ಪಲ್ಲೆಕೆಲೆ: ಪಾಕಿಸ್ತಾನ ವಿರುದ್ಧ ಸಾಗುತ್ತಿರುವ ಏಷ್ಯಾಕಪ್ ಪಂದ್ಯದಲ್ಲಿ ಇಶಾನ್ ಕಿಶನ್(Ishan Kishan) ಮತ್ತು ಹಾರ್ದಿಕ್ ಪಾಂಡ್ಯ(Hardik Pandya) ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಉಭಯ ಆಟಗಾರರು ಪಂದ್ಯದಲ್ಲಿ ಬೌಂಡರಿ ಬಾರಿಸುತ್ತಿದ್ದಾಗ ಭಾರತೀಯ ಅಭಿಮಾನಿಗಳು ರಾಮ್ ಸಿಯಾ ರಾಮ್(Ram Siya Ram)… ಎಂದು ರಾಮ ನಾಮ ಜಪಿಸಿದ ವಿಡಿಯೊವೊಂದು ವೈರಲ್ ಆಗಿದೆ.
ಅಗ್ರ ಕ್ರಮಾಂಕದ ನಂಬುಗೆಯ ಬ್ಯಾಟರ್ಗಳೆಲ್ಲ ಬಡಬಡನೆ ವಿಕೆಟ್ ಒಪ್ಪಿಸಿ ಪೆಲಿಯನ್ ಸೇರಿದಾಗ ಟೊಂಕ ಕಟ್ಟಿನಿಂತ ಇಶಾನ್ ಕಿಶನ್(82) ಮತ್ತು ಹಾರ್ದಿಕ್ ಪಾಂಡ್ಯ(87) ಉತ್ತಮ ಜತೆಯಾಟವೊಂದನ್ನು ನಿಭಾಯಿಸುವಲ್ಲಿ ಯಶಸ್ಸಿಯಾದರು. ಪಾಕಿಸ್ತಾನ ವಿರುದ್ಧ ಇದೇ ಮೊದಲ ಬಾರಿ ಆಡಿದ ಇಶಾನ್ ಕಿಶನ್ ವಿಚಲಿತರಾಗದೆ ಬ್ಯಾಟ್ ಬೀಸಿ ಪಾಕ್ ಬೌಲರ್ಗಳನ್ನು ಬೆಂಡೆತ್ತಿದರು. ಓವರ್ಗೆ ಒಂದರಂತೆ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಅರ್ಧಶತಕ ಸಿಡಿಸಿ ಮಿಂಚಿದರು.
ರಾವಣನ ನಾಡಲ್ಲಿ ಮೊಳಗಿದ ರಾಮ ನಾಮ…
ಉಭಯ ಆಟಗಾರರು ತಂಡಕ್ಕೆ ಆಸರೆಯಾಗಿ ಬೌಂಡರಿ ಬಾರಿಸುವ ವೇಳೆ ಅವರನ್ನು ಹುರಿದುಂಬಿಸಲು ಗ್ಯಾಲರಿಯಲ್ಲಿದ್ದ ಭಾರತೀಯ ಅಭಿಮಾನಿಗಳು ತ್ರಿವರ್ಣ ಧ್ವಜವನ್ನು ಬೀಸುತ್ತಾ ರಾಮ್ ಸಿಯಾ ರಾಮ್(Ram Siya Ram)… ಎಂದು ಹಾಡಿ ಬೆಂಬಲ ಸೂಚಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಪ್ರಭಾಸ್ (Actor Prabhas) ಅಭಿನಯದ ಆದಿಪುರುಷ್ ಸಿನೆಮಾದ ಹಾಡು ಇದಾಗಿದೆ.
ಉತ್ತಮ ಜತೆಯಾಟ
ಇಶಾನ್ ಕಿಶನ್ಗೆ ಉತ್ತಮ ಸಾಥ್ ನೀಡಿದ ಪಾಂಡ್ಯ ಕೂಡ ಪಾಕ್ ಬೌಲರ್ಗಳ ದಾಳಿಗೆ ಎದೆಯೊಡ್ಡಿ ನಿಲ್ಲುವಲ್ಲಿ ಯಶಸ್ವಿಯಾದರು. ಅವರು ಕೂಡ ಅರ್ಧಶತಕ ಬಾರಿಸಿದರು. ಸರಿ ಸುಮಾರು 40 ಓವರ್ ತನಕ ಬ್ಯಾಟಿಂಗ್ ಕಾಯ್ದುಕೊಂಡ ಉಭಯ ಆಟಗಾರರು 6ನೇ ವಿಕೆಟ್ಗೆ 138 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. 82 ರನ್ ಗಳಿಸಿದ್ದ ವೇಳೆ ಸಿಕ್ಸರ್ ಬಾರಿಸುವ ಯತ್ನದಲ್ಲಿ ಎಡವಿದ ಇಶಾನ್ ಕಿಶನ್ ಅವರು ಬಾಬರ್ ಅಜಂಗೆ ಕ್ಯಾಚ್ ನೀಡಿ ಔಟಾದರು. ಅವರ ಈ ಅರ್ಧಶತಕದ ಇನಿಂಗ್ಸ್ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ದಾಖಲಾಯಿತು. ಒಂದೊಮ್ಮೆ ಪಾಂಡ್ಯ ಮತ್ತು ಇಶಾನ್ ಕಿಶನ್ ತಂಡಕ್ಕೆ ಆಸರೆಯಾಗದೇ ಹೋಗಿದ್ದರೆ ತಂಡ 150 ಗಡಿ ದಾಟುವುದು ಕೂಡ ಕಷ್ಟ ಎನ್ನುವಂತಿತ್ತು. 90 ಎಸೆತ ಎದುರಿಸಿದ ಪಾಂಡ್ಯ 7 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 87 ರನ್ ಗಳಿಸಿದರು.
ಇದನ್ನೂ ಓದಿ IND vs PAK: ಇಶಾನ್-ಪಾಂಡ್ಯ ಅರ್ಧಶತಕ; ಪಾಕ್ಗೆ ಸ್ಪರ್ಧಾತ್ಮಕ ಗುರಿ ನೀಡಿದ ಭಾರತ
ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ ಭಾರತ
ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಮಧ್ಯಮ ಕ್ರಮಾಂಕದ ಎಡಗೈ ಆಟಗಾರ ಇಶಾನ್ ಕಿಶನ್(Ishan Kishan) ಮತ್ತು ಹಾರ್ದಿಕ್ ಪಾಂಡ್ಯ(Hardik Pandya) ನಡೆಸಿದ ಬ್ಯಾಟಿಂಗ್ ಹೋರಾಟದಿಂದ ನೆರವಿನಿಂದ 48.5 ಓವರ್ಗಳಲ್ಲಿ 266 ರನ್ಗಳಿಗೆ ಸರ್ವಪತನ ಕಂಡಿತು. ಪಾಕಿಸ್ತಾನ ಗೆಲುವಿಗೆ 267 ರನ್ ಬಾರಿಸಬೇಕಿದೆ.