ಅಮಹದಾಬಾದ್: ಕೋಟೆಯ ಎಲ್ಲ ಬಾಗಿಲುಗಳನ್ನು ಮುಚ್ಚಿದರೂ, ಬೆಳಕು ತೂರುವುದಕ್ಕೊಂದು ಸಣ್ಣ ಕಿಂಡಿ ಇದ್ದರು ಸಾಕು ಜೀವನ ಹೋರಾಟ ಮುಂದುವರೆಸುವುದಕ್ಕೆ ಎನ್ನುವ ಮಾತನ್ನು ಆರ್ಸಿಬಿ(RCB IPL Records) ನಿಜ ಮಾಡಿದೆ. ಆರಂಭಿಕ ಹಂತದಲ್ಲಿ 7 ಸೋಲು ಕೊಂಡು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಗಿ ಇನ್ನೇನು ಟೂರ್ನಿಯಿಂದ ಹೊರಬೀಳುತ್ತದೆ ಎನ್ನುವ ಸ್ಥಿತಿ ಎದುರಿಸಿತ್ತು. ಆದರೆ ಹೋರಾಡುವ ಛಲ ಮತ್ತು ನಂಬಿಕೆಯೊಂದನ್ನು ಗಟ್ಟಿಯಾಗಿರಿಸಿದ್ದ ಆಗಾರರು ತಂಡವನ್ನು ಪ್ಲೇ ಆಫ್ ಪ್ರವೇಶಿಸುವಂತೆ ಮಾಡಿದರು. ಇದೀಗ ನಾಳೆ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಆಟಗಾರರು ರಾಜಸ್ಥಾನ್ ವಿರುದ್ಧದ ಕಣಕ್ಕಿಳಿಯಲು ಸಜ್ಜಾಗಿಗೆ ನಿಂತಿದ್ದಾರೆ. ಆರ್ಸಿಬಿಯ ಇದುವರೆಗಿನ 16 ಐಪಿಎಲ್ನ ಸಾಧನೆಯ ಇಣುಕು ನೋಡ ಇಂತಿದೆ.
ಮೂರು ಭಾರಿ ಫೈನಲ್
ಪ್ರತಿ ಆವೃತ್ತಿಯಲ್ಲಿಯೂ ಈ ಸಲ ಕಪ್ ನಮ್ದೇ ಎಂದು ಅಭಿಯಾನ ಆರಂಭಿಸುವ ಆರ್ಸಿಬಿ ನಿರಾಸೆ ಕಂಡಿದ್ದೇ ಹೆಚ್ಚು. ಒಟ್ಟು ಮೂರು ಬಾರಿ ಫೈನಲ್ ಪ್ರವೇಶಿಸಿದರೂ ಕಪ್ ಮಾತ್ರ ಗೆಲ್ಲಲು ಸಾಧ್ಯವಾಗಿಲ್ಲ. ಮೂರೂ ಫೈನಲ್ ಪ್ರವೇಶದ ವೇಳೆಯೂ ತಂಡದಲ್ಲಿ ವಿಶ್ವದ ಬಲಿಷ್ಠ ಆಟಗಾರರು ಈ ತಂಡದಲ್ಲಿದ್ದರು. ಆದರೂ ಕೂಡ ಲಕ್ ಎನ್ನುವುದು ಮಾತ್ರ ತಂಡಕ್ಕೆ ಕೈ ಹಿಡಿಯುತ್ತಿರಲಿಲ್ಲ. ಲೀಗ್ ಹಂತದಲ್ಲಿ ಎಷ್ಟೇ ಸೊಗಸಾದ ಆಟವಾಡಿದ್ದರೂ ಕೂಡ ಫೈನಲ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿ ಕಪ್ ಗೆಲ್ಲಲು ವಿಫಲವಾಗಿತ್ತು. ಒಟ್ಟು 5 ಬಾರಿ ಪ್ಲೇ ಆಫ್ಗೆ ಪ್ರವೇಶ ಪಡೆದಿತ್ತು.
ಇದನ್ನೂ ಓದಿ IPL 2024: ಮೋದಿ ಸ್ಟೇಡಿಯಂನಲ್ಲಿ ಫುಟ್ಬಾಲ್ ಆಡಿದ ಆರ್ಸಿಬಿ ಆಟಗಾರರು
ಆರ್ಸಿಬಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದು, 2009ರಲ್ಲಿ. ಎದುರಾಳಿ ಆ್ಯಡಂ ಗಿಲ್‌ಕ್ರಿಸ್ಟ್ ನೇತೃತ್ವದ ಡೆಕ್ಕನ್ ಚಾರ್ಜರ್ಸ್(Deccan Chargers). ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಕ್ಕನ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 143 ರನ್ ಬಾರಿಸಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ 9 ವಿಕೆಟ್ಗೆ ಕೇವಲ 137 ರನ್ ಮಾತ್ರ ಗಳಿಸಲಷ್ಟೇ ಶಕ್ತವಾಗಿ 6 ರನ್ ಅಂತರದಿಂದ ಸೋಲು ಕಂಡಿತ್ತು.
