Site icon Vistara News

IPL 2024 : ಬಟ್ಲರ್​ ಸೆಂಚುರಿ, ಆರ್​ಸಿಬಿಗೆ ಹೀನಾಯ ಸೋಲು; ಕೊಹ್ಲಿ ಶತಕದ ಸಾಧನೆ ವ್ಯರ್ಥ

IPL 2024

ಜೈಪುರ: ವಿರಾಟ್​ ಕೊಹ್ಲಿಯ ದಾಖಲೆಯ 8ನೇ ಐಪಿಎಲ್ ಶತಕದ ಹೊರತಾಗಿಯೂ ಬೌಲರ್​​ಗಳ ಕೆಟ್ಟ ಪ್ರದರ್ಶನದಿಂದ ಸೊರಗಿದ ರಾಯ್ ಚಾಲೆಂಜರ್ಸ್​ ಬೆಂಗಳೂರು ತಂಡ (Royal Challengers Bangalore) ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2024) ಮತ್ತೊಂದು ಸೋಲಿಗೆ ಒಳಗಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್​ನ 19ನೇ ಪಂದ್ಯದಲ್ಲಿ… ವಿಕೆಟ್​ಗಳ ಮುಖಭಂಗ ಎದುರಿಸಿತು. ಇದು ಆರ್​ಸಿಬಿ ಪಾಲಿಗೆ ಹಾಲಿ ಆವೃತ್ತಿಯಲ್ಲಿ ಸತತ ಮೂರನೇ ಸೋಲು. ಅಂತೆಯ ಆಡಿರುವ ಒಟ್ಟು ಐದು ಪಂದ್ಯಗಳಲ್ಲಿ ನಾಲ್ಕನೇ ಪರಾಜಯ. ಕೇವಲ ಒಂದು ಜಯ ಗಳಿಸಿ 2 ಅಂಕ ಪಡೆದಿರುವ ಆರ್​ಸಿಬಿ ಈ ಬಾರಿ ಪ್ಲೇಆಫ್​ ಹಂತಕ್ಕೇರುವುದು ಬಹುತೇಕ ಸಂಶಯ.

ಇಲ್ಲಿನ ಸವಾಯ್​ ಮಾನ್​ ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟ ಮಾಡಿಕೊಂಡರು 183 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ 19.1 ಓವರ್​ಗಳಲ್ಲಿ 4 ವಿಕೆಟ್ ಗೆ 189 ರನ್ ಬಾರಿಸಿ ಸುಲಭ ವಿಜಯ ತನ್ನದಾಗಿಸಿಕೊಂಡಿತು. 58 ಎಸೆತಗಳಲ್ಲಿ ಶತಕ ಬಾರಿಸಿದ ಜೋಸ್ ಬಟ್ಲರ್​ ಗೆಲುವಿನ ರೂವಾರಿ ಎನಿಸಿಕೊಂಡರು. ಅವರದ್ದು ಕೂಡ ಐಪಿಎಲ್​ನಲ್ಲಿ 6ನೇ ಶತಕವಾಗಿದೆ. ಈ ಮೂಲಕ ಕ್ರಿಸ್​ಗೇಲ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.

ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇದು ಸತತ ನಾಲ್ಕನೇ ಗೆಲುವಾಗಿದೆ. ಅಲ್ಲದೆ ಹಾಲಿ ಆವೃತ್ತಿಯಲ್ಲಿ ತನ್ನ ಅಜೇಯ ಓಟ ಮುಂದುವರಿಸಿದೆ. ಅದೀಗ ನಾಲ್ಕು ಗೆಲುವುಗಳ ಸಮೇತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಸಂಜು, ಬಟ್ಲರ್​ ಜತೆಯಾಟ

ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್​ ಶೂನ್ಯಕ್ಕೆ ಔಟಾಗುವುದರೊಂದಿಗೆ ಆರ್​​ಸಿಬಿಗೆ ಚೈತನ್ಯ ಸಿಕ್ಕಿತು. ಆದರೆ, ಆ ಬಳಿಕ ಆರ್​ಸಿಬಿ ಬೌಲರ್​ಗಳು ಎದುರಾಳಿ ತಂಡದ ಆಟಗಾರರನ್ನು ಕಟ್ಟಿ ಹಾಕಲು ವಿಫಲಗೊಂಡರು. ಹೀಗಾಗಿ ಮತ್ತೊಬ್ಬ ಆರಂಭಿಕ ಬ್ಯಾಟರ್​ ಜೋಸ್ ಬಟ್ಲರ್​ (ಅಜೇಯ 100) ಹಾಗೂ ಎರಡನೇ ಕ್ರಮಾಂಕದಲ್ಲಿ ಬಂದ ನಾಯಕ ಸಂಜು ಸ್ಯಾಮ್ಸನ್​ (69) ಇನಿಂಗ್ಸ್ ಕಟ್ಟಿದರು. ಇವರಿಬ್ಬರು ಎರಡನೇ ವಿಕೆಟ್​​​ಗೆ 147 ರನ್ ಜತೆಯಾಟವಾಡಿ ಆರ್​​ಸಿಬಿಯ ಆಸೆಗೆ ತಣ್ಣೀರು ಎರಚಿದರು.

