ನ್ಯೂಯಾರ್ಕ್: ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ- 2022ರ ಪಂದ್ಯಾಟದಲ್ಲಿ ಸರ್ವಶ್ರೇಷ್ಠ ಆಟಗಾರ ರಾಫೆಲ್ ನಡಾಲ್ ಅವರನ್ನು ಅಮೆರಿಕದ ಫ್ರಾನ್ಸೆಸ್ ಟಿಯಾಫೊ ಅವರು ಸೋಲಿಸಿದ್ದಾರೆ. ಆ ಮೂಲಕ 23ನೇ ಗ್ರ್ಯಾನ್ ಸ್ಲಾಮ್ ಹಾಗೂ ದಾಖಲೆಯ ಐದನೇ ಯುಎಸ್ ಓಪನ್ ಟೈಟಲ್ ಗೆದ್ದುಕೊಳ್ಳುವ ಅವರ ಕನಸು ಮಣ್ಣುಗೂಡಿದೆ.
ಆರ್ಥರ್ ಆಶೆ ಸ್ಟೇಡಿಯಂನಲ್ಲಿ ನಡೆದ ರೋಚಕ ನಾಲ್ಕು ಸೆಟ್‌ಗಳ ಪಂದ್ಯಾಟದಲ್ಲಿ ನಡಾಲ್ ಅವರನ್ನು ಟಿಯಾಫೊ ಸೋಲಿಸಿದರು. 2021ರಲ್ಲಿ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ನೊವಾಕ್ ಜೊಕೊವಿಕ್ ಎದುರು ಸೋಲುಂಡ ಬಳಿಕ, ಇದು ನಡಾಲ್ ಅನುಭವಿಸುತ್ತಿರುವ ಮೊದಲ ಸೋಲಾಗಿದೆ. 6-4, 4-6, 6-4, 6-3 ಅಂತರದ ಸೆಟ್‌ಗಳಲ್ಲಿ ನಡಾಲ್ ಅವರಿಗೆ ಸೋಲಾಯಿತು.
ಟಿಯಾಫೊ, ಸ್ಪೇನ್‌ನ ಆಟಗಾರ ನಡಾಲ್ ಅವರನ್ನು ಗ್ರ್ಯಾನ್ ಸ್ಲಾಮ್‌ನಲ್ಲಿ ಸೋಲಿಸಿದ ಮೂರನೇ ಅಮೆರಿಕನ್ ಎನಿಸಿದ್ದಾರೆ. 2004ರಲ್ಲಿ ಆಂಡಿ ರೋಡಿಕ್ ಹಾಗೂ 2005ರಲ್ಲಿ ಜೇಮ್ಸ್ ಬ್ಲೇಕ್ ಇವರನ್ನು ಸೋಲಿಸಿದ್ದರು. ರೋಡಿಕ್ ಬಳಿಕ ಗ್ರ್ಯಾನ್ ಸ್ಲಾಮ್ ಕ್ವಾರ್ಟರ್ ಫೈನಲನ್ನು ಪ್ರವೇಶಿಸುತ್ತಿರುವ ಅತಿ ಕಿರಿಯ ಅಮೆರಿಕದ ಆಟಗಾರ ಕೂಡ ಟಿಯಾಫೊ ಆಗಿದ್ದಾರೆ. ಈ ಹಿಂದಿನ ಎರಡು ಮುಖಾಮುಖಿಗಳಲ್ಲಿ (2019) ನಡಾಲ್ ಅವರ ಎದುರು ಟಿಯಾಫೊ ಸೋಲುಂಡಿದ್ದರು.
ಇದನ್ನೂ ಓದಿ | Wimbeldon : ಟೂರ್ನಿಯಿಂದ ಹೊರ ನಡೆದ ನಡಾಲ್