ಎರಡನೇ ಬಾರಿ ಆರ್ಸಿಬಿ ಫೈನಲ್ ಪ್ರವೇಶಿಸಿದ್ದು 2011ರಲ್ಲಿ. ಮೊದಲ ಬಾರಿಗೆ ಕಪ್ ಗೆಲ್ಲಲು ವಿಫಲವಾಗಿದ್ದ ಆರ್ಸಿಬಿ ತನ್ನ 2ನೇ ಪ್ರಯತ್ನದಲ್ಲಿ ಕಪ್ ಗೆಲ್ಲಲಿದೆ ಎಂದು ಅಭಿಮಾನಿಗಳು ಬಲವಾಗಿ ನಂಬಿದ್ದರು. ಆದರೆ ಇಲ್ಲಿಯೂ ಆರ್ಸಿಬಿ ವಿಫಲವಾಗಿತ್ತು. ಹಾಲಿ ಚಾಂಪಿಯನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ನಲ್ಲಿ ಗೆದ್ದು ಸತತವಾಗಿ 2ನೇ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು. ಈ ಪಂದ್ಯದಲ್ಲಿ ಆರ್ಸಿಬಿಗೆ 58 ರನ್ ಸೋಲು ಎದುರಾಗಿತ್ತು.
ಆರ್ಸಿಬಿ ಅಭಿಮಾನಿಗಳಿಗೆ ಮೂರನೇ ಬಾರಿಗೆ ನಿರಾಸೆಯಾದ ಐಪಿಎಲ್ ಆವೃತ್ತಿ ಎಂದರೆ 2016ನೇ ಆವೃತ್ತಿ. ಬಲಿಷ್ಠ ಆಟಗಾರ ಕ್ರಿಸ್ ಗೇಲ್, ಎಬಿಡಿ ವಿಲಿಯರ್ಸ್, ಶೇನ್ ವಾಟ್ಸನ್ ಮತ್ತು ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು ತಂಡದಲ್ಲಿದ್ದರೂ ಕೂಡ ಕಪ್ ಗೆಲ್ಲುವಲ್ಲಿ ಆರ್ಸಿಬಿ ವಿಫಲವಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) 7 ವಿಕೆಟ್ಗೆ 208 ರನ್ ಬಾರಿಸಿತು. ದಿಟ್ಟವಾಗಿ ಗುರಿ ಬೆನ್ನಟ್ಟಿಕೊಂಡು ಹೋದ ಆರ್ಸಿಬಿ ಮೊದಲ ವಿಕೆಟ್ಗೆ 114 ರನ್ ಒಟ್ಟುಗೂಡಿಸಿತು. ಈ ವೇಳೆ ಆರ್ಸಿಬಿ ಅಭಿಮಾನಿಗಳೆಲ್ಲ ಈ ಸಲ ಕಪ್ ನಮ್ದೇ ಎಂದು ನಂಬಿದ್ದರು. ಆದರೆ, ನಂಬುಗೆಯ ಬ್ಯಾಟರ್ಗಳೆಲ್ಲ ಸತತವಾಗಿ ವಿಕೆಟ್ ಒಪ್ಪಿಸಿ ತಂಡದ ಸೋಲಿಗೆ ಕಾರಣವಾದರು. ಭರ್ತಿ 200 ರನ್ ಗಳಿಸಿ 8 ರನ್ ಅಂತರದ ಸೋಲು ಕಂಡಿತ್ತು.
ಈ ಬಾರಿ ಹೊಸ ಅಧ್ಯಾಯ ಎಂದು ಹೇಳಿ ಅಭಿಯಾನ ಆರಂಭಿಸಿದ ಆರ್ಸಿಬಿ ಎಲಿಮಿನೇಟರ್ ಪಂದ್ಯದಲ್ಲಿಯೂ ಗೆದ್ದು ಆ ಬಳಿಕ ಕ್ವಾಲಿಫೈಯರ್ನಲ್ಲಿಯೂ ಜಯಶಾಲಿಯಾಗಿ ಫೈನಲ್ ಪ್ರವೇಶಿಸಿ ಚೊಚ್ಚಲ ಪ್ರಶಸ್ತಿ ಗೆಲ್ಲುವಂತಾಗಲಿ ಎನ್ನುವುದು ಕೋಟಿ ಆರ್ಸಿಬಿ ಅಭಿಮಾನಿಗಳ ಹಾರೈಕೆಯಾಗಿದೆ.