Site icon Vistara News

Ravindra Jadeja : ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ರವೀಂದ್ರ ಜಡೇಜಾ

ಬೆಂಗಳೂರು : ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ (Ravindra Jadeja) ಅವರ ಆಲ್ರೌಂಡ್ (All Rounder) ಪ್ರದರ್ಶನವು ಸರಣಿಯಲ್ಲಿ (Ind vs ENg) ಭಾರತ 3-1 ಮುನ್ನಡೆ ಸಾಧಿಸಲು ಪ್ರಮುಖ ಕಾರಣವಾಗಿದೆ. ಅದೇ ರೀತಿ ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಧ್ರುವ್ ಜುರೆಲ್ ಮತ್ತು ಶುಭ್ಮನ್ ಗಿಲ್ (Shubhman GIl) ಅವರ ಶಾಂತ ಜೊತೆಯಾಟದಿಂದಾಗಿ ರೋಹಿತ್ ಶರ್ಮಾ (Rohit Sharma) ಮತ್ತು ತಂಡವು ಐದು ವಿಕೆಟ್​ಗಳ ಗೆಲುವು ದಾಖಲಿಸಿದೆ.

ರವೀಂದ್ರ ಜಡೇಜಾ ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಭಾರತಕ್ಕಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಂತೆಯೇ ಅವರು ಎರಡು ಪಂದ್ಯಗಳಿಂದ 43.4 ಸರಾಸರಿಯಲ್ಲಿ ಒಟ್ಟು 217 ರನ್ ಗಳಿಸಿದ್ದರೆ, ಪ್ರಸ್ತುತ ಅವರು ಆರು ಪಂದ್ಯಗಳಿಂದ 17 ವಿಕೆಟ್​​ಗಳೊಂದಿಗೆ ಸರಣಿಯಲ್ಲಿ ಗರಿಷ್ಠ ವಿಕೆಟ್​ ಪಡೆದವರ ಪಟ್ಟಿಯಲ್ಲಿ ಮೂರನೆಯವರು.

ಇತಿಹಾಸ ನಿರ್ಮಿಸಿದ ರವೀಂದ್ರ ಜಡೇಜಾ

ರಾಂಚಿ ಟೆಸ್ಟ್​​ನಲ್ಲಿ ಭಾರತದ ಆಲ್ರೌಂಡರ್ ಐದು ವಿಕೆಟ್​ಗಳನ್ನು ಪಡೆದ್ದಾರೆ. ಅಲ್ಲದೆ 16 ರನ್ ಗಳಿಸಿದ್ದಾರೆ. ಇದು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ನಲ್ಲಿ ಅವರಿಗೆ 100 ವಿಕೆಟ್​ಗಳನ್ನು ಪೂರ್ಣಗೊಳಿಸಲು ನೆರವು ನೀಡಿತು. ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ನಲ್ಲಿ 1000 ಕ್ಕೂ ಹೆಚ್ಚು ರನ್ ಮತ್ತು 100 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಅವರು ಈ ಮೂಲಕ ಪಾತ್ರರಾಗಿದ್ದಾರೆ. ಜಡೇಜಾ 1536 ರನ್ ಮತ್ತು 100 ವಿಕೆಟ್ ಪಡೆದಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಅವರ ಸ್ಪಿನ್ ಪಾಲುದಾರ ರವಿಚಂದ್ರನ್ ಅಶ್ವಿನ್ ಇದ್ದು, ಅವರು 165 ವಿಕೆಟ್ ಮತ್ತು 948 ರನ್ ಗಳಿಸಿದ್ದಾರೆ.

ಸ್ನಾಯುಸೆಳೆತದ ಗಾಯದಿಂದಾಗಿ ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಆದರೆ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂರನೇ ಟೆಸ್ಟ್​ನಲ್ಲಿ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು, ಇದರಲ್ಲಿ ಅವರು ಒಂದು ವಿಕೆಟ್ ಪಡೆಯುವ ಜತೆಗೆ ಶತಕವನ್ನೂ ಗಳಿಸಿದ್ದರು.

ಅಸಾಧಾರಣ ಪ್ರತಿಭೆ

ರವೀಂದ್ರ ಜಡೇಜಾ ಕಳೆದ ಕೆಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದ ಅಸಾಮಾನ್ಯ ಭಾಗವಾಗಿದ್ದಾರೆ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಕೌಶಲ್ಯಗಳನ್ನು ಅದ್ಭುತವಾಗಿ ಮಾಡುತ್ತಿದ್ದಾರೆ. ಜಡೇಜಾ ಭಾರತ ತಂಡದ ಅನೇಕ ಗೆಲುವುಗಳಲ್ಲಿ ತಂಡದ ಭಾಗವಾಗಿದ್ದಾರೆ. ಅದ್ಭುತ ಪ್ರದರ್ಶನಗಳೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಯಾರೆಲ್ಲ ಇದ್ದಾರೆ ಸಾಧಕರು?

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ ಒಟ್ಟು ಹತ್ತು ಬೌಲರ್​ಗಳು 100 ಕ್ಕೂ ಹೆಚ್ಚು ವಿಕೆ್ಟ್​ಗಳನ್ನು ಪಡೆದಿದ್ದಾರೆ. ಈ ಹತ್ತರಲ್ಲಿ ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಮೂವರು ಆಟಗಾರರು ಭಾರತಕ್ಕೆ ಸೇರಿದವರು. ನಾಥನ್ ಲಿಯಾನ್, ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮೂವರು ಬೌಲರ್ ಗಳು, ಇಂಗ್ಲೆಂಡ್ ವೇಗಿಗಳಾದ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ನಂತರದ ಸ್ಥಾನಗಳಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಮತ್ತು ನ್ಯೂಜಿಲೆಂಡ್ ಟೆಸ್ಟ್ ನಾಯಕ ಟಿಮ್ ಸೌಥಿ ಕೂಡ ಈ ಪಟ್ಟಿಯಲ್ಲಿದ್ದಾರೆ.

ಡಬ್ಲ್ಯುಟಿಸಿ ಇತಿಹಾಸದಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಅಶ್ವಿನ್ ಐದನೇ ಟೆಸ್ಟ್ ನಲ್ಲಿ ಜಡೇಜಾ ಅವರೊಂದಿಗೆ ಎಲೈಟ್ ಪಟ್ಟಿಯಲ್ಲಿ ಸೇರುವ ಅವಕಾಶವನ್ನು ಪಡೆಯಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕಾಗಿ 1000 ರನ್ ಪೂರೈಸಲು ಅಶ್ವಿನ್ ಗೆ 52 ರನ್ ಗಳ ಅಗತ್ಯವಿದೆ.

ಐದು ಪಂದ್ಯಗಳ ಸರಣಿಯಲ್ಲಿ ಭಾರತ 3-1 ಮುನ್ನಡೆ ಸಾಧಿಸಿರುವುದರಿಂದ, ಭಾರತ ತಂಡವು ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು 4-1 ರಿಂದ ತನ್ನದಾಗಿಸಿಕೊಳ್ಳಲು ಬಯಸಿದೆ. ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 145 ರನ್​ಗಳಿಗೆ ಆಲೌಟ್ ಆಗಿತ್ತು. ಮತ್ತೊಂದೆಡೆ, ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಭಾರತೀಯ ಯುವ ಆಟಗಾರರು ಸಂದರ್ಭಕ್ಕೆ ತಕ್ಕಂತೆ ಆಡಿದ್ದಾರೆ. ಭಾರತವು ಸರಣಿಯನ್ನು ಗೆಲ್ಲಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Exit mobile version