಮಾಸ್ಟರ್ ಎಂಬುದನ್ನು ಮರೆಯುವಂತಿಲ್ಲ.
ಈಗ ಕೋಟ್ಯಧಿಪತಿ…
ಪ್ರಜ್ಞಾನಂದನ ಅವರ ತಂದೆ ಪೋಲಿಯೋ ಪೀಡಿತರು. ಬ್ಯಾಂಕ್ ಉದ್ಯೋಗಿ ಆಗಿದ್ದಾರೆ. ಆದರೆ ಇದೀಗ ಮಗ 18 ವರ್ಷದಲ್ಲೇ ಕೋಟ್ಯಧಿಪತಿ ಆಗಿದ್ದಾರೆ. ವಿಶ್ವ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ಗಳಲ್ಲಿ ಪ್ರಜ್ಞಾನಂದನ ಪ್ರತಿ ತಿಂಗಳು ಕೋಟ್ಯಂತರ ಸಂಪಾದನೆ ಮಾಡುತ್ತಾರೆ. ಆದರೆ ನಿಖರವಾಗಿ ಅವರು ಎಷ್ಟು ಕೋಟಿ ಗಳಿಸುತ್ತಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಇದೀಗ ವಿಶ್ವ ಕಪ್ನಲ್ಲಿಯೂ ದ್ವಿತೀಯ ಸ್ಥಾನ ಪಡೆದು 66,13,444 ರೂ. ನಗದು ಬಹುಮಾನವನ್ನು ಜೇಬಿಗಿಳಿಸಿದ್ದಾರೆ.
7ನೇ ವಯಸ್ಸಿಗೆ ಅಮೋಘ ಸಾಧನೆ
ಚೆನ್ನೈ ಮೂಲದವರಾದ ಪ್ರಜ್ಞಾನಂದ ಅವರಿಗೆ ಕೇವಲ 18 ವರ್ಷ. ಅವರು 2013ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್ ಅಂಡರ್-8ನಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು. 7ನೇ ವಯಸ್ಸಿನಲ್ಲಿ FIDE ಮಾಸ್ಟರ್ ಮತ್ತು 2015ರಲ್ಲಿ 10 ವರ್ಷದೊಳಗಿನ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದಾರೆ.
ಕಾರ್ಲ್‌ಸನ್ ವಿರುದ್ಧವೂ ಗೆದ್ದಿದ್ದರು
ಪ್ರಜ್ಞಾನಂದ ಅವರು ಕೋವಿಡ್ ಸಮಯದಲ್ಲಿ ನಡೆದ ಆನ್‌ಲೈನ್ ಏರ್‌ಥಿಂಗ್ಸ್ ಮಾಸ್ಟರ್ಸ್ ರ್ಯಾಪಿಡ್ ಟೂರ್ನಮೆಂಟ್‌ನಲ್ಲಿ ವಿಶ್ವ ಚಾಂಪಿಯನ್ ಕಾರ್ಲ್‌ಸನ್‌ಗೆ ಸೋಲಿನ ರುಚಿ ತೋರಿಸಿದ್ದರು. ಈ ಮೂಲಕ ಕಾರ್ಲ್‌ಸನ್ ವಿರುದ್ಧ ಗೆದ್ದ ಮೂರನೇ ಭಾರತೀಯ ಆಟಗಾರ ಎಂಬ ಹಿರಿಮೆಯೂ ಪ್ರಜ್ಞಾನಂದ ಪಾಲಿಗಿದೆ. ವಿಶ್ವ ಕಪ್ನಲ್ಲಿ ತನ್ನಗಿಂತ ಮೇಲಿನ ಎಲ್ಲ ಬಲಿಷ್ಠ ಆಟಗಾರರನ್ನು ಮಣಿಸಿ ಈ ಹಂತಕ್ಕೇರಿದ್ದು ಮಹೋನ್ನತ ಸಾಧನೆಯೇ ಆಗಿದೆ. ಇದು ಕೂಡ ಇಷ್ಟು ಚಿಕ್ಕ ವಯಸ್ಸಿನಲ್ಲಿ. ಫೈನಲ್ನಲ್ಲಿ ಸೋತರೂ ಮುಂದಿನ ಪೀಳಿಗೆಗೆ ಪ್ರಜ್ಞಾನಂದ ಅವರ ಸಾಧನೆಯ ಹಾದಿ ಎಲ್ಲರಿಗೂ ಸ್ಫೂರ್ತಿಯಾಗಲಿದೆ.