Site icon Vistara News

Rahul Gandhi: ಬಜರಂಗ್‌ ಪೂನಿಯಾ ಜತೆ ರಾಹುಲ್‌ ಗಾಂಧಿ ಕುಸ್ತಿ; ಗೆದ್ದಿದ್ದು ಯಾರು?

Rahul Gandhi And Bajrang Punia

Rahul Gandhi at wrestlers' akhara In Haryana, interacts with Bajrang Punia amid WFI row

ಚಂಡೀಗಢ: ಭಾರತೀಯ ಕುಸ್ತಿ ಫೆಡರೇಷನ್‌ (WFI) ವಿವಾದ, ಡಬ್ಲ್ಯೂಎಫ್‌ಐ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಸಿಂಗ್‌ (Brij Bhushan Singh) ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷಿ ಮಲಿಕ್‌, ಬಜರಂಗ್‌ ಪೂನಿಯಾ ಸೇರಿ ಹಲವರು ಪ್ರಶಸ್ತಿ ಹಿಂತಿರುಗಿಸಿದ ಬೆನ್ನಲ್ಲೇ ಹರಿಯಾಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಬಜರಂಗ್‌ ಪೂನಿಯಾ (Bajrang Punia) ಸೇರಿ ಹಲವು ಕುಸ್ತಿಪಟುಗಳನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಅವರು ಬಜರಂಗ್‌ ಪೂನಿಯಾ ಜತೆ ಕುಸ್ತಿ ಆಡಿದ್ದಾರೆ. ಈ ಫೋಟೊಗಳನ್ನು ರಾಹುಲ್‌ ಗಾಂಧಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ.

ಡಬ್ಲ್ಯೂಎಫ್‌ಐ ವಿವಾದಕ್ಕೆ ಸಂಬಂಧಿಸಿದಂತೆ ಬಜರಂಗ್‌ ಪೂನಿಯಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಘೋಷಿಸಿದ್ದಾರೆ. ವಿನೇಶ್‌ ಫೋಗಟ್‌ ಅವರು ಕೂಡ ಖೇಲ್‌ ರತ್ನ ಹಾಗೂ ಅರ್ಜುನ ಪ್ರಶಸ್ತಿ ಹಿಂತಿರುಗಿಸುವ ಘೋಷಣೆ ಮಾಡಿದ್ದಾರೆ. ಸಾಕ್ಷಿ ಮಲಿಕ್‌ ಅವರು ಕುಸ್ತಿಯಿಂದಲೇ ನಿವೃತ್ತರಾಗುವುದಾಗಿ ಹೇಳಿದ್ದಾರೆ. ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರು ಹರಿಯಾಣದ ಜಜ್ಜರ್‌ ಜಿಲ್ಲೆಯಲ್ಲಿರುವ ವೀರೇಂದ್ರ ಆರ್ಯ ಅಖಾಡಕ್ಕೆ ಭೇಟಿಯಾಗಿ ಕುಸ್ತಿಪಟುಗಳೊಂದಿಗೆ ಚರ್ಚಿಸಿದರು. ಹಾಗೆಯೇ ಅವರು ಬಜರಂಗ್ ಪೂನಿಯಾ ಅವರ ಜತೆ ಕುಸ್ತಿ ಆಡಿದರು.

ರಾಹುಲ್‌ ಗಾಂಧಿ ಭೇಟಿ ಕುರಿತು ಬಜರಂಗ್‌ ಪೂನಿಯಾ ಪ್ರತಿಕ್ರಿಯಿಸಿದ್ದಾರೆ. “ರಾಹುಲ್‌ ಗಾಂಧಿ ಅವರು ವೀರೇಂದ್ರ ಆರ್ಯ ಅಖಾಡಕ್ಕೆ ಭೇಟಿ ನೀಡಿ, ಕುಸ್ತಿಪಟುಗಳ ಜತೆ ಚರ್ಚಿಸಿದರು. ಕುಸ್ತಿ ಕುರಿತು ಮಾಹಿತಿ ಪಡೆದ ಅವರು ಕೆಲಹೊತ್ತು ವ್ಯಾಯಾಮ ಮಾಡಿ, ಕುಸ್ತಿ ಆಡಿದರು. ಅಲ್ಲದೆ, ಕುಸ್ತಿಪಟುವಿನ ನಿತ್ಯದ ಚಟುವಟಿಕೆಗಳು ಏನಿರುತ್ತವೆ, ಅವರ ಪರಿಶ್ರಮ ಹೇಗಿರುತ್ತದೆ ಎಂಬುದನ್ನು ತಿಳಿದುಕೊಂಡರು” ಎಂದು ಮಾಹಿತಿ ನೀಡಿದರು. ಅಲ್ಲದೆ, ಕುಸ್ತಿ ಆಡುವ ಫೋಟೊಗಳನ್ನು ಶೇರ್‌ ಮಾಡುವ ಜತೆಗೆ, ಕುಸ್ತಿಪಟುಗಳ ಪರಿಶ್ರಮ, ಅವರು ಹೇಗೆ ದೇಶಕ್ಕೆ ಪದಕ ಗೆಲ್ಲುತ್ತಾರೆ, ಅವರ ತ್ಯಾಗ ಏನು ಎಂಬುದರ ಕುರಿತು ರಾಹುಲ್‌ ಗಾಂಧಿ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ಕುಸ್ತಿಪಟುಗಳಿಗೆ ಅನ್ಯಾಯ ಆಗಿದೆ ಎಂದು ಕೂಡ ಅವರ ಪರ ಧ್ವನಿ ಎತ್ತಿದರು.

ಇದನ್ನೂ ಓದಿ: ಕುಸ್ತಿ ಫೆಡರೇಶನ್ ಅಮಾನತು ಮಾಡಿದರೂ ಹೊಸ ಕ್ಯಾತೆ ತೆಗೆದ ಸಾಕ್ಷಿ ಮಲಿಕ್

ಭಾರತೀಯ ಕುಸ್ತಿ ಫೆಡರೇಷನ್‌ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂಜಯ್‌ ಸಿಂಗ್‌ ಆಯ್ಕೆಯಾಗಿರುವುದಕ್ಕೆ ಸಾಕ್ಷಿ ಮಲಿಕ್‌ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಭಾರತೀಯ ಕುಸ್ತಿ ಫೆಡರೇಷನ್‌ಅನ್ನು ಕೇಂದ್ರ ಸರ್ಕಾರ ಅಮಾನತುಗೊಳಿಸಿದೆ. ಇದಾದ ಬಳಿಕವೂ ಕುಸ್ತಿಪಟುಗಳು ಪ್ರಶಸ್ತಿ ವಾಪಸ್‌ ನೀಡುವ ಘೋಷಣೆ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಹಲವು ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಪ್ರತಿಪಕ್ಷಗಳ ನಾಯಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version