ಬೆಂಗಳೂರು: ಪ್ರತಿ ಐಪಿಎಲ್(IPL 2024) ಆರಂಭದ ಸಂದರ್ಭದಲ್ಲಿ ಆರ್‌ಸಿಬಿ ಕ್ರೇಜ್ ಹುಟ್ಟಿಸುತ್ತದೆ. ದುರಾದೃಷ್ಟವಶಾತ್ ಈ ಕ್ರೇಜ್ ಬಹುಕಾಲ ಉಳಿಯುವುದಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಅದೇ ರಾಗ ಅದೇ ಹಾಡು. ಅದರಲ್ಲಿಯೂ ಈ ಬಾರಿ ಹೊಸ ಅಧ್ಯಾಯ ಅಂತ ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಆದರೆ ಇದೀಗ ಕ್ಷಮಿಸಿ ಮುಂದಿನ ಬಾರಿ ಕಪ್ ನಮ್ದೇ ಅನ್ನುವ ಹಂತಕ್ಕೆ ತಲುಪಿದೆ. ತಂಡ ಎಷ್ಟೇ ಸೋಲು ಕಂಡರೂ ಕೂಡ ಅಭಿಮಾನಿಗಳಿಗೆ(RCB Fans) ಮಾತ್ರ ತಂಡದ ಮೇಲಿರುವ ಅಭಿಮಾನ ಕಿಂಚಿತ್ತು ಕಡಿಮೆಯಾಗಿಲ್ಲ. ಕಪ್ ಗೆದ್ದರೂ, ಗೆಲ್ಲದಿದ್ದರೂ ಆರ್‌ಸಿಬಿ ತಂಡವನ್ನು ಬಿಟ್ಟುಕೊಟುವ ಮಾತೇ ಇಲ್ಲ ಎನ್ನುತ್ತಿದ್ದಾರೆ. ಜತೆಗೆ ಮುಂದೊಂದು ದಿನ ಖಂಡಿತವಾಗಿಯೂ ಕಪ್ ಗೆದ್ದೇ ಗೆಲ್ಲುತ್ತದೆ ಎಂದು ರಾಮನ ಬರುವಿಕೆಗೆ ಶಬರಿ ಹಗಲಿರುಳು ಕಾದಂತೆ ಕಾಯುತ್ತಿದ್ದಾರೆ.
ಈ ಬಾರಿ ಆರ್‌ಸಿಬಿ ಈಗಾಗಲೇ ಆಡಿರುವ 6 ಪಂದ್ಯದಲ್ಲಿ 5ರಲ್ಲಿ ಸೋಲುಂಡಿದೆ. ಹೀಗಾಗಿ ಕಪ್ ನಮ್ದೇ ಅನ್ನೋದಿರಲಿ, ಪ್ಲೇ ಆಫ್ ಹಾದಿಗೂ ಹರಸಾಹಸ ಮಾಡಬೇಕಾಗಿದೆ. ಈ ಬಾರಿ ಕಪ್ ನಮ್ದೇ, ಹೊಸ ಅಧ್ಯಾಯ ಅಂತ ಆರ್‌ಸಿಬಿ ಆಟಗಾರರು ಹೇಳಿಕೊಂಡಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಆದರೆ, ಇದೀಗ ಆರ್‌ಸಿಬಿ ನಿರಂತರ ಸೋಲು ಅನುಭವಿಸುತ್ತಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಇತರ ತಂಡಗಳ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಈ ಎಲ್ಲ ಟ್ರೋಲ್ಗಳ ಮಧ್ಯೆಯೂ ಆರ್ಸಿಬಿಯ ಅಪಟ್ಟ ಅಭಿಮಾನಿಯೊಬ್ಬರು ತನ್ನ 6 ತಿಂಗಳ ಮಗುವನ್ನು ಆರ್‌ಸಿಬಿ ಅಭಿಮಾನಿಗಳ ಕ್ಲಬ್ಗೆ ಸೇರ್ಪಡೆ ಮಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ(viral video).
