Site icon Vistara News

Rachin Ravindra: ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ; ರಚಿನ್​ ರವೀಂದ್ರ

rachin ravindra

ಬೆಂಗಳೂರು: ವಿಶ್ವಕಪ್​ ಕ್ರಿಕೆಟ್​ನಲ್ಲಿ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನದ ಮೂಲಕ ಎಲ್ಲರ ಮನೆ ಮಾತಾಗಿರುವ ನ್ಯೂಜಿಲ್ಯಾಂಡ್​ ತಂಡದ ಆಟಗಾರ ರಚಿನ್​ ರವೀಂದ್ರ(Rachin Ravindra) ಅವರು ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಮೂಲ

ರಚಿನ್ ಅವರ ತಂದೆ ರವಿ ಕೃಷ್ಣಮೂರ್ತಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಸಿಸ್ಟಂ ಆರ್ಕಿಟೆಕ್ಟ್ ಆಗಿದ್ದರು. ಅವರ ಅಜ್ಜ ಬಾಲಕೃಷ್ಣ ಅಡಿಗ ಅವರು ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದರು. ರವಿ ಕೃಷ್ಣಮೂರ್ತಿ ಸ್ಥಳೀಯ ಹಂತದ ಕ್ರಿಕೆಟ್‌ ಆಡಿ ಬಳಿಕ ನ್ಯೂಜಿಲ್ಯಾಂಡ್​ಗೆ ಕೆಲಸದ ನಿಮಿತ್ತ ವಲಸೆ ಹೋಗಿದ್ದರು. ಕೃಷ್ಣಮೂರ್ತಿ ಅವರು ಸಚಿನ್ ಹಾಗೂ ಕನ್ನಡಿಗ ರಾಹುಲ್​ ದ್ರಾವಿಡ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಇಬ್ಬರೂ ಆಟಗಾರರ ಹೆಸರಿನ ಅಕ್ಷರಗಳನ್ನು ಸಂಯೋಜಿಸುವ ಮೂಲಕ ತಮ್ಮ ಮಗನಿಗೆ ಹೆಸರಿಟ್ಟಿದ್ದಾರೆ. ರಾಹುಲ್ ಅವರಿಂದ “ರಾ” ಮತ್ತು ಸಚಿನ್ ಅವರಿಂದ “ಚಿನ್​” ತೆಗೆದುಕೊಂಡು ಎರಡನ್ನೂ ಸಂಯೋಜಿಸಿ ರಚಿನ್ ಎಂದು ಹೆಸರಿಟ್ಟರು.

ಇದನ್ನೂ ಓದಿ ಸಚಿನ್ ‘ವಿಶ್ವ’​ ದಾಖಲೆ ಮುರಿಯಲು ಕೊಹ್ಲಿ,ರಚಿನ್​ ಮಧ್ಯೆ ತೀವ್ರ ಪೈಪೋಟಿ

16 ವರ್ಷದವರಾಗಿದ್ದಾಗಲೇ ರಚಿನ್​ ಅವರು ಕಿವೀಸ್​ನ 19 ವರ್ಷದೊಳಗಿನ ತಂಡದಲ್ಲಿ ಆಡಲು ಆರಂಭಿಸಿದ್ದ ಬಳಿಕ ಹಂತ ಹಂತವಾಗಿ ಬೆಳೆದು ರಾಷ್ಟ್ರೀಯ ತಂಡವನ್ನು ಸೇರಿಕೊಂಡರು. ಹೆಚ್ಚಿನ ಏಕದಿನ ಕ್ರಿಕೆಟ್ ಆಡಿದ ಅನುಭವ ಇರದಿದ್ದರೂ ವಿಶ್ವಕಪ್​ನಲ್ಲಿ ಸ್ಥಾನ ಪಡೆದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅವರು ಯಾರೂ ಊಹೆ ಮಾಡದ ರೀತಿಯಲ್ಲಿ ಪ್ರದರ್ಶನ ತೋರುವ ಮೂಲಕ ದಿಗ್ಗಜ ಸಚಿನ್​ ತೆಂಡೂಲ್ಕರ್​ ದಾಖಲೆಯನ್ನೇ ಮುರಿದು ಮಿಂಚಿದರು.

