Site icon Vistara News

IPL 2023 : ಮತ್ತೆ ಧೋನಿ ಬಳಗವನ್ನು 32 ರನ್​ಗಳಿಂದ ಮಣಿಸಿದ ರಾಜಸ್ಥಾನ್​ ರಾಯಲ್ಸ್​

Rajasthan Royals beat MS Dhoni's men by 33 runs

#image_title

ಜೈಪುರ: ತವರಿನ ಅಭಿಮಾನಿಗಳ ಮುಂದೆ ಅಬ್ಬರದ ಪ್ರದರ್ಶನ ನೀಡಿದ ರಾಜಸ್ಥಾನ್​ ರಾಯಲ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ 37ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 32 ರನ್​ಗಳ ಸುಲಭ ಗೆಲುವು ಸಾಧಿಸಿತು. ಈ ಮೂಲಕ ಸತತ ಎರಡು ಪಂದ್ಯಗಳ ಸೋಲಿನ ಬಳಿಕ ಸಂಜು ಸ್ಯಾಮ್ಸನ್​ ನಾಯಕತ್ವದ ರಾಜಸ್ಥಾನ್​ ತಂಡ ಗೆಲುವಿನ ಹಳಿಗೆ ಮರಳಿತು. ಅತ್ತ ಹ್ಯಾಟ್ರಿಕ್ ಗೆಲುವಿನ ಖುಷಿಯಲ್ಲಿದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸೋಲಿನ ರುಚಿ ಕಾಣುವಂತಾಯಿತು. ಯವ ಬ್ಯಾಟರ್ ಯಶಸ್ವಿ ಜೈಸ್ವಾಲ್​ (77) ಅವರ ಅಮೋಘ ಅರ್ಧ ಶತಕ ಬಾರಿಸುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡರು.

ಸವಾಯ್​ ಮಾನ್​ ಸಿಂಗ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ರಾಜಸ್ಥಾನ್ ತಂಡ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ಗೆ 202 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಸಿಎಸ್​ಕೆ ಬಳಗ ತನ್ನ ಪಾಲಿನ 20 ಓವರ್​​ಗಳಲ್ಲಿ 6 ವಿಕೆಟ್​ಗೆ 170 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಚೆನ್ನೈ ತಂಡ ಉತ್ತಮ ಆರಂಭ ಪಡೆಯಲಿಲ್ಲ. 41 ರನ್​ಗಳಿಗೆ ಒಂದು ವಿಕೆಟ್ ಕಳೆದುಕೊಂಡಿತು. ಡೇವೋನ್​ ಕಾನ್ವೆ 8 ರನ್​​ಗಳಿಗೆ ವಿಕೆಟ್ ಒಪ್ಪಿಸಿದರೆ ಋತುರಾಜ್ ಗಾಯಕ್ವಾಡ್​ 47 ರನ್​ಗಳಿಗೆ ಔಟಾದರು. ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಪರಿಣಾಮ ಬೀರಲಿಲ್ಲ. 13 ಎಸೆತಕ್ಕೆ 15 ರನ್​ ಬಾರಿಸಿ ಔಟಾದರು. ಅಂಬಾಟಿ ರಾಯುಡು ಶೂನ್ಯಕ್ಕೆ ಮರಳಿದರು. ಮಧ್ಯಮ ಕ್ರಮಾಂದಕದಲ್ಲಿ ಶಿವಂ ದುಬೆ 33 ಎಸೆತಗಳಲ್ಲಿ 52 ರನ್ ಬಾರಿಸಿದರೂ ಗೆಲುವ ತಂದುಕೊಡಲು ಅವರಿಗೆ ಸಾಧ್ಯವಾಗಲಿಲ್ಲ. ಮೊಯೀನ್ ಅಲಿ 23 ರನ್ ಬಾರಿಸಿದರೆ ರವೀಂದ್ರ ಜಡೇಜಾ ಅಷ್ಟೇ ರನ್​ ಕೊಡುಗೆ ಕೊಟ್ಟರು.

ರಾಜಸ್ಥಾನ್​ ಬೌಲಿಂಗ್ ಪರ ಸ್ಪಿನ್ನರ್ ಆ್ಯಡಂ ಜಂಪಾ 3 ವಿಕೆಟ್​ ಪಡೆದರೆ ರವಿಚಂದ್ರನ್ ಅಶ್ವಿನ್ 2 ವಿಕೆಟ್​ ಕಬಳಿಸಿದರು. ಕುಲ್ದೀಪ್ ಯಾದವ್​ 1 ವಿಕೆಟ್​ ತಮ್ಮದಾಗಿಸಿಕೊಂಡರು.

ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್​ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಜೋಸ್​ ಬಟ್ಲರ್​ ಹಾಗೂ ಯಶಸ್ವಿ ಜೈಸ್ವಾಲ್​ ಮೊದಲ ವಿಕೆಟ್​ಗೆ 81 ರನ್ ಗಳಿಸಿದರು. ಆದರೆ, ನಿಧಾನಗತಿಯಲ್ಲಿ ಆಡಿದ ಬಟ್ಲರ್​ 21 ಎಸೆತಗಳಲ್ಲಿ 27 ರನ್​ ಬಾರಿಸಿ ಔಟಾದರು. ಯುವ ಬ್ಯಾಟರ್​ ಜೈಸ್ವಾಲ್​ 26 ಎಸೆತಗಳಲ್ಲಿ ಅರ್ಧ ಶತಕ ಬಾರಿಸುವ ಜತೆಗೆ 43 ಎಸೆತಗಳಲ್ಲಿ 77 ರನ್​ ಕಲೆ ಹಾಕಿದರು. ಆದರೆ, ತುಷಾರ್​ ದೇಶಪಾಂಡೆ ಎಸೆತಕ್ಕೆ ರಹಾನೆಗೆ ಕ್ಯಾಚ್ ನೀಡಿ ಔಟಾದರು.

ನಾಯಕ ಸಂಜು ಸ್ಯಾಮ್ಸನ್​ ಕೂಡ 17 ರನ್​ಗಳಿಗೆ ಸೀಮಿತಗೊಂಡರು. ನಂತದ ಬಂದ ವಿಂಡೀಸ್ ಸ್ಫೋಟಕ ಬ್ಯಾಟರ್​​ ಶಿಮ್ರೋನ್ ಹೆಟ್ಮಾಯರ್​ 8 ರನ್​​ಗಳಿಗೆ ವಿಕೆಟ್​ ಒಪ್ಪಿಸಿದರು. ಈ ಇಬ್ಬರು ನಿಧಾನಗತಿಯಲ್ಲಿ ಆಡಿದ ಕಾರಣ ತಂಡದ ರನ್​ ಗಳಿಕೆ ವೇಗ ಕಡಿಮೆಯಾಯಿತು. ಈ ವೇಳೆ ಜತೆಯಾದ ದ್ರುವ್ ಜುರೇಲ್​ ಹಾಗೂ ದೇವದತ್​ ಪಡಿಕ್ಕಲ್​ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಜುರೆಲ್​ 15 ಎಸೆತಗಳಲ್ಲಿ 32 ರನ್ ಗಳಿಸಿದರೆ, ಪಡಿಕ್ಕಲ್​ 13 ಎಸೆತಗಳಲ್ಲಿ 27 ರನ್​ ಕಲೆ ಹಾಕಿದರು.

Exit mobile version