ಬಾರ್ಬಡೋಸ್: ನಾಯಕನಾಗಿ ಗೆಲ್ಲಲಾಗದ ವಿಶ್ವಕಪ್(T20 World Cup 2024) ಟ್ರೋಫಿಯನ್ನು ರಾಹುಲ್ ದ್ರಾವಿಡ್(Rahul Dravid) ಕೊನೆಗೂ ಭಾರತ ತಂಡದ ತರಬೇತುದಾರಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ. ಈ ಗೆಲುವನ್ನು ಆಟಗಾರರಿಗಿಂತ ದ್ರಾವಿಡ್ ಅವರೇ ಹೆಚ್ಚಾಗಿ ಸಂಭ್ರಮಿಸಿದರು. ಅಲ್ಲದೆ ಭಾವುಕರಾಗಿಯೂ ಕಂಡು ಬಂದರು.
ಶಾಂತ ಸ್ವಾಭಾವದ ದ್ರಾವಿಡ್ ಅವರು ವಿಶ್ವಕಪ್ ಎತ್ತಿ ಹಿಡಿಯುವ ವೇಳೆ ಅವರ ಸಂತಸಕ್ಕೆ ಪಾರತವೇ ಇರಲಿಲ್ಲ. ಅತ್ಯಂತ ಜೋಶ್ನಿಂದಲೇ ಕಿರುಚುತ್ತಾ ಕಪ್ ಮೇಲೆತ್ತಿ ತಾನು ಕೂಡ ಆಟಗಾರನಂತೆ ಈ ಗೆಲುವನ್ನು ಸಂಭ್ರಮಿಸಿದರು. ಆಟಗಾರರ ಜತೆಗೂ ಈ ಸಂಭ್ರಮ ಕಂಡು ಬಂತು. ಒಟ್ಟಾರೆಯಾಗಿ ಇದು ಅವರಿಗೆ ಸ್ಮರಣೀಯ ಬೀಳ್ಕೊಡುಗೆ ಸಮಾರಂಭವಾಗಿತ್ತು. ಆಟಗಾರರು ಕೂಡ ಡ್ರಾವಿಡ್ ಅವರನ್ನು ಮಗುವಿನಂತೆ ಮೇಲೆತ್ತಿ ಸಂಭ್ರಮಿಸಿದರು. ಈ ವಿಡಿಯೊ ವೈರಲ್ ಆಗಿದೆ.
1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್ ದ್ರಾವಿಡ್ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಆದರೆ ವಿಶ್ವಕಪ್ ಎನ್ನುವುದು ಅವರಿಗೆ ಕನಸಾಗಿತ್ತು. ಈ ಕೊರಗು ಕೂಡ ಅವರಲ್ಲಿತ್ತು. ಇದೀಗ ನಾಯಕನಾಗಿ, ಆಟಗಾರನಾಗಿ ಗೆಲ್ಲಲಾಗದ ವಿಶ್ವಕಪ್ ಅನ್ನು ತರಬೇತುದಾರನಾಗಿ ಗಳಿಸಿಕೊಂಡಿದ್ದಾರೆ.
ಇದನ್ನೂ ಓದಿ T20 World Cup final: ತ್ರಿವರ್ಣ ಧ್ವಜ ಹಿಡಿದು ಜಮ್ಮು-ಕಾಶ್ಮೀರದಲ್ಲಿ ಮೊಳಗಿದ ವಿಜಯೋತ್ಸವ
2007ರಲ್ಲಿ ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಿಂದಲೇ ನಿರ್ಗಮಿಸಿತ್ತು. ದುರ್ಬಲ ಬಾಂಗ್ಲಾದೇಶ ವಿರುದ್ದವೂ ಕೂಡ ಗೆಲುವು ಸಾಧಿಸಲು ಸಾಧ್ಯವಾಗ ಅವಮಾನಕ್ಕೆ ಸಿಲುಕಿತ್ತು. ಅಂದು ಅವಮಾನ ಎದುರಿಸಿದ ವಿಂಡೀಸ್ ನೆಲದಲ್ಲೇ ಇದೀಗ ದ್ರಾವಿಡ್ ತರಬೇತುದಾರನಾಗಿ ಕಪ್ ಗೆದ್ದು ಸಂಭ್ರಮಿಸಿದ್ದಾರೆ.
2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ರಾಹುಲ್ ದ್ರಾವಿಡ್ಗೆ ಕೋಚ್ ಆಗಿ ಮೊದಲ ಸವಾಲಾಗಿತ್ತು. ಇಲ್ಲಿ ಕಪ್ ಗೆಲ್ಲಲು ತಂಡ ವಿಫಲವಾಗಿತ್ತು. ಬಳಿಕ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ನಲ್ಲಿಯೂ ಭಾರತ ಫೈನಲ್ನಲ್ಲಿ ಸೋಲು ಕಂಡಿತ್ತು. ನಿರ್ಗಮನದ ಹಂತದಲ್ಲಿ ಕೊನೆಗೂ ಕಪ್ ಗೆದ್ದ ಖಷಿ ಅವರಿಗೆ ಲಭಿಸಿದೆ. ಜತೆಗೆ ಅವರ ಈ ಕನಸು ನೆರವೇರಲೆಂದು ಪ್ರಾರ್ಥಿಸಿಸಿದ ಕೊಟ್ಯಂತರ ಅಭಿಮಾನಿಗಳ ಹಾರೈಕೆ ಕೂಡ ಫಲಿಸಿದೆ.
ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ 7 ರನ್ ಅಂತರದಿಂದ ಗೆದ್ದು 17 ವರ್ಷಗಳ ಬಳಿಕ 2ನೇ ಟಿ20 ವಿಶ್ವಕಪ್ ಎತ್ತಿ ಹಿಡಿಯಿತು.