ನವದೆಹಲಿ: ಗುಜರಾತ್ ಟೈಟಾನ್ಸ್ ತಂಡ ಉಳಿಸಿಕೊಂಡರೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರು ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಹಾರಿರುವುದು, ಮುಂಬೈ ಇಂಡಿಯನ್ಸ್ ತಂಡವು ಟ್ರೇಡಿಂಗ್ ವಿಂಡೋ ಮೂಲಕ ಪಾಂಡ್ಯ ಅವರನ್ನು ಖರೀದಿಸಿರುವುದು ಸುದ್ದಿಯಾಗಿದೆ. ಐಪಿಎಲ್ (IPL 2024) ಆರಂಭಕ್ಕೂ ಮುನ್ನವೇ ಇಂತಹ ಹಲವು ಅಚ್ಚರಿಗಳು ನಡೆಯಲಿವೆ, ಆಟಗಾರರು ತಂಡ ಬದಲಾಯಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಹಾರ್ದಿಕ್ ಪಾಂಡ್ಯ ಅವರಂತೆಯೇ 2010ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಲು ಪ್ರಯತ್ನಿಸಿದ್ದ ರವೀಂದ್ರ ಜಡೇಜಾ (Ravindra Jadeja) ಅವರು ಆ ವರ್ಷ ಐಪಿಎಲ್‌ನಿಂದ ಬ್ಯಾನ್ ಆಗಿದ್ದರು.
ಹೌದು, 2008ರಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ, ಅದೇ ವರ್ಷ ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡ ಸೇರಿದ್ದರು. ರಾಜಸ್ಥಾನ ರಾಯಲ್ಸ್ ಪರವಾಗಿಯೂ ಜಡೇಜಾ ಉತ್ತಮ ಪ್ರದರ್ಶನ ತೋರಿದ್ದರು. ಎರಡು ವರ್ಷದ ಅವಧಿಯ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಿದ್ದ ರವೀಂದ್ರ ಜಡೇಜಾ, ಒಂದು ವರ್ಷ ಮೊದಲೇ ಹೆಚ್ಚಿನ ಸಂಭಾವನೆ ಬಯಸಿದ್ದರು. ಆದರೆ, ಸಂಭಾವನೆ ಹೆಚ್ಚಿಸಲು ರಾಜಸ್ಥಾನ ರಾಯಲ್ಸ್ ಒಪ್ಪಿರಲಿಲ್ಲ. ಹಾಗಾಗಿ, ರವೀಂದ್ರ ಜಡೇಜಾ ಅವರು ಮುಂಬೈ ಇಂಡಿಯನ್ಸ್ ತಂಡ ಸೇರಲು ಪ್ರಯತ್ನಿಸಿದ್ದರು. ಹೀಗೆ ಯತ್ನಿಸಿದ ಅವರನ್ನು 2010ರ ಐಪಿಎಲ್ ಟೂರ್ನಿಯಿಂದ ಬ್ಯಾನ್ ಮಾಡಲಾಗಿತ್ತು.
ಬ್ಯಾನ್ ಮಾಡಿದ್ದು ಏಕೆ?
ಐಪಿಎಲ್‌ನಲ್ಲಿ ವಿಂಡೋ ಟ್ರೇಡಿಂಗ್ ಮೂಲಕ ಯಾವುದೇ ಆಟಗಾರನು ಮತ್ತೊಂದು ತಂಡ ಸೇರಲು ಹಲವು ನಿಯಮಗಳಿವೆ. ಒಂದು ತಂಡದಲ್ಲಿರುವ ಆಟಗಾರನು ಗುತ್ತಿಗೆ ಅವಧಿ ಮುಗಿಯುವ ಮುನ್ನವೇ, ತಂಡದ ಗಮನಕ್ಕೆ ತರದೆ, ಮೂಲ ತಂಡದ ಮ್ಯಾನೇಜ್‌ಮೆಂಟ್ ಜತೆ ಖರೀದಿಸುವ ತಂಡವು ಖರೀದಿ ಕುರಿತು ಚರ್ಚಿಸದೆಯೇ ಬೇರೊಂದು ತಂಡವನ್ನು ಸೇರಲು ಆಗುವುದಿಲ್ಲ. ರವೀಂದ್ರ ಜಡೇಜಾ ಅವರು ಕೂಡ ರಾಜಸ್ಥಾನ ರಾಯಲ್ಸ್ ತಂಡದ ಜತೆಗಿನ ಒಪ್ಪಂದವನ್ನು ನವೀಕರಿಸದೆ, ಗಮನಕ್ಕೆ ತರದೆ, ಅವರು ಮುಂಬೈ ಇಂಡಿಯನ್ಸ್ ಸೇರಲು ಯತ್ನಿಸಿದ ಕಾರಣ ಅವರನ್ನು ಒಂದು ವರ್ಷ ನಿಷೇಧಿಸಲಾಗಿತ್ತು.
ಇದನ್ನೂ ಓದಿ: Hardik Pandya : ಮನೆಗೆ ಬಂದೆ; ಹಾರ್ದಿಕ್ ಪಾಂಡ್ಯ ಈ ರೀತಿ ಹೇಳಿಕೆ ನೀಡಲೊಂದು ಕಾರಣವಿದೆ
ಹಾರ್ದಿಕ್ ಪಾಂಡ್ಯ ಹಾರಿದ್ದು ಹೇಗೆ?
ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ, ತಂಡದ ಮ್ಯಾನೇಜ್‌ಮೆಂಟ್‌ಗೆ ಮುಂಬೈ ತಂಡಕ್ಕೆ ವಾಪಸಾಗುವ ಕುರಿತು ಇಂಗಿತ ವ್ಯಕ್ತಪಡಿಸಿದ್ದರು. ಅಲ್ಲದೆ, ಗುಜರಾತ್ ಟೈಟನ್ಸ್ ತಂಡದ ಮ್ಯಾನೇಜ್‌ಮೆಂಟ್ ಜತೆಗೆ ಮುಂಬೈ ಇಂಡಿಯನ್ಸ್ ತಂಡದ ಮ್ಯಾನೇಜ್‌ಮೆಂಟ್ ಮಾತುಕತೆ ನಡೆಸಿದ ಬಳಿಕವೇ ಖರೀದಿ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸುಮಾರು 15 ಕೋಟಿ ರೂ. ಕೊಟ್ಟು ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿಸಿದೆ ಎನ್ನಲಾಗಿದೆ.