ಮುಂಬಯಿ: ಮಹಿಳೆಯರ ಪ್ರೀಮಿಯರ್ ಲೀಗ್ನ (WPL 2023) ಆರಂಭಿಕ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಆರ್ಸಿಬಿ ತಂಡ ಅದರ ಫಲ ಉಂಡಿದೆ. ಉದ್ಘಾಟನಾ ಆವೃತ್ತಿಯ ಟೂರ್ನಿಯ ಪ್ಲೇ ಆಫ್ ಹಂತಕ್ಕೇರಲು ತಂಡಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಈ ಸಲ ಕಪ್ ಇಲ್ಲ ಎಂದು ಹೇಳುವಂತಾಗಿದೆ. ಸೋಮವಾರ (ಮಾರ್ಚ್ 20ರಂದು) ನಡೆದ ಡಬಲ್ಹೆಡರ್ನ ಮೊದಲ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ವಿರುದ್ಧದ ಯುಪಿ ವಾರಿಯರ್ಸ್ ಬಳಗ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕನಸು ಭಗ್ನಗೊಂಡಿತು. ಮುಂಬಯಿ ಇಂಡಿಯನ್ಸ್ ವಿರುದ್ಧದ ತನ್ನ ಕೊನೇ ಪಂದ್ಯದಲ್ಲಿ ಆಡುವ ಮೂಲಕ ಅಭಿಯಾನ ಮುಗಿಸಬೇಕಾಗಿದೆ.
ಆರ್ಸಿಬಿ ತಂಡ ಮೊದಲು ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಬಳಿಕ ಎರಡು ಪಂದ್ಯಗಳಲ್ಲಿ ಗೆಲುವು ಕಂಡಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಯುಪಿ ವಾರಿಯರ್ಸ್ ತಂಡ ತನ್ನ ಕೊನೇ ಎರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತು, ಆರ್ಸಿಬಿ ತಂಡ ಮುಂಬಯಿ ಇಂಡಿಯನ್ಸ್ ವಿರುದ್ಧದ ಹಣಾಹಣಿಯಲ್ಲಿ ಉತ್ತಮ ರನ್ರೇಟ್ನೊಂದಿಗೆ ವಿಜಯ ಸಾಧಿಸಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತು. ಮೂರನೇ ತಂಡವಾಗಿ ಆರ್ಸಿಬಿ ಪ್ಲೇಆಫ್ಗೇರುತ್ತಿತ್ತು. ಆದರೆ, ಸೋಮವಾರದ ಪಂದ್ಯದಲ್ಲಿ ಯಪಿ ಗೆದ್ದ ಕಾರಣ ಆರ್ಸಿಬಿಗಿದ್ದ ಕೊನೇ ಅವಕಾಶ ಇಲ್ಲವಾಗಿದೆ.
ಮೂರೇ ತಂಡಗಳಿಗೆ ಅವಕಾಶ
ಮಹಿಳೆಯರ ಪ್ರೀಮಿಯರ್ ಲೀಗ್ನ ಪ್ಲೇಆಫ್ ಹಂತಕ್ಕೇರಲು ಮೂರು ತಂಡಗಳಿಗೆ ಮಾತ್ರ ಅವಕಾಶವಿದೆ. ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡ ತಂಡಗಳ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಅಂಕಪಟ್ಟಿಯ ಮೊದಲ ತಂಡ ಹಾಗೂ ಎಲಿಮಿನೇಟರ್ ಹಣಾಹಣಿಯ ವಿಜೇತರ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಯುಪಿ ತಂಡಕ್ಕೆ ಗೆಲವು ತಂದುಕೊಟ್ಟ ಗ್ರೇಸ್, ಮೆಗ್ರಾಥ್
ಗ್ರೇಸ್ ಹ್ಯಾರಿಸ್ (72) ಅವರ ವಿಸ್ಫೋಟಕ ಅರ್ಧ ಶತಕ ಹಾಗೂ ತಾಹಿಲಾ ಮೆಕ್ಗ್ರಾಥ್ ಅವರ 57 ರನ್ಗಳ ನೆರವಿನಿಂದ ಮಿಂಚಿದ ಯುಪಿ ವಾರಿಯರ್ಸ್ ತಂಡ ಜಯ ಸಾಧಿಸಿತ್ತು. ಬ್ರಬೊರ್ನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಜಯಂಟ್ಸ್ ತಂಡ 6 ವಿಕೆಟ್ಗೆ 178 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ಬಳಗ 1.5 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿ ಸಂಭ್ರಮಾಚರಣೆ ಮಾಡಿತ್ತು.
