ಅಹಮದಾಬಾದ್: ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರು ತಮ್ಮ ತಾಯಿಗೆ ವಿಶೇಷವಾಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಗೆದ್ದ ಟಿ20 ವಿಶ್ವಕಪ್ 2024ರ ಟ್ರೋಫಿಯೊಂದಿಗೆ ತಾಯಿಯ ಜತೆ ನಿಂತಿರುವ ಪೆನ್ಸಿಲ್ ಆರ್ಟ್ ರೇಖಾಚಿತ್ರವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ತಾಯಿಯನ್ನು ಸ್ಮರಿಸಿದ್ದಾರೆ.
ಜಡೇಜಾ 17 ವರ್ಷ ಇರುವಾಗ ಅವರ ತಾಯಿ 2005 ರಲ್ಲಿ ನಿಧನರಾಗಿದ್ದರು. ತಾಯಿಯ ನಿಧನದ ವೇಳೆ ಜಡೇಜಾ ಭಾರತ U19 ತಂಡದ ಭಾಗವಾಗಿದ್ದರು. ಜಡೇಜಾ ತಮ್ಮ ಇನ್ಸ್ಟಾಗ್ರಾ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಮೂಲಕ ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ. “ನಾನು ಮೈದಾನದಲ್ಲಿ ಏನು ಮಾಡುತ್ತಿದ್ದರೂ ಅದು ನಿನಗಾಗಿ ಮಾತ್ರ” ಎಂದು ಬರೆದಿದ್ದಾರೆ.
ಜೂನ್ 29ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ಜಯ ಸಾಧಿಸಿ ಎರಡನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಪ್ರಶಸ್ತಿ ಮುಡಿಗೇರಿಸಿಕೊಂಡ ಮರುದಿನ ಜಡೇಜಾ ಟಿ 20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಣೆ ಮಾಡಿದ್ದರು.
ಇದನ್ನೂ ಓದಿ Ravindra Jadeja : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆಲ್ರೌಂಡರ್ ರವೀಂದ್ರ ಜಡೇಜಾ ವಿದಾಯ
“ಧನ್ಯವಾದ ತುಂಬಿದ ಹೃದಯದಿಂದ ನಾನು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ. ಹೆಮ್ಮೆಯಿಂದ ಓಡುವ ದೃಢವಾದ ಕುದುರೆಯಂತೆ, ನಾನು ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ ಮತ್ತು ಇತರ ಸ್ವರೂಪಗಳಲ್ಲಿ ಅದನ್ನು ಮುಂದುವರಿಸುತ್ತೇನೆ. ಟಿ 20 ವಿಶ್ವಕಪ್ ಗೆಲ್ಲುವ ನನ್ನ ಕನಸು ನನಸಾಯಿತು. ನೆನಪುಗಳು, ಹರ್ಷೋದ್ಗಾರಗಳು ಮತ್ತು ಅಚಲವಾದ ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಹೇಳುವ ಮೂಲಕ ನಿವೃತ್ತಿ ಪ್ರಕಟಿಸಿದ್ದರು.
ಸ್ಪಿನ್-ಬೌಲಿಂಗ್ ಆಲ್ರೌಂಡರ್ ಎಂಎಸ್ ಧೋನಿ ನಾಯಕತ್ವದಲ್ಲಿ ತಂಡಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ಪಂದ್ಯಾವಳಿಯಲ್ಲಿ ಅವರು ಹೆಚ್ಚು ಪ್ರಭಾವಶಾಲಿ ಪ್ರದರ್ಶನ ನೀಡಿರಲಿಲ್ಲ. 2009ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅವರು 74 ಪಂದ್ಯಗಳನ್ನು ಆಡಿದ್ದು, 515 ರನ್ ಹಾಗೂ 54 ವಿಕೆಟ್ ಪಡೆದಿದ್ದಾರೆ.
ಜಡೇಜಾ ಅವರ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅವರ ಫೀಲ್ಡಿಂಗ್. ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಅವರಂತಹ ಆಟಗಾರರನ್ನು ನಾವು ಹೊಂದಿದ್ದ ಸಮಯದಲ್ಲಿ ಸೌರಾಷ್ಟ್ರದ ಆಟಗಾರ ತಮ್ಮ ವೃತ್ತಿಜೀವನದುದ್ದಕ್ಕೂ ಅನೇಕ ಸಂದರ್ಭಗಳಲ್ಲಿ ಉತ್ತಮ ಫೀಲ್ಡಿಂಗ್ ಮಾಡಿದ್ದಾರೆ. ಅವರು ಎದುರಾಳಿ ತಂಡಕ್ಕೆ 20 ರನ್ಗಳನ್ನು ಫೀಲ್ಡಿಂಗ್ನಲ್ಲಿ ಬಿಟ್ಟುಕೊಡುತ್ತಿರಲಿಲ್ಲ. ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ನಿಯೋಜಿತ ಆಲ್ರೌಂಡರ್ಗಳಾಗಿ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಜಡೇಜಾ ಈಗ ಏಕದಿನ ಮತ್ತು ಟೆಸ್ಟ್ ಸ್ವರೂಪಗಳತ್ತ ಗಮನ ಹರಿಸಿದ್ದಾರೆ.