ನವ ದೆಹಲಿ: Ranji 2022 | ಬಂಗಾಳ ಹಾಗೂ ಮಧ್ಯಪ್ರದೇಶ ತಂಡಗಳ ನಡುವೆ ನಡೆದ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮಧ್ಯಪ್ರದೇಶ ಫೈನಲ್ ತಲುಪಿದೆ. ಬಂಗಾಳ ತಂಡದ ವಿರುದ್ಧ ಮಧ್ಯಪ್ರದೇಶ ತಂಡ 174 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 23 ವರ್ಷಗಳ ಬಳಿಕ ಫೈನಲ್ ತಲುಪುತ್ತಿರುವುದರಿಂದ ಮಧ್ಯಪ್ರದೇಶ ತಂಡಕ್ಕೆ ಸಂಭ್ರಮದ ಕ್ಷಣವಾಗಿದೆ.
ಮಧ್ಯಪ್ರದೇಶ ತಂಡವು ಸೆಮಿಫೈನಲ್ ಪಂದ್ಯದಲ್ಲಿ 350 ರನ್‌ಗಳ ಗುರಿಯನ್ನು ಬಂಗಾಳ ತಂಡಕ್ಕೆ ನೀಡಿತ್ತು. ಆದರೆ, ಮಧ್ಯಪ್ರದೇಶದ ಎಡಗೈ ಸ್ಪಿನ್ನರ್ ಕಾರ್ತಿಕೇಯ ಬಂಗಾಳ ತಂಡದ ಆಟಗಾರರಿಗೆ ರನ್ ಹೊಡೆಯದಂತೆ ಕಟ್ಟಿ ಹಾಕಿದರು. ಅಲ್ಲದೆ, 5 ವಿಕೆಟ್ ಪಡೆದು ಅಬ್ಬರಿಸಿದರು. ಕೇವಲ 28.2 ಓವರ್‌ಗಳಲ್ಲಿ ಮಧ್ಯಪ್ರದೇಶ ತಂಡ ಗೆಲುವು ಸಾಧಿಸಿತು.
ಬಂಗಾಳ ತಂಡದ ನಾಯಕ ಅಭಿಮನ್ಯು ಈಶ್ವರನ್ ತಂಡದ ಗೆಲುವಿಗಾಗಿ ಪೂರ್ಣ ಪರಿಶ್ರಮದಿಂದ ಹೋರಾಡಿದರು. ಅವರೊಬ್ಬರೇ ತಂಡಕ್ಕೆ 78 ರನ್‌ಗಳ ಕೊಡುಗೆ ನೀಡಿದರು. ಆದರೆ ಇವರ ಪ್ರಯತ್ನವೂ ವಿಫಲವಾಗಿ ಹೋಯಿತು.
ಫೈನಲ್‌ನಲ್ಲಿ ಮಧ್ಯಪ್ರದೇಶ -ಮುಂಬೈ ಮುಖಾಮುಖಿ
23 ವರ್ಷಗಳ ಬಳಿಕ ಫೈನಲ್ ತಲುಪಿದ ಮಧ್ಯಪ್ರದೇಶ ತಂಡವು ಈಗಾಗಲೇ 41 ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡವನ್ನು ಎದುರಿಸಲಿದೆ. ಒಂದೆಡೆ ಪ್ರಬಲ ಮುಂಬೈ ತಂಡ ಹಾಗೂ ಇನ್ನೊಂದೆಡೆ ನವೋತ್ಸಾಹದ ಮಧ್ಯಪ್ರದೇಶ ತಂಡ ನಡುವಿನ ಫೈನಲ್ ಪಂದ್ಯ ಕುತೂಹಲ ಮೂಡಿಸಿದೆ.