ಕೊಲ್ಕತ್ತಾ: ನಗರದ ಈಡನ್ ಗಾರ್ಡನ್ ಮೈದಾನದಲ್ಲಿ ಬುಧವಾರ ಸಂಜೆ 7.30ಕ್ಕೆ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಎಲಿಮಿನೇಟರ್ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ.
ಐಪಿಎಲ್ 15ನೇ ಆವೃತ್ತಿಯ ಪ್ಲೇಆಫ್‌ನ ಎಲಿಮಿನೇಟರ್ ಹಾಗೂ 2ನೇ ಕ್ವಾಲಿಫೈಯರ್ ಪಂದ್ಯಗಳಿಗೆ ಮಳೆಯಿಂದ ಅಡಚಣೆಯಾಗುವ ಸಾಧ್ಯತೆ ಇದೆ. ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಪಂದ್ಯ ಯಶಸ್ವಿಯಾಗಿ ಮುಗಿದಿದೆ. ಆದರೆ ಇಂದು ಮಧ್ಯಾಹ್ಮ 3 ರಿಂದ ರಾತ್ರಿ 8 ಗಂಟೆವರೆಗೆ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಆರ್‌ಸಿಬಿ ಪಾಲಿಗೆ ಇದು ಕಂಟಕವಾಗಲಿದೆ.
ಈ ಪಂದ್ಯದಲ್ಲಿ ಗೆದ್ದ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಲಿದೆ. ಏಕೆಂದರೆ ಫ್ಲೇಆಪ್ ಪಂದ್ಯಗಳಿಗೆ ಬಿಸಿಸಿಐ ಮಾರ್ಗಸೂಚಿ ಪ್ರಕಟಿಸಿದೆ. ಇದರಲ್ಲಿ ಮೊದಲ ಮೂರು ಪಂದ್ಯಗಳಿಗೆ ಮೀಸಲು ದಿನ ಇಲ್ಲ. ಬದಲಾಗಿ ಆಯಾ ದಿನವೇ ಪಂದ್ಯದ ಫಲಿತಾಂಶ ನಿಗದಿಪಡಿಸಲಾಗುತ್ತದೆ. ಆರ್‌ಸಿಬಿ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ನಡುವಿನ ಎಲಿಮಿನೇಟರ್ ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ ಮೊದಲಿರುವ ಅಂದರೆ ಲಕ್ನೋ ಸೂಪರ್‌ಜೈಂಟ್ಸ್(3ನೇ ಸ್ಥಾನ) ಮುಂದಿನ ಹಂತಕ್ಕೇರಲಿದೆ. ಇದರಿಂದ ನಾಲ್ಕನೇ ಸ್ಥಾನದಲ್ಲಿರುವ ಆರ್‌ಸಿಬಿ ಪ್ಲೇಆಫ್‌ನಿಂದ ನಿರ್ಗಮಿಸಲಿದೆ.
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 71 ಪಂದ್ಯಗಳು ನಡೆದಿದ್ದರೂ ಯಾವ ಪಂದ್ಯವೂ ಮಳೆಯಿಂದ ರದ್ದಾಗಿರಲಿಲ್ಲ. ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಕಳೆದ ವಾರ ನಡೆದ ಪಂದ್ಯದ ಕೊನೆಯ ಹಂತದಲ್ಲಿ ಮಳೆ ಬಂದರೂ ಮ್ಯಾಚ್‌ಗೆ ಅಡಚಣೆಯಾಗಿರಲಿಲ್ಲ. ಬುಧವಾರ ಒಂದು ವೇಳೆ ಮಳೆ ಸುರಿದರೂ 30 ನಿಮಿಷಗಳಲ್ಲಿ ಪಂದ್ಯ ನಡೆಸಲು ಕ್ರೀಡಾಂಗಣ ಸಿದ್ಧಗೊಳ್ಳಲಿದೆ. ಈಡನ್ ಗಾರ್ಡನ್‌ನಲ್ಲಿ ಉತ್ತಮ ಡ್ರೈನೇಜ್ ವ್ಯವಸ್ಥೆ ಇದೆ. ಆದರೂ ಪಂದ್ಯ ರದ್ದಾದರೆ ಈ ಕೆಳಗಿನ ಮಾರ್ಗಸೂಚಿಯಂತೆ ಪಂದ್ಯದ ಫಲಿತಾಂಶ ನಿರ್ಧರಿಸಲಾಗುತ್ತದೆ.
ಹೊಸ ಮಾರ್ಗಸೂಚಿ ಹೀಗಿದೆ:
1. ಮೊದಲ ಮೂರು ಪಂದ್ಯಗಳಿಗೆ ಹೆಚ್ಚುವರಿ 2 ಗಂಟೆ ಸಮಯ ನಿಗದಿಪಡಿಸಲಾಗಿದೆ. ಮಳೆಯಿಂದ ಈ ಪಂದ್ಯಗಳು ವಿಳಂಬವಾದರೆ ರಾತ್ರಿ 9.40ಕ್ಕೆ ಪಂದ್ಯ ಆಯೋಜಿಸಲಾಗುತ್ತದೆ.
- ಈ ವೇಳೆಯೂ ಮಳೆಯಿಂದ ಅಡಚಣೆಯಾದರೆ 5 ಓವರ್‌ಗಳ ಇನ್ನಿಂಗ್ಸ್ ಇರಲಿದೆ. ಈ ಪಂದ್ಯಕ್ಕೆ ರಾತ್ರಿ 11.56ರವರೆಗೆ ಸಮಯಾವಕಾಶ ಇರಲಿದೆ.
- 5 ಓವರ್‌ಗಳ ಪಂದ್ಯಕ್ಕೆ ಟೈಮ್ ಔಟ್ ಇರುವುದಿಲ್ಲ. ಹಾಗೆಯೇ ರಾತ್ರಿ 12.50ರೊಳಗೆ ಪಂದ್ಯ ಮುಗಿಯಬೇಕು.
- ರಾತ್ರಿ 12.50ರೊಳಗೆ ಪಂದ್ಯ ಮುಗಿಯದಿದ್ದರೆ ಸೂಪರ್ ಓವರ್ ಆಡಿಸಲಾಗುತ್ತದೆ.
- ಇನ್ನು ಸೂಪರ್ ಓವರ್ ಆಟ ಸಾಧ್ಯವಾಗದಿದ್ದರೆ ಪಂದ್ಯ ರದ್ದಾಗಲಿದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲಿರುವ ತಂಡ ಮುಂದಿನ ಸುತ್ತಿಗೆ ಅರ್ಹವಾಗುತ್ತದೆ.
ಇದನ್ನು ಓದಿ | IPL 2022 | ಕಿಲ್ಲರ್ ಮಿಲ್ಲರ್! ಫೈನಲ್ ತಲುಪಿದ ಗುಜರಾತ್