ಕೊಲಂಬೊ: ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ (Asia Cup 2023) ಸೂಪರ್ 4 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ತನ್ನ ಪ್ರಭಾವಶಾಲಿ ಪ್ರದರ್ಶನವನ್ನು ನೀಡುತ್ತಿದೆ. ಇವುಗಳ ನಡುವೆ ಭಾರತ ತಂಡದ ಆಟಗಾರರು ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಾ ಮುಂದುವರಿಯುತ್ತಿದ್ದಾರೆ. ಪಾಕ್ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ (Virat kohli) ಅತಿವೇಗದ 13 ಸಾವಿರ ಏಕ ದಿನ ರನ್ಗಳ ದಾಖಲೆ ಮಾಡಿದರೆ, ಲಂಕಾ ವಿರುದ್ಧದ ಹಣಾಹಣಿಯಲ್ಲಿ ರೋಹಿತ್ ಶರ್ಮಾ (Rohit Sharma) 10 ಸಾವಿರ ಏಕ ದಿನ ರನ್ಗಳ ಮೈಲುಗಲ್ಲು ಸ್ಥಾಪಿಸಿದ್ದರು. ಇದೀಗ ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಹೊಸದೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಈ ಮೂಲಕ ಅವರು 1983ರ ವಿಶ್ವ ಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಬಳಿಕ ಈ ಸಾಧನೆ ಮಾಡಿದ ಭಾರತದ ಆಟಗಾರ ಎನಿಸಿಕೊಂಡಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ ಮತ್ತು 2000 ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರ ಸಾಲಿಗೆ ಜಡೇಜಾ ಸೇರಿದ್ದಾರೆ. ಅವರು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶಮಿಮ್ ಹೊಸೈನ್ ಅವರ ವಿಕೆಟ್ ಪಡೆಯುವ ಮೂಲಕ ಈ ಸಾಧಕರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇದು ಅವರ 174ನೇಇನಿಂಗ್ಸ್ ಆಗಿದ್ದು ಅದರಲ್ಲಿ 200 ವಿಕೆಟ್ ಉರುಳಿಸಿದ್ದಾರೆ. ಸನತ್ ಜಯಸೂರ್ಯ, ಶಾಹಿದ್ ಅಫ್ರಿದಿ, ಶಕೀಬ್ ಅಲ್ ಹಸನ್ ಮತ್ತು ಡೇನಿಯಲ್ ವೆಟ್ಟೋರಿ ಈ ಸಾಧನೆ ಮಾಡಿರುವ ಇತರ ಅಂತಾರಾಷ್ಟ್ರೀಯ ಕ್ರಿಕೆಟಿಗರು.
ಇದನ್ನೂ ಓದಿ: Virat kohli : ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ವಾಟರ್ ಬಾಯ್, ಮೈದಾನದಲ್ಲಿ ಅವರ ಓಟವೇ ಸೂಪರ್
ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ ಪಡೆದ ಭಾರತದ 7ನೇ ಬೌಲರ್ ಎಂಬ ಹೆಗ್ಗಳಿಕೆಗೂ ಜಡೇಜಾ ಪಾತ್ರರಾಗಿದ್ದಾರೆ. ಅನಿಲ್ ಕುಂಬ್ಳೆ (337), ಜಾವಗಲ್ ಶ್ರೀನಾಥ್ (315), ಅಜಿತ್ ಅಗರ್ಕರ್ (288), ಜಹೀರ್ ಖಾನ್ (282), ಹರ್ಭಜನ್ ಸಿಂಗ್ (269) ಮತ್ತು ಕಪಿಲ್ ದೇವ್ (251) ಈ ಸಾಧನೆ ಮಾಡಿದ ಇತರ ಆಟಗಾರರು.
ಕಪಿಲ್ ದೇವ್ 225 ಏಕದಿನ ಪಂದ್ಯಗಳಲ್ಲಿ 253 ವಿಕೆಟ್ ಮತ್ತು 3783 ರನ್ ಗಳಿಸಿದ್ದಾರೆ. ಭಾರತದ ಪರ ಏಕದಿನ ಪಂದ್ಯಗಳಲ್ಲಿ 250 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜಡೇಜಾ ಅವರ ಬೌಲಿಂಗ್ ಅಂಕಿಅಂಶಗಳು 174 ಏಕದಿನ ಇನಿಂಗ್ಸ್ಗಳಲ್ಲಿ 36.83 ಸರಾಸರಿ ಮತ್ತು 4.89 ಎಕಾನಮಿ ರೇಟ್ನಂತೆ 200 ವಿಕೆಟ್ ಪಡೆದಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಬ್ಯಾಟಿಂಗ್ನಲ್ಲಿ ಅವರ ಕೊಡುಗೆಗಳು ಅಷ್ಟೇ ಗಮನಾರ್ಹವಾಗಿವೆ, 123 ಇನಿಂಗ್ಸ್ಗಳಿಂದ 32.22 ರ ಪ್ರಭಾವಶಾಲಿ ಸರಾಸರಿಯಲ್ಲಿ 2578 ರನ್ಗಳನ್ನು ಗಳಿಸಿದ್ದಾರೆ, ಜೊತೆಗೆ 13 ಅರ್ಧಶತಕಗಳನ್ನು ಬಾರಿಸಿದ್ದಾರೆ.