ಸ್ಪರ್ಧಾತ್ಮಕ ಗುರಿ ಪೇರಿಸಿದ ಆರ್​ಸಿಬಿ

ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ಉತ್ತಮ ಆರಂಭವನ್ನೇ ಪಡೆಯಿತು. ವಿರಾಟ್ ಕೊಹ್ಲಿ ಹಾಗೂ ಫಾಫ್​ ಡು ಪ್ಲೆಸಿಸ್​ ಮೊದಲ ವಿಕೆಟ್​ಗೆ 125 ರನ್ ಬಾರಿಸಿದರು. ರನ್​ ಗಳಿಸಿದ ಹೊರತಾಗಿಯೂ ತಂಡದ ಸ್ಟ್ರೈಕ್​ ರೇಟ್ ಉತ್ತಮವಾಗಿರಲಿಲ್ಲ. ಏತನ್ಮಧ್ಯೆ ಪ್ಲೆಸಿಸ್​ 33 ಎಸೆತಕ್ಕೆ 44 ರನ್ ಬಾರಿಸಿ ಔಟಾದರು. ಇದಾದ ಬಳಿಕ ಆಡಲು ಬಂದ ಗ್ಲೆನ್​ ಮ್ಯಾಕ್ಸ್​ವೆಲ್ ಮತ್ತೊಂದು ಫ್ಲಾಫ್ ಶೋ ಕೊಟ್ಟರು. ಅವರು 3 ಎಸೆತ ನುಂಗಿ 1 ರನ್ ಬಾರಿಸಿ ಕ್ಲೀನ್ ಬೌಲ್ಡ್ ಆದರು.

ಇದನ್ನೂ ಓದಿ: Virat Kohli : ಐಪಿಎಲ್​ 2024ರ ಮೊದಲ ಶತಕ ಬಾರಿಸಿದ ಕೊಹ್ಲಿ; ಅವರ ಒಟ್ಟು ಐಪಿಎಲ್ ಶತಕಗಳೆಷ್ಟು?

ಗ್ಲೆನ್​ ಔಟಾಗುತ್ತಿದ್ದಂತೆ ಆರ್​ಸಿಬಿ ರನ್​ ವೇಗ ಕಡಿಮೆಯಾಯಿತು. ಅಂತೆಯೇ ಮೊದಲ ಅವಕಾಶ ಪಡೆದ ಸೌರವ್​ ಚೌಹಾಣ್ 9 ರನ್ ಬಾರಿಸಿ ಔಟಾದರು. ಕೊನೆಯಲ್ಲಿ ಆಡಲು ಬಂದ ಕ್ಯಾಮೆರಾನ್ ಗ್ರೀನ್ 6 ಎಸೆತಕ್ಕೆ ಕೇವಲ 5 ರನ್ ಬಾರಿಸಿ ಔಟಾಗದೇ ಉಳಿದರು. ಅವಕಾಶ ಇದ್ದರೂ ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಮಾಡದ ಆರ್​​ಸಿಬಿ ಸೋಲಿನ ಸುಳಿಗೆ ಸಿಲುಕಿತು.

ಕೊಹ್ಲಿ ಶತಕ ಸಂಭ್ರಮ

ಸೋಲಿನ ನಡುವೆಯೂ ಆರ್​​​ಸಿಬಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಶತಕ ಖುಷಿ ನೀಡಿದರು. ಅವರು 72 ಎಸೆತಗಳನ್ನು ಬಳಸಿಕೊಂಡು 12 ಫೋರ್​ ಹಾಗೂ 4 ಸಿಕ್ಸರ್​ ಸಮೇತ 113 ರನ್​ ಬಾರಿಸಿದರು. ಆರಂಭದಿಂದಲೂ ಸಂಯಮದಿಂದ ಆಡಿದ ಅವರು ಅಜೇಯರಾಗಿ ಉಳಿದು ಶತಕ ಬಾರಿಸಿದರು. ಇದು ಅವರು ಐಪಿಎಲ್ ವೃತ್ತಿ ಜೀವನದ 8ನೇ ಶತಕ. ಈ ಸಾಧನೆ ಮಾಡಿದ ಮೊದಲ ಆಟಗಾರ ಅವರು. 6 ಶತಕ ಬಾರಿಸಿದ ಮಾಜಿ ಆಟಗಾರ ಕ್ರಿಸ್​ ಗೇಲ್​ ನಂತರದ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಅವರು ಐಪಿಎಲ್​ನಲ್ಲಿ 7500 ರನ್ ಬಾರಿಸಿದ ದಾಖಲೆಯನ್ನು ಮಾಡಿದರು.

Exit mobile version