ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ಸ್ಟಾರ್ ಆಟಗಾರ್ತಿ ರಾಣಿ ರಾಂಪಾಲ್(Rani Rampal) ಅವರ ಹೆಸರನ್ನು ರಾಯ್ ಬರೇಲಿಯಲ್ಲಿರುವ ಕ್ರೀಡಾಂಗಣಕ್ಕೆ ಇಡಲಾಗಿದೆ. ಈ ಮೂಲಕ ಕ್ರೀಡೆಯಲ್ಲಿ ತಮ್ಮ ಹೆಸರಿನ ಕ್ರೀಡಾಂಗಣವನ್ನು ಹೊಂದಿರುವ ಮೊದಲ ಮಹಿಳೆ ಎಂಬ ಕೀರ್ತಿಗೆ ರಾಣಿ ಅವರು ಪಾತ್ರರಾಗಿದ್ದಾರೆ.
ಎಂಸಿಎಫ್ ರಾಯ್ ಬರೇಲಿ ಹಾಕಿ ಸ್ಟೇಡಿಯಮ್ ಇನ್ನು ಮುಂದೆ ‘ರಾಣಿ ಗರ್ಲ್ಸ್ ಹಾಕಿ ಟರ್ಫ್’ ಎಂದು ಮರುನಾಮಕರಣ ಮಾಡಲಾಗಿದೆ. ಈ ವಿಚಾರವನ್ನು ರಾಣಿ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಹಾಕಿ ಕ್ರೀಡೆಗೆ ನಾನು ನೀಡಿದ ಕೊಡುಗೆಯನ್ನು ಪರಿಗಣಿಸಿ ಎಂಸಿಎಫ್ ರಾಯ್ಬರೇಲಿ ಹಾಕಿ ಕ್ರೀಡಾಂಗಣವನ್ನು ರಾಣಿ ಗರ್ಲ್ಸ್ ಹಾಕಿ ಟರ್ಫ್ ಎಂದು ಮರುನಾಮಕರಣ ಮಾಡಲಾಗಿದೆ. ಇದು ನನಗೆ ಸಂದ ಅತ್ಯಂತ ಶ್ರೇಷ್ಠ ಗೌರವವಾಗಿದೆ” ಎಂದು ರಾಣಿ ರಾಂಪಾಲ್ ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ Hockey India: ಹಾರ್ದಿಕ್, ಸವಿತಾಗೆ ವರ್ಷದ ಹಾಕಿ ಆಟಗಾರ ಪ್ರಶಸ್ತಿ
“ನನ್ನ ಹೆಸರಲ್ಲಿ ಒಂದು ಕ್ರೀಡಾಂಗಣವನ್ನು ಹೊಂದಿರುವ ಮೊದಲ ಮಹಿಳಾ ಹಾಕಿ ಆಟಗಾರ್ತಿಯಾಗಿರುವುದು ನನಗೆ ಹೆಮ್ಮೆಯ ಕ್ಷಣವಾಗಿದೆ. ನಾನು ಇದನ್ನು ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅರ್ಪಿಸುತ್ತೇನೆ ಹಾಗೂ ಇದು ಮುಂದಿನ ತಲೆಮಾರಿನ ಹಾಕಿ ಆಟಗಾರ್ತಿಯರಿಗೆ ಸ್ಫೂರ್ತಿ ನೀಡಲಿ” ಎಂದು ರಾಣಿ ಹೇಳಿದರು. ಟೋಕಿಯೊ ಒಲಿಂಪಿಕ್ಸ್ ಆಡಿದ ಬಳಿಕ ರಾಣಿ ರಾಂಪಾಲ್ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದರು. ಕಾಮನ್ವೆಲ್ತ್ ಗೇಮ್ಸ್‌ಗೂ ಅವರು ಅಲಭ್ಯರಾಗಿದ್ದರು. ಭಾರತಕ್ಕಾಗಿ ಸುಮಾರು 250 ಪಂದ್ಯಗಳಲ್ಲಿ ಆಡಿದ್ದಾರೆ.