ಕನಸಿನಲ್ಲಿಯೂ ಊಹಿಸಿಲ್ಲ

“ಇದೆಲ್ಲವೂ ನಂಬಲು ಸಾಧ್ಯವಾಗುತ್ತಿಲ್ಲ. ಸಚಿನ್ ಅವರ ದಾಖಲೆಯನ್ನು ಮುರಿಯುತ್ತೇನೆ ಎಂದು ನನ್ನ ಕನಸಿನಲ್ಲೂ ಸಹ ಊಹಿಸಿರಲಿಲ್ಲ. ಟೆಸ್ಟ್ ಪಂದ್ಯವೊಂದರಲ್ಲಿ ಅಜಾಜ್ ಪಟೇಲ್ ಅವರ 10ನೇ ವಿಕೆಟ್​ನ ಕ್ಯಾಚ್ ಹಿಡಿದದ್ದು ನನ್ನ ವೃತ್ತಿಜೀವನದಲ್ಲಿ ಅದ್ಭುತ ಕ್ಷಣವಾಗಿತ್ತು” ಎಂದು ರಚಿನ್​ ಹೇಳಿದರು.

“ನನ್ನ ತಂದೆಯ ಸಂಬಂಧಿಕರು ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾನು ನ್ಯೂಜಿಲ್ಯಾಂಡ್​ ತಂಡವನ್ನು ಪ್ರತಿನಿಧಿಸುತ್ತಿದ್ದರೂ ಕೂಡ ನನಗೆ ಬೆಂಬಲ ಸೂಚಿಸಿ ನನ್ನ ಆಟವನ್ನು ನೋಡಲು ಮೈದಾನಕ್ಕೆ ಬಂದಿರುವುದು ನನಗೆ ಸಂತಸ ತಂದಿದೆ. ಇಲ್ಲಿನ ಅಭಿಮಾನಿಗಳಿಂದ ಈ ಮಟ್ಟದ ಬೆಂಬಲವನ್ನು ನಾನು ನಿರೀಕ್ಷಿಸಿರಲಿಲ್ಲ. ನಮ್ಮ ತಂಡಕ್ಕೆ ಬೆಂಬಲಿಸಿದ ಪ್ರತಿಯೊಬ್ಬ ಅಭಿಮಾನಿಗಳಿಗೂ ನನ್ನ ಧನ್ಯವಾದಗಳು” ಎಂದರು.

ಇದನ್ನೂ ಓದಿ ICC Award: ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಗೆದ್ದ ರಚಿನ್​ ರವೀಂದ್ರ

ಸಚಿನ್​ ದಾಖಲೆ ಮುರಿದ ರಚಿನ್​

ರಚಿನ್ ಕಳದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಟೀಮ್​ ಇಂಡಿಯಾದ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​ ಅವರ ವಿಶ್ವಕಪ್​ನ ದಾಖಲೆಯೊಂದನ್ನು ಮುರಿದ್ದರು. ಅತಿ ಕಿರಿಯ ವಯಸ್ಸಿನಲ್ಲಿ 3 ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ಸಚಿನ್​ ಅವರು 1996 ವಿಶ್ವಕಪ್​ ಟೂರ್ನಿಯಲ್ಲಿ 2 ಶತಕ ಬಾರಿಸಿದ್ದರು. ಈ ದಾಖಲೆಯನ್ನು ರಚಿನ್​ ಅವರು ಕಳೆದ ಆಸೀಸ್​ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಸರುಗಟ್ಟಿದ್ದರು. ಇದೀಗ ಪಾಕ್​ ವಿರುದ್ಧ ಶತಕ ಬಾರಿಸಿ ಸಚಿನ್​ ಅವರನ್ನು ಹಿಂದಿಕ್ಕಿದ್ದಾರೆ. ಉಭಯ ಆಟಗಾರರು ಈ ದಾಖಲೆಯನ್ನು 23 ವರ್ಷದಲ್ಲಿ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 42 ರನ್ ಗಳಿಸಿದ ರಚಿನ್​ ಅವರು 25 ವರ್ಷದೊಳಗಿನ ವಿಶ್ವಕಪ್ ಟೂರ್ನಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಸಚಿನ್ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದರು.

ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ ಗೆದ್ದ ರಚಿನ್​

ರಚಿನ್​ ರವೀಂದ್ರ ಇದೇ ಮೊದಲ ಬಾರಿಗೆ ಅಕ್ಟೋಬರ್ ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ(ICC player of the month award) ಗೆದ್ದಿದ್ದಾರೆ. ಈ ರೇಸ್​ನಲ್ಲಿದ್ದ ಟೀಮ್​ ಇಂಡಿಯಾ ವೇಗಿ ಜಸ್​ಪ್ರೀತ್​ ಬುಮ್ರಾ ಮತ್ತು ದಕ್ಷಿಣ ಆಫ್ರಿಕಾದ ಬ್ಯಾಟರ್​ ಕ್ವಿಂಟನ್​ ಡಿ ಕಾಕ್ ಕಾಣಿಸಿಕೊಂಡಿದ್ದರು. ಆದರೆ ಇವರನ್ನು ಹಿಂದಿಕ್ಕಿ ರಚಿನ್​ ಈ ಪ್ರಶಸ್ತಿ ಪಡೆದಿದ್ದಾರೆ.

ಚೊಚ್ಚಲ ವಿಶ್ವಕಪ್ ಆಡುತ್ತಿರುವ ರಚಿನ್ ರವೀಂದ್ರ ಆಡಿದ ಒಂಬತ್ತು ಇನ್ನಿಂಗ್ಸ್​ನಲ್ಲಿ ಮೂರು ಶತಕ ಬಾರಿಸಿ ಮಿಂಚಿದ್ದಾರೆ. ಪ್ರಸಕ್ತ ಸಾಗುತ್ತಿರುವ ವಿಶ್ವಕಪ್​ ಪಂದ್ಯಾವಳಿಯಲ್ಲಿ ಗರಿಷ್ಠ ರನ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರಚಿನ್​ ರವೀಂದ್ರ ಅಗ್ರಸ್ಥಾನದಲ್ಲಿದ್ದಾರೆ. ಅವರು 565*ರನ್​ ಬಾರಿಸಿದ್ದಾರೆ.

ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ

ರಚಿನ್​ ರವೀಂದ್ರ(Rachin Ravindra) ಅವರಿಗೆ ಯಾರ ದೃಷ್ಟಿಯೂ ಬೀಳಬಾರದೆಂದು ಅವರ ಅಜ್ಜಿ ದೃಷ್ಟಿ ತೆಗೆದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ. ಶ್ರೀಲಂಕಾ ಎದುರಿನ ಪಂದ್ಯ ಮುಗಿದ ಬಳಿಕ ರಚಿನ್​ ಅವರು ಬೆಂಗಳೂರಿನಲ್ಲೇ ಇರುವ ತಮ್ಮ ಪ್ರೀತಿಯ ಅಜ್ಜಿ ಮನೆಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಅವರು ತಮ್ಮ ಮೊಮ್ಮಗನಿಗೆ ಯಾರ ದೃಷ್ಟಿಯೂ ಬೀಳಬಾರದು ಎಂದು ದೃಷ್ಟಿ ತೆಗೆದಿದ್ದಾರೆ. ಈ ಮುದ್ದಾದ ವಿಡಿಯೊ ಎಲ್ಲಡೆ ವೈರಲ್​ ಆಗುತ್ತಿದೆ.

Exit mobile version