Site icon Vistara News

French Open : ಗಾಯದ ಸಮಸ್ಯೆಯಿಂದಾಗಿ ಫ್ರೆಂಚ್ ಓಪನ್​ಗೆ ರಾಫೆಲ್ ನಡಾಲ್ ಅಲಭ್ಯ

Rafael Nadal ruled out of French Open due to injury

ನವ ದೆಹಲಿ: ಸ್ಪೇನ್​​ನ ಟೆನಿಸ್ ತಾರೆ ರಾಫೆಲ್ ನಡಾಲ್ ಅವರು ಸೊಂಟ ನೋವಿನ ಹಿನ್ನೆಲೆಯಲ್ಲಿ ಈ ವರ್ಷದ ಫ್ರೆಂಚ್ ಓಪನ್ (French Open)​ ಟೂರ್ನಿಯಿಂದ ಹೊರಗುಳಿಯುವುದಾಗಿ ಗುರುವಾರ ಖಚಿತಪಡಿಸಿದ್ದಾರೆ. ಅದೂ ಅಲ್ಲದೆ, 2024 ತಮ್ಮ ವೃತ್ತಿಪರ ಟೆನಿಸ್​ನ ಅಂತಿಮ ವರ್ಷ ಎಂಬುದಾಗಿಯೂ ಹೇಳಿದ್ದು, ನಿವೃತ್ತಿಯ ಸೂಚನೆಯನ್ನು ನೀಡಿದ್ದಾರೆ. ರಾಫೆಲ್​ ನಡಾಲ್​ 2005ರಲ್ಲಿ ಫ್ರೆಂಚ್​ ಓಪನ್​​ಗೆ (French Open) ಪದಾರ್ಪಣೆ ಮಾಡಿದ್ದು 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಡುತ್ತಿಲ್ಲ.

ನಡಾಲ್ ಜನವರಿ 18ರ ಬಳಿಕ ಟೆನಿಸ್ ಆಟದಿಂದ ದೂರವಾಗಿದ್ದರು. ರೋಲ್ಯಾಂಡ್ ಗ್ಯಾರೋಸ್​ಗೆ ಮರಳುವ ಗುರಿಯನ್ನು ಹೊಂದಿದ್ದರೂ ಬೆನ್ನು ನೋವಿನ ಸಮಸ್ಯೆ ಅವರನ್ನು ಬಿಡದೇ ಕಾಡುತ್ತಿದೆ. ಹೀಗಾಗಿ 22 ಬಾರಿ ಗ್ರ್ಯಾನ್​​ ಸ್ಲಾಮ್ ಚಾಂಪಿಯನ್ ತಾನು ಫಿಟ್​ ಆಗಿಲ್ಲ ಎಂದು ಅನಿಸಿದ್ದು ಫ್ರೆಂಚ್ ಓಪನ್​ನಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ. 36 ವರ್ಷದ ಟೆನಿಸ್ ಆಟಗಾರ ಮಾಂಟೆ-ಕಾರ್ಲೊ ಮಾಸ್ಟರ್ಸ್ ಮತ್ತು ಈ ತಿಂಗಳ ಆರಂಭದಲ್ಲಿ ನಡೆದ ಮ್ಯಾಡ್ರಿಡ್ ಮತ್ತು ರೋಮ್​ನಲ್ಲಿ ನಡೆದ ಆವೆಮಣ್ಣಿನ ಟೂರ್ನಿಗಳಲ್ಲಿ ಆಡಿರಲಿಲ್ಲ. ಇದೀಗ ಅವರು ಫ್ರೆಂಚ್ ಓಪನ್​ನಲ್ಳೂ ಆಡುತ್ತಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ.

ಗಾಯವು ನಾವು ಬಯಸಿದಂತೆ ಗುಣಮುಖವಾಗಿಲ್ಲ. ಅಂಗಣಕ್ಕೆ ಮರಳಲು ನಾವು ಸಾಕಷ್ಟು ಶ್ರಮಿಸಿದ್ದೇವೆ. ಆದರೆ ರೋಲ್ಯಾಂಡ್ ಗ್ಯಾರೋಸ್​ನಲ್ಲಿ ಆಡುವುದು ನನಗೆ ಅಸಾಧ್ಯ. ಇದ ಮುಜುಗರದ ಸಂಗತಿ ಹಾಗೂ ಕಠಿಣ ನಿರ್ಧಾರ. ಆದರೆ ನನ್ನ ದೇಹ ಒಪ್ಪದ ಕಾರಣ ಆಡದಿರಲು ತೀರ್ಮಾನಿಸಿದೆ. ಕಳೆದ ಕೆಲವು ತಿಂಗಳುಗಳ ಫಲಿತಾಂಶಗಳು ಕೆಳಮಟ್ಟದಲ್ಲಿರುವುದರಿಂದ ಮುಂದಿನ ಕೆಲವು ತಿಂಗಳುಗಳವರೆಗೆ ನಾನು ಆಡುವುದಿಲ್ಲ ಎಂದು ನಡಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇತ್ತೀಚಿನ ಕೆಲವು ವರ್ಷಗಳಲ್ಲಿ ಯಶಸ್ಸನ್ನು ಸಾಧಿಸಿದ್ದರೂ, ಕೊರೊನಾ ಸಾಂಕ್ರಾಮಿಕ ರೋಗದ ನಂತರ ತನ್ನ ಟೆನಿಸ್ ಅಟವನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ ಎಂದು ನಡಾಲ್ ಹೇಳಿದ್ದಾರೆ. 2024ರ ಋತುವಿನಲ್ಲಿ ಎಲ್ಲಾ ಪ್ರಮುಖ ಪಂದ್ಯಾವಳಿಗಳಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ ಸ್ಪೇನ್​ನ ಆಟಗಾರ ಮುಂದಿನ ವರ್ಷ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಹೇಳಿದ್ದಾರೆ.

