Site icon Vistara News

ಅತಿ ದೂರದ ಸಿಕ್ಸರ್ ಸಿಡಿಸಿದ ಆರ್​ಸಿಬಿ ಬ್ಯಾಟರ್ ಮ್ಯಾಕ್ಸ್​ವೆಲ್​; ವಿಡಿಯೊ ವೈರಲ್​

Glenn Maxwell

ಸಿಡ್ನಿ: ವೆಸ್ಟ್​ ಇಂಡೀಸ್​ ವಿರುದ್ಧದ ದ್ವಿತೀಯ ಟಿ20(Australia vs West Indies 2nd T20I) ಪಂದ್ಯದಲ್ಲಿ ಶತಕ ಬಾರಿಸುವ ಜತೆಗೆ ಬಹು ದೂರದ ಸಿಕ್ಸರ್​ ಬಾರಿಸಿಯೂ ಗ್ಲೆನ್ ಮ್ಯಾಕ್ಸ್​ವೆಲ್​(Glenn Maxwell) ಸುದ್ದಿಯಾಗಿದ್ದಾರೆ. ಆಸ್ಟ್ರೇಲಿಯಾ ಬ್ಯಾಟಿಂಗ್​ ಇನ್ನಿಂಗ್ಸ್​ನ 12ನೇ ಓವರ್​ನಲ್ಲಿ ಅಲ್ಜಾರಿ ಜೋಸೆಫ್​ ಎಸೆತದಲ್ಲಿ ಮ್ಯಾಕ್ಸ್​ವೆಲ್​ ಬರೋಬ್ಬರಿ 109 ಮೀಟರ್ ದೂರದ ಸಿಕ್ಸರ್​ ಬಾರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಈ ಸಿಕ್ಸರ್​ ಬಾರಿಸುವ ವೇಳೆ ಮ್ಯಾಕ್ಸ್​ವೆಲ್​ 41 ರನ್​ ಗಳಿಸಿದ್ದರು. ಸಿಕ್ಸರ್​ ನೆರವಿನಿಂದ 47 ರನ್​ ಕಲೆಹಾಕಿದರು. ಆ ಬಳಿಕವೂ ಹೊಡಿ ಬಡಿ ಆಟವಾಡಿದ ಮ್ಯಾಕ್ಸ್​ವೆಲ್​ ಕೇವಲ 50 ಎಸೆತಗಳಲ್ಲಿ 100 ರನ್​ ಪೂರ್ತಿಗೊಳಿಸಿದರು. ಮೈದಾನದ ಮೂಲೆ ಮೂಲೆಗೂ ಎಡ-ಬಲ ಬ್ಯಾಟಿಂಗ್​ ಶೈಲಿಯಲ್ಲಿ ಸಿಕ್ಸರ್ ಮತ್ತು​ ಬೌಂಡರಿ ಬಾರಿಸಿ 55 ಎಸೆತಗಳಲ್ಲಿ 120 ರನ್​ ಹೊಡೆದರು. ಅವರ ಈ ವಿಸ್ಫೋಟಕ ಬ್ಯಾಟಿಂಗ್​ ವೇಳೆ ಬರೋಬ್ಬರಿ 12 ಬೌಂಡರಿ ಮತ್ತು 8 ಸಿಕ್ಸರ್​ ಸಿಡಿಯಿತು.

ರೋಹಿತ್​ ದಾಖಲೆ ಸರಿಗಟ್ಟಿದ ಮ್ಯಾಕ್ಸ್​ವೆಲ್​


ಮ್ಯಾಕ್ಸ್​ವೆಲ್​ ಅವರು ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ 5 ಶತಕ ಬಾರಿಸಿದ ರೋಹಿತ್​ ಶರ್ಮ ಅವರ ದಾಖಲೆಯನ್ನು ಸರಿಗಟ್ಟಿದರು. ಇದೀಗ ಉಭಯ ಆಟಗಾರರು ಕೂಡ 5 ಶತಕ ಬಾರಿಸಿ ಅತಿ ಹೆಚ್ಚು ಶತಕ ಬಾರಿಸಿದ ಅಗ್ರ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್​ವೆಲ್​ ಅವರ ಈ ಬ್ಯಾಟಿಂಗ್​ ಸಾಹಸದಿಂದ ಆಸ್ಟ್ರೇಲಿಯಾ 34 ರನ್​ಗಳ ಗೆಲುವು ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.

ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ವಿಂಡೀಸ್ ತಂಡ​ 14 ರನ್​ಗಳಿಸುವಷ್ಟರಲ್ಲಿ ಆಸೀಸ್​ ತಂಡದ ಮೊದಲ ವಿಕೆಟ್​ ಕಿತ್ತರೂ ಕೂಡ ಆ ಬಳಿಕ ಲಯ ಕಳೆದುಕೊಂಡು ಸರಿಯಾಗಿ ದಂಡಿಸಿಕೊಂಡರು.​ ಆಸೀಸ್​ ಕೇವಲ 4 ವಿಕೆಟ್​ ಕಳೆದುಕೊಂಡು 241 ರನ್​ ಬಾರಿಸಿತು. ದೊಡ್ಡ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ವೆಸ್ಟ್​ ಇಂಡೀಸ್​ ನಿಗದಿತ 20 ಓವರ್​ ಬ್ಯಾಟಿಂಗ್​ ನಡೆಸಿ 9 ವಿಕೆಟ್​ಗೆ 207ರನ್ ಬಾರಿಸಲಷ್ಟೇ ಶಕ್ತವಾಯಿತು. ಮೊದಲ ಮೂವರು ಬ್ಯಾಟರ್​ಗಳಾದ ಬ್ರಾಂಡನ್ ಕಿಂಗ್(5), ಜಾನ್ಸನ್ ಚಾರ್ಲ್ಸ್(24) ಮತ್ತು ನಿಕೋಲಸ್​ ಪೂರನ್​(18) ಅಗ್ಗಕ್ಕೆ ಔಟಾದದ್ದು ತಂಡದ ಸೋಲಿಗೆ ನೇರ ಕಾರಣವಾಯಿತು. ಇದರಲ್ಲಿ ಕನಿಷ್ಠ ಒಬ್ಬರಾದರೂ 50 ರನ್​ ಬಾರಿಸುತ್ತಿದ್ದರೆ ಪಂದ್ಯವನ್ನು ಆರಾಮವಾಗಿ ಗೆಲ್ಲಬಹುದಿತ್ತು.

ಇದನ್ನೂ ಓದಿ ಹಿರಿಯರಂತೆ ಕಿರಿಯರಿಗೂ ವಿಶ್ವಕಪ್​ ಫೈನಲ್​ನಲ್ಲಿ ಸೋಲುಣಿಸಿದ ಆಸೀಸ್​; ಭಾರತದ 6ನೇ ಕಪ್​ ಪ್ರಯತ್ನ ವಿಫಲ

ನಾಯಕ ರೋವ್ಮನ್ ಪೊವೆಲ್ ಏಕಾಂಗಿಯಾಗಿ ಹೋರಾಟ ನಡೆಸಿ 63 ರನ್​ ಬಾರಿಸಿದರು. ಆ್ಯಂಡ್ರೆ ರಸೆಲ್​ 37 ರನ್​ ಬಾರಿಸಿ ಮಾರ್ಕಸ್​ ಸ್ಟೋಯಿನಿಸ್​ಗೆ ವಿಕೆಟ್​ ಒಪ್ಪಿಸಿದರು. ಜಾಸನ್​ ಹೋಲ್ಡರ್​ ಅಜೇಯ 28 ರನ್​ ಬಾರಿಸಿದರೂ ಅವರಿಂದ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇತ್ತಂಡಗಳ ನಡುವಣ ಮೂರನೇ ಹಾಗು ಅಂತಿಮ ಟಿ20 ಪಂದ್ಯ ಫೆಬ್ರವರಿ 13ರಂದು ನಡೆಯಲಿದೆ. ಈ ಪಂದ್ಯದಲ್ಲಾದರೂ ಗೆದ್ದು ವಿಂಡೀಸ್​ ವೈಟ್​ ವಾಶ್​ ಮುಖಭಂಗದಿಂದ ಪಾರಾಗಲಿದೆಯಾ ಎಂದು ಕಾದು ನೋಡಬೇಕಿದೆ.

Exit mobile version