Site icon Vistara News

Rafael Nadal: ಆಸ್ಟ್ರೇಲಿಯಾ ಓಪನ್​ನಿಂದ ಹಿಂದೆ ಸರಿದ ರಫೆಲ್‌ ನಡಾಲ್‌

Rafael Nadal

ಫ್ರಾನ್ಸ್: ಒಂದು ವರ್ಷದ ಬಳಿಕ ಬ್ರಿಸ್ಬೇನ್ ಇಂಟರ್ನ್ಯಾಶನಲ್ ಟೂರ್ನಿಯಲ್ಲಿ ಆಡುವ ಮೂಲಕ ಟೆನಿಸ್​ಗೆ ಕಮ್​ಬ್ಯಾಕ್​ ಮಾಡಿದ್ದ ರಫೆಲ್‌ ನಡಾಲ್‌(Rafael Nadal) ಮತ್ತೆ ಗಾಯಗೊಂಡ ಪರಿಣಾಮ ಆಸ್ಟ್ರೇಲಿಯಾ ಓಪನ್(Australian Open)​ ಗ್ರ್ಯಾನ್‌ಸ್ಲಾಮ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಕಳೆದ ಒಂದು ವರ್ಷದಿಂದ ಗಾಯದ ಸಮಸ್ಯೆಯಿಂದಾಗಿ ಟೆನಿಸ್​ ಕೋರ್ಟ್​ನಿಂದ ದೂರ ಉಳಿದಿದ್ದ ಸ್ಟಾರ್‌ ಟೆನಿಸಿಗ, 22 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ನಡಾಲ್‌ ಆಸೀಸ್​ ಓಪನ್​ ಆಡುವ ನಿರೀಕ್ಷೆಯಲ್ಲಿದ್ದರು. ಆದರೆ ಇದಕ್ಕೆ ಗಾಯ ಹಿನ್ನಡೆ ಉಂಟುಮಾಡಿದೆ.

ಬ್ರಿಸ್ಬೇನ್ ಇಂಟರ್ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತ ನಂತರ ರಫೆಲ್‌ ನಡಾಲ್‌ ಮೆಡಿಕಲ್ ಟೈಮ್-ಔಟ್​ಗೆ ಒಳಗಾಗಿದ್ದರು. ಈ ವೇಳೆಯೇ ಅವರು ಆಸೀಸ್​ ಓಪನ್​ ಆಡುವುದು ಅನುಮಾನ ಎನ್ನಲಾಗಿತ್ತು. ಇದೀಗ ಅಧಿಕೃತವಾಗಿದೆ.

“ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯದ ಸಮಯದಲ್ಲಿ ನನಗೆ ಸಣ್ಣ ಮಟ್ಟದ ಸ್ನಾಯು(muscle tear) ನೋವು ಇತ್ತು. ಅದು ನನ್ನ ಗಮನಕ್ಕೆ ಬಂದಾಗಲೇ ನಾನು ಚಿಂತೆ ಪಟ್ಟಿದ್ದೆ. ನಾನು ಮೆಲ್ಬೋರ್ನ್‌ಗೆ ಬಂದ ನಂತರ ಎಂಐಆರ್​ ಸ್ಕ್ಯಾನ್​ ಮಾಡಿದೆ. ಸದ್ಯ ನಾನು 5 ಸೆಟ್‌ಗಳ ಪಂದ್ಯಗಳಲ್ಲಿ ಗರಿಷ್ಠ ಮಟ್ಟದ ಎಕ್ಸಿಜೆನ್ಸ್‌ನಲ್ಲಿ ಸ್ಪರ್ಧಿಸಲು ಸಿದ್ಧನಿಲ್ಲ. ಹೀಗಾಗಿ ನಾನು ಆಸ್ಟ್ರೇಲಿಯಾ ಓಪನ್​ನಿಂದ ಹಿಂದೆ ಸರಿಯಲಿದ್ದೇನೆ” ಎಂದು ನಡಾಲ್​ ಟ್ವಿಟರ್​ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ Rafael Nadal: ಇನ್ಫೋಸಿಸ್​ಗೆ ಟೆನಿಸ್​ ದಿಗ್ಗಜ ರಫೆಲ್‌ ನಡಾಲ್‌​ ರಾಯಭಾರಿ

ಸೊಂಟ ನೋವಿನ ಗಾಯಕ್ಕೆ ತುತ್ತಾಗಿದ್ದ ನಡಾಲ್ ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಗಾಯದ ಮಧ್ಯೆಯೂ ಚುಚ್ಚು ಮದ್ದು ಬಳಸಿ ಕಣಕ್ಕಿಳಿದಿದ್ದರು. ಆದರೆ ಎರಡನೇ ಸುತ್ತಿನಲ್ಲಿ ಸೋಲು ಕಂಡಿದ್ದರು. ಇದಾದ ಬಳಿಕ ಅವರು ಸರಿ ಸುಮಾರು ಒಂದು ವರ್ಷ ಯಾವುದೇ ಟೆನಿಸ್​ ಟೂರ್ನಿ ಆಡಿರಲಿಲ್ಲ. ಈ ವರ್ಷದ ಮೊದಲ ಟೂರ್ನಿಯಲ್ಲಿ ಟೆನಿಸ್​ ಕೋರ್ಟ್​ಗೆ ಮರಳಿದರೂ ಅವರಿಗೆ ಮತ್ತೆ ಗಾಯದ ಸಮಸ್ಯೆ ಕಾಡಿದೆ.

ನಿವೃತ್ತಿ ಘೋಷಿಸಲು ಬಯಸುವುದಿಲ್ಲ

37 ವರ್ಷದ ನಡಾಲ್ ನಾನು ಈಗಲೇ ನಿವೃತ್ತಿ ಘೋಷಿಸಲು ಬಯಸುವುದಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು. ‘ಮುಂದೆ ಏನಾಗಬಹುದೆಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾನೇ ನನಗೊಂದು ಅವಕಾಶ ನೀಡಬೇಕಿದೆ. ಹಿಂದೆಯೂ ಅನೇಕ ಸಲ ಗಾಯದಿಂದ ತೇಚರಿಸಿ ಟೆನಿಸ್​ ಅಂಗಳಕ್ಕೆ ಮರಳಿ ಟ್ರೋಫಿ ಗೆದ್ದಿದ್ದೇನೆ. ದೈಹಿಕವಾಗಿ ನಾನು ಗಟ್ಟಿಯಾಗಿದ್ದು ಆಡುವ ಮನಸ್ಸು ಇದ್ದಾಗ ನಾನೇಕೆ ಈಗಲೇ ನಿವೃತ್ತಿಗೆ ಕಾಲ ನಿಗದಿಪಡಿಸಲಿ” ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸದ್ಯಕ್ಕಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು. ಆದರೆ ಅವರನ್ನು ಗಾಯ ಬೆನ್ನು ಬಿಡುವಂತೆ ತೋರುತ್ತಿಲ್ಲ ಹೀಗಾಗಿ ಅವರು ಮುಂದಿನ ದಿನಗಳಲ್ಲಿ ವಿದಾಯ ಘೋಷಿಸಿದರೂ ಅಚ್ಚರಿಯಿಲ್ಲ.

Exit mobile version