Site icon Vistara News

Asha Sobhana : ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಆರ್​ಸಿಬಿ ಆಟಗಾರ್ತಿ

Asha Sobhana

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ ಮಹಿಳಾ) ತಂಡದ ಆಟಗಾರ್ತಿ ಆಶಾ ಶೋಭನಾ ಜಾಯ್ (Asha Sobhana) ಬಾಂಗ್ಲಾದೇಶ ಮಹಿಳೆಯರ ವಿರುದ್ಧದ 4 ನೇ ಟಿ 20 ಪಂದ್ಯದಲ್ಲಿ ಭಾರತೀಯ ರಾಷ್ಟ್ರೀಯ ತಂಡಕ್ಕೆ (National Team) ಪಾದಾರ್ಪಣೆ ಮಾಡಿದರು. ಈ ಮೂಲಕ ಅವರು ಮಿನ್ನು ಮಣಿ (Minnu Mani) ಮತ್ತು ಸಜನಾ ಸಜೀವನ್ (Sajana Sajeevan) ನಂತರ ಭಾರತಕ್ಕಾಗಿ ಪದಾರ್ಪಣೆ ಮಾಡಿದ ಕೇರಳದ ಮೂರನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸರಣಿಯ ಮೊದಲ ಟಿ 20 ಯಲ್ಲಿ ಸಜನಾ ಪಾದಾರ್ಪಣೆ ಮಾಡಿದ್ದರು.

ಸಜೀವನ್ ಸಜನಾ ಮತ್ತು ಶೋಭನಾ ಇಬ್ಬರೂ ಬಾಂಗ್ಲಾದೇಶ ಮಹಿಳೆಯರ ವಿರುದ್ಧದ ಪಂದ್ಯದಲ್ಲಿ ಆಡುತ್ತಿದ್ದಾರೆ. ಈ ಮೂಲಕ ಭಾರತ ಮಹಿಳಾ ತಂಡ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.

ಮಂಧಾನಾ ಬಳಿಯಿಂದ ಕ್ಯಾಪ್ ಪಡೆದ ಆಶಾ ಶೋಭನಾ

ಆಶಾ ಶೋಭನಾ ಅವರು ಆರ್​ಸಿಬಿ ಮಹಿಳಾ ತಂಡದ ನಾಯಕಿ, ಭಾರತದ ಉಪನಾಯಕಿ ಸ್ಮೃತಿ ಮಂದಾನ ಅವರಿಂದ ಚೊಚ್ಚಲ ಕ್ಯಾಪ್ ಪಡೆದರು. ತಿರುವನಂತಪುರಂನ 33 ವರ್ಷದ ಲೆಗ್ ಸ್ಪಿನ್ನರ್ ಮಹಿಳಾ ಐಪಿಎಲ್ (ಡಬ್ಲ್ಯುಪಿಎಲ್) ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. 15 ಪಂದ್ಯಗಳಿಂದ 17 ವಿಕೆಟ್​​ಗಳನ್ನು ಪಡೆದಿದ್ದಾರೆ.

ಡಬ್ಲ್ಯುಪಿಎಲ್​ನಲ್ಲಿ ಐದು ವಿಕೆಟ್ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: IPL 2024 : ಧೋನಿ ಡಕ್​ಔಟ್ ಆಗುವಾಗ ಜೋರಾಗಿ ನಕ್ಕ ಪ್ರೀತಿ ಜಿಂಟಾ; ಇಲ್ಲಿದೆ ವಿಡಿಯೊ

ಪಂದ್ಯದಲ್ಲಿ ಭಾರತಕ್ಕೆ ಜಯ

ಭಾರತ ಮತ್ತು ಬಾಂಗ್ಲಾದೇಶ ನಡುವಿನ ನಾಲ್ಕನೇ ಟಿ 20 ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 5.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿತ್ತು. ಈ ವೇಳೆ ಮಳೆ ಸುರಿಯಿತು. ಹೀಗಾಗಿ ಪಂದ್ಯವನ್ನು 14 ಓವರ್​ಗಳಿಗೆ ಸೀಮಿತಗೊಳಿಸಲಾಯಿತು.

ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಅವರ ಉತ್ತಮ ಆಟದ ನೆರವಿನಿಂದ ಭಾರತ 6 ವಿಕೆಟ್ ನಷ್ಟಕ್ಕೆ 14 ಓವರ್​ಗಳಲ್ಲಿ 122 ರನ್ ಗಳಿಸಿತು. ಎರಡು ಪ್ರಮುಖ ವಿಕೆಟ್​​ಗಳನ್ನು ಪಡೆಯುವ ಮೂಲಕ ಮಾರುಫಾ ಅಕ್ಟರ್ ಬಾಂಗ್ಲಾದೇಶದ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದರು. ಬಳಿಕ ಬ್ಯಾಟ್ ಮಾಡಿದ ಬಾಂಗ್ಲಾ ತಮ್ಮ ಪಾಲಿನ 14 ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ ನಷ್ಟಕ್ಕೆ 68 ರನ್ ಬಾರಿಸಿ 56 ರನ್​ಗಳಿಂದ ಸೋಲು ಒಪ್ಪಿಕೊಂಡಿತು. ಹೀಗಾಗಿ ಸರಣಿಯು 4-0 ಅಂತರದಿಂದ ಭಾರತಕ್ಕೆ ದೊರೆಯಿತು.

ಪಂದ್ಯದಲ್ಲಿ ಆಶಾ ಶೋಭನಾ ಅತ್ಯುತ್ತಮ ಬೌಲಿಂಗ್ ಸಾಧನೆ ತೋರಿದರು. ತಮ್ಮ 3 ಓವರ್​ಗಳ ಸ್ಪೆಲ್​ನಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದರು. ದೀಪ್ತಿ ಶರ್ಮಾ 13 ರನ್​ ನೀಡಿ 2 ವಿಕೆಟ್ ತಮ್ಮದಾಗಿಸಿಕೊಂಡರು.

Exit mobile version