ಕೊಲಂಬೊ: ಏಷ್ಯಾಕಪ್ 2023ರ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಹೊಸ ದಾಖಲೆ ಮಾಡಿದ್ದಾರೆ. ಬಾಂಗ್ಲಾದೇಶ ತಂಡದ ಶಮಿಮ್ ಹೊಸೈನ್ ಅವರ ವಿಕೆಟ್ ಪಡೆಯುವ ಮೂಲಕ ಅವರು ಏಕ ದಿನ ಕ್ರಿಕೆಟ್ ಮಾದರಿಯಲ್ಲಿ ಒಟ್ಟು 200 ವಿಕೆಟ್ಗಳ ಸಾಧನೆ ಮಾಡಿದ್ದಾರೆ.
ಜಡೇಜಾ ತಮ್ಮ 175 ನೇ ಇನಿಂಗ್ಸ್ನಲ್ಲಿ ಈ ಮೈಲಿಗಲ್ಲು ತಲುಪಿದರು. 50 ಓವರ್ಗಳ ಪಂದ್ಯದಲ್ಲಿ 200 ವಿಕೆಟ್ ಪಡೆದ ಏಳನೇ ಭಾರತೀಯ ಮತ್ತು ಏಕೈಕ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ 10 ಓವರ್ಗಳಲ್ಲಿ 53 ರನ್ಗೆ 1 ವಿಕೆಟ್ ಪಡೆದುಕೊಂಡಿದ್ದಾರೆ.
34ರ ಹರೆಯದ ಸ್ಪಿನ್ನರ್ 50 ಓವರ್ಗಳ ಕ್ರಿಕೆಟ್ನಲ್ಲಿ 7 ಬಾರಿ ನಾಲ್ಕು ವಿಕೆಟ್ ಹಾಗೂ ಒಂದು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. 2013ರಲ್ಲಿ ಓವಲ್ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 36 ರನ್ಗೆ 5 ವಿಕೆಟ್ ಪಡೆದಿರುವುದು ಅವರು ಜೀವನ ಶ್ರೇಷ್ಠ ವಿಕೆಟ್ ಸಾಧನೆಯಾಗಿದೆ.
ಇದನ್ನೂ ಓದಿ : Virat kohli : ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ವಾಟರ್ ಬಾಯ್, ಮೈದಾನದಲ್ಲಿ ಅವರ ಓಟವೇ ಸೂಪರ್
2009ರಲ್ಲಿ ವಡೋದರಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಅವರನ್ನು ಔಟ್ ಮಾಡುವ ಮೂಲಕ ಜಡೇಜಾ ತಮ್ಮ ಮೊದಲ ವಿಕೆಟ್ ಪಡೆದಿದ್ದರು. ಕಪಿಲ್ ದೇವ್ ಅವರನ್ನು ಹಿಂದಿಕ್ಕಿ ಭಾರತದ ಅತಿ ಹೆಚ್ಚು ಏಕದಿನ ವಿಕೆಟ್ ಪಡೆದವರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಲು ಅವರಿಗೆ ಇನ್ನೂ 54 ವಿಕೆಟ್ಗಳ ಅಗತ್ಯವಿದೆ. ಜಡೇಜಾ ಟೆಸ್ಟ್ ಕ್ರಿಕೆಟ್ನಲ್ಲಿ 275 ವಿಕೆಟ್ ಹಾಗೂ ಟಿ20ಐನಲ್ಲಿ 51 ವಿಕೆಟ್ ಕಬಳಿಸಿದ್ದಾರೆ.
ಸ್ಪರ್ಧಾತ್ಮಕ ಮೊತ್ತ ಗಳಿಸಿದ ಬಾಂಗ್ಲಾದೇಶ
ಶಕಿಬ್ ಅಲ್ ಹಸನ್ (80) ಹಾಗೂ ತೌಹಿದ್ ಹೃದೋಯಿ (54) ಅವರು ಜೋಡಿಯ ಅರ್ಧ ಶತಕದ ನೆರವಿನಿಂದ ಮಿಂಚಿದ ಬಾಂಗ್ಲಾದೇಶ ತಂಡ ಏಷ್ಯಾ ಕಪ್ನ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ವಿರುದ್ಧ 265 ರನ್ಗಳನ್ನು ಬಾರಿಸಿದೆ. ಇದರೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ 266 ರನ್ಗಳ ಗೆಲುವಿನ ಗುರಿ ಎದುರಾಗಿದೆ.
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡವನ್ನು ಸಣ್ಣ ಮೊತ್ತಕ್ಕೆ ಕಟ್ಟಿ ಹಾಕಿ ಜಯ ಸಾಧಿಸುವುದು ರೋಹಿತ್ ಶರ್ಮಾ ಅವರ ಯೋಜನೆಯಾಗಿತ್ತು. ಆದರೆ ಬಾಂಗ್ಲಾ ಬ್ಯಾಟರ್ಗಳು ಕಡಿಮೆ ಮೊತ್ತಕ್ಕೆ ಔಟಾಗಲು ನಿರಾಕರಿಸಿದರು. ಕೊನೇ ತನಕವೂ ಉತ್ತಮವಾಗಿ ಬ್ಯಾಟ್ ಬೀಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಿದರು.
ಬ್ಯಾಟಿಂಗ್ ಆಹ್ವಾನ ಪಡೆದ ಬಾಂಗ್ಲಾ ತಂಡ ಕಳಪೆ ಆರಂಭ ಪಡೆಯಿತು. ಲಿಟನ್ ದಾಸ್ ಶೂನ್ಯಕ್ಕೆ ಔಟಾದರೆ, ಅನ್ಮುಲ್ ಹಕ್ 4 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಅದೇ ರೀತಿ 28 ರನ್ಗಳಿಗೆ ಮೊದಲ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಮೆಹೆದಿ ಹಸನ್ ಕೂಡ 13 ರನ್ಗಳಿಗೆ ಔಟಾಗುವ ಮೂಲಕ ಬಾಂಗ್ಲಾ ತಂಡ 59 ರನ್ಗೆ ನಾಲ್ಕು ವಿಕೆಟ್ ನಷ್ಟ ಮಾಡಿಕೊಂಡಿತು. ಆದೆರ, ಈ ವೇಳೆ ಜತೆಯಾದ ಶಕಿಬ್ ಅಲ್ ಹಸನ್ (80) ಹಾಗೂ ಹೃದೋಯ್ (54) ಐದನೇ ವಿಕೆಟ್ಗೆ 101 ರನ್ಗಳ ಜತೆಯಾಟ ನೀಡಿದರು. ಇವರ ಸಾಹಸದಿಂದಾಗಿ ಬಾಂಗ್ಲಾ ತಂಡ ಚೇತರಿಕೆ ಪಡೆಯಿತು.
ಅಂತಿ ಹಂತದಲ್ಲಿ ನಾಸುಮ್ ಅಹ್ಮದ್ (44) ಹಾಗೂ ಮೆಹೆದಿ ಹಸನ್ (29) ಬಿರುಸಾಗಿ ಬ್ಯಾಟ್ ಬೀಸಿದರು. ತಂಜಿಮ್ ಹಸನ್ ಕೂಡ 14 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.