ಹರಾರೆ: ಬುಧವಾರ ನಡೆದಿದ್ದ ಜಿಂಬಾಬ್ವೆ ವಿರುದ್ಧದ ಮೂರನೇ ಟಿ20(Zimbabwe vs India 3rd T20I) ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 23 ರನ್ ಅಂತರದ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಇದೇ ಪಂದ್ಯದಲ್ಲಿ ರವಿ ಬಿಷ್ಣೋಯ್(Ravi Bishnoi) ಹಿಡಿದ ಸೂಪರ್ ಕ್ಯಾಚ್ನ(ravi bishnoi catch) ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವೇಶ್ ಖಾನ್ ಅವರ ಓವರ್‌ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಬ್ರಿಯಾನ್ ಬೆನೆಟ್ ಆಪ್ ಸೈಡ್ನತ್ತ ಹೊಡೆದರು. ಈ ವೇಳೆ 30 ಯಾರ್ಡ್ ಸರ್ಕಲ್ನಲ್ಲಿ ನಿಂತಿದ್ದ ರವಿ ಬಿಷ್ಣೋಯ್ ಚಿರತೆಯಂತೆ ಜಿಗಿದು ಈ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ಈ ಅದ್ಭುತ ಕ್ಯಾಚ್ ಕಂಡು ಮೈದಾನದಲ್ಲಿದ್ದ ಟೀಮ್ ಇಂಡಿಯಾ ಆಟಗಾರರು, ಅಂಪೈರ್ ಮತ್ತು ವಿಕೆಟ್ ಕೈ ಚೆಲ್ಲಿದ ಬ್ರಿಯಾನ್ ಬೆನೆಟ್ ಕೂಡ ಒಂದು ಕ್ಷಣ ಅಚ್ಚರಿಗೊಂಡರು. ಪಾದರಸದಂತೆ ಫೀಲ್ಡಿಂಗ್ ನಡೆಸುವ ಬಿಷ್ಣೋಯ್ ಐಪಿಎಲ್ನಲ್ಲಿಯೂ ಇದೇ ರೀತಿಯ ಹಲವು ಕ್ಯಾಚ್ ಹಿಡಿದ ನಿದರ್ಶನಗಳಿಗೆ. ಬಿಷ್ಣೋಯ್ ಅವರು ಕ್ಯಾಚ್ಗಳ ಸರದಾರ, ಫೀಲ್ಡಿಂಗ್ ಎಂದಾಗ ಮೊದಲು ನೆನಪಾಗುವ ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ಗರಡಿಯಲ್ಲಿ ಪಳಗಿದ ಆಟಗಾರನಾಗಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಾಯಕ ಶುಭ್ಮನ್ ಗಿಲ್ ಸಾರಥ್ಯದ ಭಾರತ ತಂಡ ನಿಗದಿತ 20 ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್‌ಗಳ ಪೇರಿಸಿತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡವು 20 ಓವರ್‌ನಲ್ಲಿ 6ವಿಕೆಟ್ ನಷ್ಟಕ್ಕೆ 159 ರನ್‌ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಭಾರತ ಈ ಪಂದ್ಯದಲ್ಲಿ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡಿತು. ಟಿ20 ವಿಶ್ವಕಪ್ ಭಾಗವಾಗಿದ್ದ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ನಾಯಕ ಗಿಲ್ ಜತೆ ಇನಿಂಗ್ಸ್ ಆರಂಭಿಸಿದರು. ಈ ಜೋಡಿ 8 ಓವರ್‌ನಲ್ಲಿ 67ರನ್ ಒಟ್ಟುಗೂಡಿಸಿತು. ಜೈಸ್ವಾಲ್ 27 ಎಸೆತದಲ್ಲಿ 36 ಗಳಿಸಿದರೆ, ನಾಯಕ ಶುಭಮನ್ ಗಿಲ್ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಮೂಲಕ 49 ಎಸೆತದಲ್ಲಿ 66 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದರು. ಕಳೆದ ಪಂದ್ಯದಲ್ಲಿ ವೇಗದ ಶತಕ ಬಾರಿಸಿದ್ದ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ 10 ರನ್ಗೆ ಆಟ ಮುಗಿಸಿದರು.
ಇದನ್ನೂ ಓದಿ IND vs ZIM : ಜಿಂಬಾಬ್ವೆ ವಿರುದ್ಧ ಭಾರತ ತಂಡಕ್ಕೆ 23 ರನ್ ವಿಜಯ, ಸರಣಿಯಲ್ಲಿ 1-2 ಮುನ್ನಡೆ
ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಜಿಂಬಾಬ್ವೆ ಆರಂಭಿಕ ಆಘಾತವನ್ನು ಎದುರಿಸಿತು. ಭಾರತೀಯ ಬೌಲರ್‌ಗಳ ಶಿಸ್ತಿನ ದಾಳಿಯಿಂದ 6 ಓವರ್ ಆಗುವ ವೇಳೆಗೆ 39 ರನ್‌ಗಳಿಸಿ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆ ಬಳಿಕ 6ನೇ ವಿಕೆಟ್‌ಗೆ ಜತೆಯಾದ ಡಿಯಾನ್ ಮೈಯರ್ಸ್ ಹಾಗೂ ವಿಕೆಟ್ ಕೀಪರ್ ಮದಾಂದೆ ಸಣ್ಣ ಮಟ್ಟಿನ ಬ್ಯಾಟಿಂಗ್ ಹೋರಾಟ ನಡೆಸಿದರೂ ಕೂಡ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.