Site icon Vistara News

Ravindra Jadeja : ನನ್ನ ಪತ್ನಿಯ ಹೆಸರು ಕೆಡಿಸುವ ಪ್ರಯತ್ನ; ಅಪ್ಪನ ಆರೋಪದ ವಿರುದ್ಧ ಜಡೇಜಾ ಕೆಂಡಾಮಂಡಲ

Ravindra Jadeja

ನವದೆಹಲಿ: ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರು ತಮ್ಮ ತಂದೆ ಅನಿರುದ್ಧ್ ಸಿಂಗ್ ಮಾಡಿರುವ ಆರೋಪಕ್ಕೆ ಪ್ರತ್ಯುತ್ತರ ಕೊಟ್ಟಿದ್ದಾರೆ. ನಮ್ಮಿಬ್ಬರ ನಡುವಿನ ಸಂಬಂಧವನ್ನು ಜಡೇಜಾ ಪತ್ನಿ ರಿವಾಬಾ ಜಡೇಜಾ ಹಾಳು ಮಾಡಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಅಲ್ಲದೆ ಇದು ಪತ್ನಿಯ ಮಾನ ಹಾನಿ ಮಾಡುವ ಹೇಳಿಕೆ ಎಂಬುದಾಗಿ ಹೇಳಿಕೊಂಡಿದ್ದಾರೆ.

ದೈನಿಕ್ ಭಾಸ್ಕರ್​ಗೆ ನೀಡಿದ ಸಂದರ್ಶನದಲ್ಲಿ, ಜಡೇಜಾ ಅವರ ತಂದೆ ಅನಿರುದ್ಧ್​ ಸಿಂಗ್​, ಮಗ ಜಡೇಜಾ ಮತ್ತು ಸೊಸೆಯೊಂದಿಗೆ ಯಾವುದೇ ಸಂಬಂಧ ಉಳಿಸಿಕೊಂಡಿಲ್ಬ ಬಹಿರಂಗಪಡಿಸಿದ್ದರು. ರವೀಂದ್ರ ಜಡೇಜಾ ಮತ್ತು ರಿವಾಬಾ ಅವರ ವಿವಾಹದ ನಂತರದ ಮನೆಯಲ್ಲಿ ಬಿರುಕು ಉಂಟಾಯಿತು. ನಮ್ಮೆಲ್ಲ ಸಂಬಂಧಗಳ ಅಂತರಕ್ಕೆ ಕಾರಣವಾಯಿತು ಎಂದು ಅವರು ಹೇಳಿದ್ದರು.

ಜಡೇಜಾ ಅವರು ಗುಜರಾತಿ ಭಾಷೆಯಲ್ಲಿ ಬರೆದ ಟ್ವೀಟ್ ಇಲ್ಲಿದೆ

“ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ರವಿ (ರವೀಂದ್ರ ಜಡೇಜಾ) ಅಥವಾ ಅವರ ಪತ್ನಿ ರಿವಾಬಾ ಜಡೇಜಾ ಅವರೊಂದಿಗೆ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ. ನಾವು ಅವರನ್ನು ಯಾವುದಕ್ಕೂ ಕರೆಯುವುದಿಲ್ಲ, ಮತ್ತು ಅವರು ನಮ್ಮನ್ನು ಕರೆಯುವುದಿಲ್ಲ. ರವಿಯ ಮದುವೆಯ ಎರಡು-ಮೂರು ತಿಂಗಳ ನಂತರವೇ ಸಮಸ್ಯೆಗಳು ಪ್ರಾರಂಭಿಸಿದವು. ಪ್ರಸ್ತುತ, ನಾನು ಜಾಮ್​ನಗರದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದೇನೆ. ರವೀಂದ್ರ ಪ್ರತ್ಯೇಕವಾಗಿ ವಾಸಿಸುತ್ತಿದ್ದಾನೆ ಎಂದು ಅನಿರುದ್ಧ್ ಸಿಂಗ್ ಜಡೇಜಾ ಹೇಳಿದ್ದರು.

ಆದಾಗ್ಯೂ, ರವೀಂದ್ರ ಜಡೇಜಾ ಅವರು ಈ ಆರೋಪಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದಾರೆ. ತನ್ನ ಎಕ್ಸ್​ ಹ್ಯಾಂಡಲ್​​ನಲ್ಲಿ (ಹಿಂದೆ ಟ್ವಿಟರ್), 35 ವರ್ಷದ ಜಡೇಜಾ, ಇದು ತನ್ನ ಮತ್ತು ತನ್ನ ಹೆಂಡತಿಯ ಮಾನ ಹಾಳುಮಾಡುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ,

ದೈನಿಕ್ ಭಾಸ್ಕರ್ ಸಂದರ್ಶನದಲ್ಲಿ ಹೇಳಲಾದ ಎಲ್ಲಾ ವಿಷಯಗಳು ಅಸಂಬದ್ಧವಾಗಿವೆ. ಇದು ಸಂಪೂರ್ಣವಾಗಿ ಅರ್ಥಹೀನ ಮತ್ತು ಸುಳ್ಳು. ಇದು ನನ್ನ ಹೆಂಡತಿಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನಗಳಾಗಿವೆ. ಇದು ನಿಜವಾಗಿಯೂ ಖಂಡನೀಯ. ನಾನು ಹೇಳಲು ಸಾಕಷ್ಟು ವಿಷಯಗಳಿವೆ. ಆದರೆ ಅವುಗಳನ್ನು ಸಾರ್ವಜನಿಕವಾಗಿ ಹೇಳುವುದಿಲ್ಲ ಎಂದು ಜಡೇಜಾ ಬರೆದುಕೊಂಡಿದ್ದಾರೆ.

ರವೀಂದ್ರ ಜಡೇಜಾ 2016ರ ಏಪ್ರಿಲ್​​ನಲ್ಲಿ ರಿವಾಬಾ ಅವರನ್ನು ವಿವಾಹವಾಗಿದ್ದರು. ಆದಾಗ್ಯೂ, ಮದುವೆಯ ನಂತರ ಜಡೇಜಾ ಅವರ ಕುಟುಂಬದಲ್ಲಿ ಬಿರುಕು ಉಂಟಾಗಿರುವ ಬಗ್ಗೆ ಹಲವಾರು ವರದಿಗಳು ಬಂದಿದ್ದವು. ಸ್ಟಾರ್ ಆಲ್ರೌಂಡರ್ ತಂದೆ ಮತ್ತು ಸಹೋದರಿ ತಮ್ಮ ಹೆಂಡತಿಯೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂಬುದಾಗಿ ವರದಿಯಾಗಿದ್ದವು.

ರಿವಾಬಾ ಜಡೇಜಾ ಗುಜರಾತ್​ನ ಬಿಜೆಪಿ ಶಾಸಕರಾಗಿದ್ದಾರೆ. ಡಿಸೆಂಬರ್ 2022 ರಲ್ಲಿ ಗುಜರಾತ್​ನ ಜಾಮ್​ನಗರ ಉತ್ತರದಿಂದ ಚುನಾವಣೆಯಲ್ಲಿ ಗೆದ್ದ ನಂತರ ಅವರು ಗುಜರಾತ್ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

Exit mobile version