ಇದನ್ನೂ ಓದಿ IPL 2024: ಕ್ರಿಕೆಟ್ ಅಭಿಮಾನಿಗಳಿಗೆ ಇಂದು ಭರ್ಜರಿ ರಸದೌತಣ; ಒಂದೇ ದಿನ 2 ಪಂದ್ಯ
ಹೌದು, ಕೊಡಗು ಮೂಲದ ದಂಪತಿ ಪಕ್ಕಾ ಆರ್‌ಸಿಬಿ ಅಭಿಮಾನಿಗಳಾಗಿದ್ದು ತಮ್ಮ ಮುದ್ದಾದ ಮಗನ ನಾಮಕರಣ ಸಮಾರಂಭವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜರ್ಸಿಯ ಮೇಲೆ ತಮ್ಮ ಮುಗುವಿನ ಹೆಸರನ್ನು ಹಾಕುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಮಗುವಿಗೆ ತ್ರಿಷಾನ್ ಗೌಡ ಎಂದು ಹೆಸರಿಡಲಾಗಿದೆ. ಆರ್‌ಸಿಬಿ ತಂಡದ ಜೆರ್ಸಿ ಮೇಲೆ ಮಗುವಿನ ಹೆಸರು ಬರೆದು 6 ನಂಬರ್ ನೀಡಲಾಗಿದೆ. ಮಗುವಿನ ತಾಯಿ ಆರ್‌ಸಿಬಿ ಜೆರ್ಸಿಯನ್ನು ಅನಾವರಣ ಮಾಡುವ ಮೂಲಕ ತಮ್ಮ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಈ ಕ್ಯೂಟ್ ವಿಡಿಯೊ ಕಂಡು ಆರ್‌ಸಿಬಿ ಅಭಿಮಾನಿಗಳು ಮಗುವಿಗೆ ಹಾರೈಸಿದ್ದಾರೆ. ಜತೆಗೆ ಅಭಿಮಾನಿಗಳ ಬಳಗಕ್ಕೆ ಸ್ವಾಗತಿಸಿದ್ದಾರೆ.
ಪ್ಲೇ ಆಫ್ ಪ್ರವೇಶ ಹೇಗೆ?
ಆರ್ಸಿಬಿಗೆ ಇನ್ನು 8 ಪಂದ್ಯಗಳು ಬಾಕಿ ಉಳಿದಿವೆ. ಈ ಪಂದ್ಯಗಳಲ್ಲಿ 7 ಪಂದ್ಯ ಗೆದ್ದರೆ ಆರ್ಸಿಬಿಗೆ ಪ್ಲೇ ಆಫ್ ಪ್ರವೇಶ ಪಡೆಯಬಹುದು. 7 ಪಂದ್ಯ ಗೆದ್ದರೆ 16 ಅಂಕ ಸಿಗಲಿದೆ. ಈಗಾಗಲೇ ಒಂದು ಪಂದ್ಯ ಗೆದ್ದಿದೆ. ಒಂದೊಮ್ಮೆ ಆರ್‌ಸಿಬಿ ಮುಂದಿನ ಪಂದ್ಯಗಳಲ್ಲಿ 2 ಪಂದ್ಯ ಸೋತರೆ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ. ಇನ್ನೊಂದು ಅವಕಾಶವೆಂದರೆ ತನಗಿಂತ ಮೇಲಿರುವ ತಂಡಗಳು ಸತತ ಸೋಲು ಕಂಡರೆ ಆಗ ಕ್ಷೀಣ ಅವಕಾಶವೊಂದು ಲಭಿಸುವ ಸಾಧ್ಯತೆಯೂ ಇದೆ. ಒಟ್ಟಾರೆಯಾಗಿ ಆರ್ಸಿಬಿಗೆ ಮುಂದಿನ ಪಂದ್ಯಗಳು ಮಸ್ಟ್ ವಿನ್ ಗೇಮ್ ಆಗಿದೆ.