ಬೆಂಗಳೂರು: ಮುಂಬರುವ ಐಪಿಎಲ್ ಆವೃತ್ತಿಯಲ್ಲಿ(IPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB 2024) ತಂಡಕ್ಕೆ ಟೀಮ್ ಇಂಡಿಯಾದ ಮಾಜಿ ಕೋಚ್ ಆಗಿದ್ದ ರವಿಶಾಸ್ತ್ರಿ(Ravi Shastri) ಅವರು ಮುಖ್ಯ ಕೋಚ್ ಆಗಿ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ.
2 ದಿನಗಳ ಹಿಂದೆ ಆರ್ಸಿಬಿ(Royal Challengers Bangalore) ಮುಂದಿನ ಆವೃತ್ತಿಗೆ ಮೇಜರ್ ಸರ್ಜರಿ ನಡೆಸಲು ತೀರ್ಮಾನಿಸಿದ್ದು, ಕೋಚ್ ಆಗಿರುವ ಸಂಜಯ್ ಬಂಗಾರ್(Sanjay Bangar) ಮತ್ತು ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್(Mike Hesson) ಅವರಿಗೆ ಗೇಟ್ ಪಾಸ್ ನೀಡಲಿದೆ ಎಂದು ವರದಿಯಾಗಿತ್ತು.
2022 ರಿಂದ ಆರ್ಸಿಬಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜಯ್ ಬಂಗಾರ್ ಅವರ ಒಪ್ಪಂದ ಮುಗಿದಿದೆ. ಅವರ ಕಾರ್ಯಾವಧಿಯಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರದ ಕಾರಣ ಅವರೊಂದಿಗಿನ ಒಪ್ಪಂದವನ್ನು ಫ್ರಾಂಚೈಸಿ ನವೀಕರಿಸಿಲ್ಲ ಎಂದು ತಿಳಿದುಬಂದಿದೆ. ಇದರ ಜತೆಗೆ ಕಳೆದ ನಾಲ್ಕು ವರ್ಷಗಳಿಂದ ತಂಡದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೈಕ್ ಹೆಸ್ಸನ್ ಅವರ ಕಾರ್ಯಾವಧಿ ಈ ವರ್ಷಕ್ಕೆ ಕೊನೆಗೊಳ್ಳಲಿದೆ. ಅವರ ಒಪ್ಪಂದವನ್ನು ನವೀಕರಿಸುವುದು ಅನುಮಾನ ಎನ್ನಲಾಗಿತ್ತು.
ಇದನ್ನೂ ಓದಿ IPL 2023: ಕನ್ನಡಿಗ ರಾಹುಲ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು
ಫ್ರಾಂಚೈಸಿಯ ಮೂಲಗಳ ಪ್ರಕಾರ ಭಾರತ ತಂಡದ ಮಾಜಿ ನಾಯಕ ಮತ್ತು ಕೋಚ್ ಆಗಿದ್ದ ರವಿಶಾಸ್ತ್ರಿ ಅವರು ಆರ್ಸಿಬಿ ಕೋಚ್ ಆಗುವುದು ಖಚಿತ ಎಂದು ತಿಳಿದುಬಂದಿದೆ. ಆದರೆ ಫ್ರಾಂಚೈಸಿ ಮತ್ತು ರವಿಶಾಸ್ತ್ರಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಅವರ ಒಡನಾಟ ಹಿಂದಿನಿಂದಲೂ ಉತ್ತಮವಾಗಿತ್ತು. ಕೋಚ್ ಹುದ್ದೆಯಿಂದ ಶಾಸ್ತ್ರಿ ಕೆಳಗಿಳಿಯುತ್ತಿದ್ದಂತೆ ಕೊಹ್ಲಿ ಕೂಡ ತಮ್ಮ ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದರು. ಇದೀಗ ಐಪಿಎಲ್ನಲ್ಲಿ ಈ ಜೋಡಿ ಮತ್ತೆ ಒಂದಾಗಲಿದ್ದಾರೆ ಎನ್ನಲಾಗಿದೆ. ಶಾಸ್ತ್ರಿ ಕೋಚಿಂಗ್ ಅವಧಿಯಲ್ಲೇ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಸತತ ಎರಡು ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು.
ಐಪಿಎಲ್ನ ನತದೃಷ್ಟ ತಂಡಗಳಲ್ಲಿ ಒಂದಾಗಿರುವ ಆರ್ಸಿಬಿ ಪ್ರತಿ ಬಾರಿಯೂ ಈ ಸಲ ಕಪ್ ನಮ್ದೇ ಎಂದು ಹೇಳುತ್ತಲೇ ಬಾರುತ್ತಿದೆ. ಆದರೆ ಇದುವರೆಗೂ ಕಪ್ ಕನಸು ಮಾತ್ರ ನನಸಾಗಿಯೇ ಇಲ್ಲ. ಸ್ವತಃ ಕನ್ನಡಿಗರು ಕೂಡ ಈ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಹೆಸರಿಗೆ ಮಾತ್ರ ಬೆಂಗಳೂರು ತಂಡ, ಒಬ್ಬ ಕನ್ನಡಿಗನಿಗೂ ಅವಕಾಶ ನೀಡುವುದಿಲ್ಲ. ಆಟಗಾರರ ಆಯ್ಕೆ ವಿಚಾರದಲ್ಲಿಯೂ ಕೋಚ್ ಮತ್ತು ಸಿಬ್ಬಂದಿಗಳು ಎಡವುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಇದೇ ಕಾರಣಕ್ಕೆ ಈ ಬಾರಿ ಫ್ರಾಂಚೈಸಿ ತಂಡದಲ್ಲಿ ಹಲವು ಬದಲಾವಣೆ ಮಾಡಲು ಮುಂದಾಗಿದೆ.
ಆರ್ಸಿಬಿ ಕೊನೆಯ ಬಾರಿಗೆ 2016ರಲ್ಲಿ ಫೈನಲ್ ಪ್ರವೇಶ ಪಡೆದಿತ್ತು. ಇದಾಗ ಬಳಿಕ ತಂಡ ಒಮ್ಮೆಯೂ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿಲ್ಲ. 2020, 2021 ಹಾಗೂ 2022 ರಲ್ಲಿ ಪ್ಲೇಆಫ್ ಪ್ರವೇಶ ಪಡೆದಿತ್ತು. ಈ ಬಾರಿ ಮೊದಲ ಸುತ್ತಿನಲ್ಲೇ ಅದರಲ್ಲೂ ತವರಿನಲ್ಲೇ ಸೋತು ಹೊರಬಿದ್ದಿತ್ತು. ಇದಕ್ಕೂ ಮುನ್ನ 2009 ಮತ್ತು 2011ರಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಅಲ್ಲಿಯೂ ಸೋಲು ಕಂಡಿತ್ತು. ಒಟ್ಟಾರೆ ಆರ್ಸಿಬಿ ಮೂರು ಬಾರಿ ಫೈನಲ್ ಪ್ರವೇಶಿಸಿ ರನ್ನರ್ಅಪ್ ಸ್ಥಾನ ಪಡೆದಿದೆ.