Site icon Vistara News

Ram Mandir: ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಕ್ರಿಕೆಟ್ ದಿಗ್ಗಜ ಸಚಿನ್‌!

Tendulkar recieves invitation for 'Pran Pratishtha' ceremony

ಮುಂಬಯಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇವೆ. ಪ್ರಮುಖ ಆಯ್ದ ಗಣ್ಯರಿಗೆ ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ನೀಡಲಾಗುತ್ತಿದೆ. ಇದೀಗ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ, ಭಾರತ ರತ್ನ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರಿಗೂ ಆಹ್ವಾನವನ್ನು ನೀಡಲಾಗಿದೆ. ಸಚಿನ್​ ಈ ಆಹ್ವಾನವನ್ನು ಸಂತಸದಿಂದಲೇ ಸ್ವೀಕರಿಸಿದ್ದಾರೆ.

ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 6,000ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆಹ್ವಾನ ಸ್ವೀಕರಿಸಿದ ಸಚಿನ್​ ಕೂಡ ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಅಧಿಕವಾಗಿದೆ.

ಸೆಪ್ಟೆಂಬರ್​ನಲ್ಲಿ ವಾರಣಾಸಿಯಲ್ಲಿ ಶಂಕುಸ್ಥಾಪನೆಗೊಂಡ ಅಂತಾರಾಷ್ಟ್ರೀಯ(international cricket stadium in Varanasi) ಕ್ರಿಕೆಟ್ ಸ್ಟೇಡಿಯಂನ ಸಮಾರಂಭದಲ್ಲಿ ಸಚಿನ್​ ತೆಂಡೂಲ್ಕರ್​ ಅವರು ಗಣ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತೀಯ ಕ್ರಿಕೆಟ್​ ಮಂಡಳಿಯ ವತಿಯಿಂದ ಸಚಿನ್​ ತೆಂಡೂಲ್ಕರ್​ ಅವರು “ನವೋ” ಎಂದು ಬರೆದ ಟೀಮ್​ ಇಂಡಿಯಾ ಜೆರ್ಸಿಯನ್ನು ನೀಡಿ ಗೌರವಿಸಿದ್ದರು. ಶಿವನ ಮಾದರಿಯಲ್ಲಿ ಈ ಸ್ಟೇಡಿಯಂ ನಿರ್ಮಾಣವಾಗುತ್ತಿದೆ.

ಇದನ್ನೂ ಓದಿ Ayodhya Ram Mandir : ಮಮತಾ ಬ್ಯಾನರ್ಜಿಯನ್ನು ಮುಮ್ತಾಜ್ ಖಾನ್ ಎಂದ ರಾಮ ಮಂದಿರದ ಅರ್ಚಕ

121 ಕೋಟಿ ರೂಪಾಯಿ ಮೌಲ್ಯದ ಭೂಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಕ್ರೀಡಾಂಗಣಕ್ಕೆ ಸುಮಾರು 330 ಕೋಟಿ ರೂಪಾಯಿ ಅಂದಾಜು ವೆಚ್ಚ ಹಾಕಲಾಗಿದೆ. ಹಿಂದೂಗಳಿಗೆ ಪರಮಪವಿತ್ರ ಕ್ಷೇತ್ರವಾಗಿರುವ ಕಾಶಿಯ ಸಮೀಪ ನಿರ್ಮಾಣವಾಗಲಿರುವ ಈ ಸ್ಟೇಡಿಯಮ್​ ಶಿವನಿಗೆ ಸಮರ್ಪಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ವಿಶೇಷ ಭದ್ರತೆ


ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹಲ್ವಾ ವಿತರಣೆ


ರಾಮಮಂದಿರ ಉದ್ಘಾಟನೆ ದಿನ ಗಣ್ಯರಿಗೂ ಸೇರಿ ಲಕ್ಷಾಂತರ ಜನರಿಗೆ ವಿಶೇಷ ರಾಮ ಹಲ್ವಾ ವಿತರಿಸಲಾಗುತ್ತದೆ. ವಿಷ್ಣು ಮನೋಹರ್‌ ಅವರು ರಾಮಮಂದಿರ ಉದ್ಘಾಟನೆಯ ದಿನ ಸುಮಾರು 7 ಸಾವಿರ ಕೆ.ಜಿ ರಾಮ ಹಲ್ವಾ ತಯಾರಿಸಲಿದ್ದಾರೆ. ಇದಕ್ಕಾಗಿ ಅವರು 12 ಸಾವಿರ ಲೀಟರ್‌ ನೀರಿನ ಸಾಮರ್ಥ್ಯದ ಬೃಹತ್‌ ಕಡಾಯಿಯೊಂದನ್ನು ಕೂಡ ತಯಾರಿಸಿದ್ದಾರೆ. “900 ಕೆಜಿ ರವೆ, 1 ಸಾವಿರ ಕೆಜಿ ತುಪ್ಪ, ಸಾವಿರ ಕೆಜಿ ಸಕ್ಕರೆ, 2 ಸಾವಿರ ಲೀಟರ್‌ ಹಾಲು, 2,500 ಲೀಟರ್‌ ನೀರು, 300 ಕೆಜಿ ಡ್ರೈ ಫ್ರೂಟ್ಸ್‌, 75 ಕೆಜಿ ಏಲಕ್ಕಿ ಪೌಡರ್‌ ಬಳಸಿಕೊಂಡು ವಿಶೇಷ ರಾಮ ಹಲ್ವಾ ತಯಾರಿಸಲಾಗುವುದು” ಎಂದು ವಿಷ್ಣು ಮನೋಹರ್‌ ತಿಳಿಸಿದ್ದಾರೆ.

Exit mobile version