ಲಂಡನ್: ಗಾಯದ ಸಮಸ್ಯೆಗೆ ಸಿಲುಕಿದ ೨2 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳ ವಿಜೇತ ರಾಫೆಲ್ ನಡಾಲ್ ಗಾಯದ ಸಮಸ್ಯೆಯಿಂದಾಗಿ ಪ್ರತಿಷ್ಠಿತ Wimbeldon ಟೂರ್ನಿಯಿಂದ ಹೊರಕ್ಕೆ ನಡೆದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ಹಾಗೂ ನಡಾಲ್ ನಡುವಿನ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್ ಪಂದ್ಯ ರದ್ದಾಯಿತು. ವಾಕ್ ಓವರ್ ಪಡೆದ ಕಿರ್ಗಿಯೋಸ್ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಸ್ಪೇನ್‌ನ ಶ್ರೇಷ್ಠ ಆಟಗಾರ ನಡಾಲ್ ಅವರು ಟೇಲರ್ ಫ್ರಿಟ್ಜ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಹೊಟ್ಟೆಯ ಮಾಂಸಖಂಡದ ಗಾಯಕ್ಕೆ ಒಳಗಾಗಿದ್ದರು. ಆ ಪಂದ್ಯ ಗೆದ್ದಿದ್ದ ನಡಾಲ್ ಸೆಮಿಫೈನಲ್‌ನಲ್ಲಿ ಆಡುವುದಾಗಿ ಹೇಳಿಕೊಂಡಿದ್ದರು. ಆದರೆ, ಸೆಮಿಫೈನಲ್ ಪಂದ್ಯದ ಮೊದಲು ತಾವು ಆಡುವುದಿಲ್ಲ ಎಂದು ಘೋಷಿಸಿದರು.
ರಾಫೆಲ್ ನಡಾಲ್ ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಆಸ್ಟ್ರೇಲಿಯಾ ಓಪನ್‌ನಲ್ಲಿ ಗೆಲುವು ಸಾಧಿಸಿದ್ದರು. ಫ್ರೆಂಚ್ ಓಪನ್‌ನಲ್ಲೂ ಜಯ ಸಾಧಿಸಿರುವರ ಅವರು ವಿಂಬಲ್ಡನ್‌ನಲ್ಲೂ ಗೆಲ್ಲುವ ಅವಕಾಶ ಹೊಂದಿದ್ದರು. ಇದನ್ನೂ ಗೆದ್ದಿದ್ದರೆ, ಯುಎಸ್ ಓಪನ್‌ನಲ್ಲಿ ಗೆದ್ದು ಕ್ಯಾಲೆಂಡರ್ ಗ್ರ್ಯಾನ್‌ಸ್ಲಾಮ್ ಗೆಲ್ಲುವ ಅವಕಾಶ ಹೊಂದಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಎಲ್ಲ ಅವಕಾಶಗಳನ್ನು ಕಳೆದುಕೊಂಡಂತಾಗಿದೆ.
ರಾಫೆಲ್ ನಡಾಲ್ ಅವರು ಕಳೆದ ಆವೃತ್ತಿಯ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ವೇಳೆ ಪಾದದ ಗಾಯಕ್ಕೆ ಒಳಗಾಗಿದ್ದರು. ಬಳಿಕ ಎರಡು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಪಾಲ್ಗೊಂಡಿರಲಿಲ್ಲ. ಸುಮಾರು ನಾಲ್ಕು ತಿಂಗಳ ಕಾಲ ಸುಧಾರಿಸಿಕೊಂಡು ಬಂದ ಅವರು ಆಸ್ಟ್ರೇಲಿಯಾ ಓಪನ್‌ನಲ್ಲಿ ಜಯದ ಅಭಿಯಾನ ಆರಂಭಿಸಿದ್ದರು.
ಕಿರ್ಗಿಯೋಸ್, ಜೋಕೊ ಫೈಟ್
ಶುಕ್ರವಾರ ನಿಕ್ ಕಿರ್ಗಿಯೋಸ್ ಹಾಗೂ ನೊವಾಕ್ ಜೊಕೊವಿಕ್ ನಡುವೆ ಪುರುಷರ ಸಿಂಗಲ್ಸ್ ಫೈಟ್ ನಡೆಯಲಿದೆ. ನಿಕ್ ಕಿರ್ಗಿಯೋಸ್‌ಗೆ ಇದು ಮೊದಲ ಗ್ರ್ಯಾನ್ ಸ್ಲಾಮ್ ಫೈನಲ್. ಹೀಗಾಗಿ ಗೆಲುವಿಗಾಗಿ ಎಲ್ಲ ಪ್ರಯತ್ನ ನಡೆಸಲಿದ್ದು, ನೊವಾಕ್‌ಗೆ ಭರ್ಜರಿ ಪೈಪೋಟಿ ನೀಡುವ ಸಾಧ್ಯತೆಗಳಿವೆ.
ಅತ್ತ ನೊವಾಕ್ ಜೊಕೊವಿಕ್ ಕಳೆದ ಆವೃತ್ತಿಯ ಯುಎಸ್ ಓಪನ್‌ನಲ್ಲಿ ಸೋತು ಕ್ಯಾಲೆಂಡರ್ ಗ್ರ್ಯಾನ್ ಸ್ಲಾಮ್ ಗೆಲ್ಲುವ ಅವಕಾಶ ಕಳೆದುಕೊಂಡಿದ್ದರು. ಜತೆಗೆ ವ್ಯಾಕ್ಸಿನ್ ಕಾರಣಕ್ಕೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ಫ್ರೆಂಚ್ ಓಪನ್‌ನಲ್ಲಿ ನಡಾಲ್ ವಿರುದ್ಧದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಮಣಿದಿದ್ದರು. ಹೀಗಾಗಿ ಅವರಿಗೆ ೨೧ನೇ ಪ್ರಶಸ್ತಿ ಗೆಲ್ಲುವ ಅವಕಾಶ ಸೃಷ್ಟಿಯಾಗಿದೆ.
ಇನ್ನೂ ಓದಿ: ಟೆನಿಸ್ ಆಟಗಾರ್ತಿಗೆ ಕೋರ್ಟ್‌ನಲ್ಲೇ Bra ಬದಲಿಸಲು ಹೇಳಿದ ಆಯೋಜಕರು