ಇದನ್ನೂ ಓದಿ : WPL 2023: ಮಹಿಳೆಯರ ಪ್ರಿಮಿಯರ್ ಲೀಗ್ನಲ್ಲಿ ತಂಡಗಳ ಬ್ಯಾಟಿಂಗ್ ರನ್ ರೇಟ್
ಒಂದು ಹಂತದಲ್ಲಿ ಯುಪಿ ತಂಡ 39 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು ಈ ವೇಳೆ ಜತೆಯಾದ ತಾಹಿಲಾ ಹಾಗೂ ಗ್ರೇಸ್ ಹ್ಯಾರಿಸ್ 88 ರನ್ಗಳನ್ನು ಪೇರಿಸಿದರು ಅದರಲ್ಲೂ ಗ್ರೇಸ್ ಹ್ಯಾರಿಸ್ 41 ಎಸೆತಗಳಲ್ಲಿ 7 ಫೋರ್ ಹಾಗೂ 4 ಸಿಕ್ಸರ್ ಸಮೇತ 72 ರನ್ ಬಾರಿಸಿದರು. ಮೆಗ್ರಾಥ್ ಅವರು 38 ಎಸೆತಗಳಲ್ಲಿ 11 ಫೋರ್ ಮೂಲಕ 57 ರನ್ ಗಳಿಸಿದರು.
ತಾಹಿಲಾ ಔಟಾದ ಬಳಿಕ ಆಡಲು ಬಂದ ದೀಪ್ತಿ ಶರ್ಮಾ 6 ರನ್ಗೆ ವಿಕೆಟ್ ಒಪ್ಪಿಸಿದರು. ಆದರೆ ಸೋಫಿ ಎಕ್ಲೆಸ್ಟೋನ್ ಅಜೇಯ 19 ರನ್ ಬಾರಿಸುವ ಮೂಲಕ ತಂಡವನ್ನು ಗೆಲ್ಲಿಸಿದರು. ಸಿಮ್ರಾನ್ ಶಿಖಾ 1 ರನ್ ಬಾರಿಸಿದರು.
ಗಾರ್ಡ್ನರ್ ಅರ್ಧ ಶತಕ
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಗುಜರಾತ್ ಪರಿಸ್ಥಿತಿಯೂ ಉತ್ತಮವಾಗಿರಲಿಲ್ಲ. ಸೋಫಿ ಡಂಕ್ಲಿ 23 ರನ್ ಬಾರಿಸಿ ಔಟಾದರೆ, ಲಾರಾ ವೋಲ್ವರ್ತ್ 17 ರನ್ಗೆ ವಿಕೆಟ್ ಒಪ್ಪಿಸಿದರು. ಹರ್ಲಿನ್ ಡಿಯೋಲ್ 4 ರನ್ಗೆ ಸೀಮಿತಗೊಂಡರು. ಈ ವೇಳೆ ಉತ್ತಮವಾಗಿ ಬ್ಯಾಟ್ ಬೀಸಿದ ದಯಾಲನ್ ಹೇಮಲತಾ (57) ಹಾಗೂ ಆ್ಯಶ್ಲೀ ಗಾರ್ಡ್ನರ್ (60) ಅರ್ಧ ಶತಕಗಳನ್ನು ಬಾರಿಸುವ ಜತೆಗೆ 97 ರನ್ಗಳ ಜತೆಯಾಟ ನೀಡಿದರು. ಇವರಿಬ್ಬರ ಸಾಧನೆಯಿಂದ ಗುಜರಾತ್ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.