ನಾನು ನಿರಂತರವಾಗಿ ಆಡಲು ಬಯಸುತ್ತೇನೆ. ಆದರೆ ಸತತ ಗಾಯಗಳ ನಡುವೆ ಆಡುವುದು ಜಟಿಲವಾದಾಗ ಕಾರ್ಯ. ಕಳೆದ ಕೆಲವು ತಿಂಗಳುಗಳಲ್ಲಿ ನಾನು ಟೆನಿಸ್ ಅಂಗಣಕ್ಕೆ ಹಿಂತಿರುಗಲು ಕಷ್ಟಪಟ್ಟಿದ್ದೇನೆ. ಚೇತರಿಸಿಕೊಳ್ಳಲು ಮತ್ತು ಪುನಶ್ಚೇತನಕ್ಕೆ ಸಮಯ ತೆಗೆದುಕೊಳ್ಳಲು ಬಯಸಿದ್ದೇನೆ. ನಾನು ಹಿಂದಿರುಗುವ ದಿನಾಂಕವನ್ನು ಈಗಲೇ ಹೇಳವುವುದು ಕೂಡ ಕಷ್ಟ.. ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧಗೊಂಡ ದಿನ ಆಟಕ್ಕೆ ಮರಳುತ್ತೇನೆ. ಡೇವಿಸ್ ಕಪ್ ಆಟನಲ್ಲಿ ಆಡುವುದು ಮತ್ತು 2024ರ ಋತುವನ್ನು ಉತ್ತಮವಾಗಿ ಪ್ರಾರಂಭಿಸುವುದು ನನ್ನ ಗುರಿ ಎಂದು ಚಾಂಪಿಯನ್ ಟೆನಿಸ್ ಆಟಗಾರ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Australian Open | ಆಸ್ಟ್ರೇಲಿಯಾ ಓಪನ್; ದ್ವಿತೀಯ ಸುತ್ತಿನಲ್ಲಿ ಸೋತು ಹೊರಬಿದ್ದ ರಫೆಲ್‌ ನಡಾಲ್‌!

“2024 ಬಹುಶಃ ವೃತ್ತಿಪರ ಟೆನಿಸ್​​ನಲ್ಲಿ ನನ್ನ ಕೊನೆಯ ವರ್ಷವಾಗಲಿದೆ. ಪ್ರಮುಖ ಟೂರ್ನಿಗಳಲ್ಲಿ ಆಡುವ ಮೂಲಕ ವಿದಾಯ ಹೇಳುವುದು ಮತ್ತು ಆಟವನ್ನು ಆನಂದಿಸುವುದೇ ನನ್ನ ಗುರಿ ಎಂದು” ಎಂದು ನಡಾಲ್ ಹೇಳಿದ್ದಾರೆ.

ಭರ್ಜರಿ ಸಾಧನೆ

ಪ್ಯಾರಿಸ್ ಆವೆ ಮಣ್ಣಿನ ಕೋರ್ಟ್ ಟೂರ್ನಮೆಂಟ್​ನಲ್ಲಿ ಸ್ಪೇನ್​​ನ ಈ ಚಾಂಪಿಯನ್​ ಆಟಗಾರ 18 ವರ್ಷ ಆಡಿದ್ದು, 112 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಕೇವಲ 3 ಪಂದ್ಯಗಳಲ್ಲಿ ಸೋತಿದ್ದಾರೆ. ಇದು ಯಾವುದೇ ಗ್ರ್ಯಾನ್​ ಸ್ಲಾಮ್ ಪಂದ್ಯಾವಳಿಯಲ್ಲಿ ಪುರುಷ ಅಥವಾ ಮಹಿಳೆ ಮಾಡಿರುವ ಗರಿಷ್ಠ ಸಾಧನೆಯಾಗಿದೆ. ನೊವಾಕ್ ಜೊಕೊವಿಕ್ ವಿರುದ್ಧ 2015 ಮತ್ತು 2021ರಲ್ಲಿ ಎರಡು ಸೋಲುಗಳು ಅವರಿಗೆ ಆಗಿದ್ದು, 2009 ರಲ್ಲಿ ರಾಬಿನ್ ಸೊಡರ್ಲಿಂಗ್ ವಿರುದ್ಧ ಸೋತಿದ್ದರು.

ಕಳೆದ ವರ್ಷ ನಡಾಲ್ 36ನೇ ವಯಸ್ಸಿನಲ್ಲಿ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಹಿರಿಯ ಪುರುಷರ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Exit mobile version