ನ್ಯೂಯಾರ್ಕ್: ಅಮೆರಿಕದಲ್ಲಿರುವ ಕರ್ನಾಟಕ ಮೂಲಕದ ಆರ್ಸಿಬಿಯ(RCB) ಅಪಟ್ಟ ಅಭಿಮಾನಿಯೊಬ್ಬ(RCB fan) ತನ್ನ ಕಾಲೇಜಿನ ಘಟಿಕೋತ್ಸವ(ಕಾನ್ವೋಕೇಷನ್)(convocation) ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸುವಾಗ ಆರ್‌ಸಿಬಿ ತಂಡದ ಜೆರ್ಸಿಯನ್ನು ಪ್ರದರ್ಶಸಿದ್ದಾನೆ. ಈ ವಿಡಿಯೊ ವೈರಲ್ ಆಗಿದೆ.
ಯಾವುದೇ ಒಂದು ವಿಶ್ವವಿದ್ಯಾನಿಲಯದ ಅಥವಾ ಇತರ ಅಂಗೀಕೃತ ಉನ್ನತ ಶಿಕ್ಷಣ ಸಂಸ್ಥೆಗಳ ಅಧ್ಯಯನ ಘಟಕವೊಂದರ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಇಲ್ಲವೇ ಯಾವುದಾದರೊಂದು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಥವಾ ಪಾಂಡಿತ್ಯ ಸಾಧಿಸಿದ ಖ್ಯಾತ ವ್ಯಕ್ತಿಗಳಿಗೆ ಪದವಿ/ಪ್ರಶಸ್ತಿಯನ್ನು ನೀಡಲು ಏರ್ಪಡಿಸುವ ಸಾಂಪ್ರದಾಯಿಕ ಸಮಾರಂಭವನ್ನು ಘಟಿಕೋತ್ಸವ ಎಂದು ಕರೆಯಲಾಗುತ್ತದೆ. ಆರ್ಸಿಬಿಯ ಈ ಅಭಿಮಾನಿ ಕೂಡ ಇತಂಹದ್ದೇ ಸಾಧನೆ ಮಾಡಿದ್ದ. ಆದರೆ ಆತನ ಸಾಧನೆಗಿಂತ ಆರ್‌ಸಿಬಿ ಚೆನ್ನೈ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ್ದೇ ಆತನಿಗೆ ಎಲ್ಲಿಲ್ಲದ ಸಂತಸ ತಂದಿದೆ. ಕರಣ್ ಎನ್ನುವಾತ ಈ ವಿಡಿಯೊವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ.
ಆರ್‌ಸಿಬಿ ಅಭಿಮಾನಿಗಳು ತಮ್ಮ ಭಾವೋದ್ರಿಕ್ತ ಮತ್ತು ಅಚಲ ಬೆಂಬಲಕ್ಕೆ ಹೆಸರುವಾಸಿಯಾಗಿದ್ದಾರೆ. ಫ್ರ್ಯಾಂಚೈಸಿಯು ಭೌಗೋಳಿಕ ಗಡಿಗಳು ಮತ್ತು ಸಂಸ್ಕೃತಿಗಳನ್ನು ಮೀರಿದ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ. ಈ ಬಾರಿ ಆರಂಭಿಕ ಹಂತದಲ್ಲಿ ಸತತ ಸೋಲು ಕಂಡಿದ್ದ ಆರ್‌ಸಿಬಿ ಆ ಬಳಿಕ ಪವಾಡ ಸೃಷ್ಟಿಸಿದಂತೆ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಿತ್ತು. ಬುಧವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಆಡಲಿದೆ. ಗೆದ್ದರೆ 2ನೇ ಕ್ವಾಲಿಫೈಯರ್ ಪಂದ್ಯವನ್ನಾಡಲಿದೆ.
ಶನಿವಾರ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್‌ಸಿಬಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ಗೆ 191 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಗಿತ್ತು. ಈ ಪಂದ್ಯ ಫೈನಲ್ ಪಂದ್ಯಕ್ಕೂ ಮಿಗಿಲಾದ ಕಾತುಕ ಸೃಷ್ಟಿಸಿತ್ತು.
ಇದನ್ನೂ ಓದಿ IPL 2024: ಮೋದಿ ಸ್ಟೇಡಿಯಂನಲ್ಲಿ ಫುಟ್ಬಾಲ್ ಆಡಿದ ಆರ್‌ಸಿಬಿ ಆಟಗಾರರು
ಆರ್‌ಸಿಬಿ ಗೆಲುವಿನ ಬಳಿಕ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಸಂಭ್ರಮಾಚರಣೆ ಕಂಡು ಬಂದಿತ್ತು. ಪಂದ್ಯ ಮುಕ್ತಾಯವಾದಾಗ ತಡರಾತ್ರಿಯಾಗಿದ್ದರೂ ಅಭಿಮಾನಿಗಳ ಸಡಗರಕ್ಕೆ ಕೊರತೆ ಇರಲಿಲ್ಲ. ಪುಟ್ಟ ಮಕ್ಕಳು ಸೇರಿದಂತೆ ಆರ್‌ಸಿಬಿ ಫ್ಯಾನ್ಸ್ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದ್ದರು. ಮಕ್ಕಳಂತೂ ಈ ಸಲ ಕಪ್ ನಮ್ದೆ ಎನ್ನುವ ಘೋಷಣೆ ಕೂಗುತ್ತಿರುವುದು ಕಂಡು ಬಂದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಎದುರಿನ ರಸ್ತೆ ಬ್ಲಾಕ್ ಮಾಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ಇದು ನಿಜವಾದ ಹೊಸ ಅಧ್ಯಾಯ ಎನ್ನುವ ಮಾತು ಎಲ್ಲೆಡೆ ಕೇಳಿ ಬಂದಿತ್ತು.
ಆರ್ಸಿಬಿಯ ಗೆಲುವಿಗೆ ಫ್ರಾಂಚೈಸಿಯ ಮಾಜಿ ಮಾಲಿಕ ವಿಜಯ್ ಮಲ್ಯ(Vijay Mallya) ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದರು. “ಆರ್‌ಸಿಬಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ತಂಡಕ್ಕೆ ಹೃದಯ ಪೂರಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸತತ ಸೋಲುಗಳಿಂದ ಗೆಲುವಿನ ಟ್ರ್ಯಾಕ್ಗೆ ಮರಳಿರುವುದು ಅದ್ಭುತ. ಟ್ರೋಫಿ ಗೆಲ್ಲುವ ಕಡೆಗೆ ಆರ್‌ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕು” ಎಂದು ಮುಂದಿನ ಪಂದ್ಯಗಳಿಗೂ ಶುಭ ಹಾರೈಸಿದ್ದರು.