ಬೆಂಗಳೂರು: ನಾಳೆ(ಶನಿವಾರ) ನಡೆಯುವ ಪ್ಲೇ ಆಫ್ ಪ್ರವೇಶದ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ(RCB vs CSK) ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಮಳೆ ಭೀತಿ ಇದ್ದರೂ ಕೂಡ ಕಾಕತಾಳೀಯ ಲೆಕ್ಕಾಚಾರವೊಂದರ ಪ್ರಕಾರ ಆರ್‌ಸಿಬಿ ಗೆಲುವು ಸಾಧಿಸಲಿದೆ ಎಂದು ಅಭಿಮಾನಿಗಳು ಪಂದ್ಯಕ್ಕೂ ಮುನ್ನವೇ ಭವಿಷ್ಯ ನುಡಿಯಲಾರಂಭಿಸಿದ್ದಾರೆ.
ಹೌದು, ಆರ್‌ಸಿಬಿ ಮತ್ತು ಚೆನ್ನೈ 2013ರಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 18ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆಡಿತ್ತು. ಈ ಪಂದ್ಯ ಕೂಡ ಶನಿವಾರವೇ ಆಗಿತ್ತು. ಅಲ್ಲದೆ ಪಂದ್ಯಕ್ಕೆ ಮಳೆಯ ಭೀತಿಯೂ ಎದುರಾಗಿತ್ತು. ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯಂತೆ ಪಂದ್ಯಕ್ಕೆ ಮಳೆ ಕೂಡ ಅಡ್ಡಿಪಡಿಸಿತ್ತು. ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಅನುಸಾರ ಈ ಪಂದ್ಯವನ್ನು 8 ಓವರ್ಗೆ ಸೀಮಿತಗೊಳಿಸಿ ಆಡಿಸಲಾಗಿತ್ತು.
ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 8 ಓವರ್ಗೆ ಕೇವಲ 2 ವಿಕೆಟ್ ಕಳೆದುಕೊಂಡು 106 ರನ್ ಪೇರಿಸಿತ್ತು. ಕಿಂಗ್ ವಿರಾಟ್ ಕೊಹ್ಲಿ ಅಜೇಯ 56 ರನ್ ಬಾರಿಸಿದರೆ, ಕ್ರಿಸ್ ಗೇಲ್ 28 ರನ್ ಬಾರಿಸಿದ್ದರು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಕಳೆದುಕೊಂಡು 82 ರನ್ಗಳಿಸಲಷ್ಟೇ ಶಕ್ತವಾಗಿ 24 ರನ್ಗಳ ಸೋಲು ಕಂಡಿತ್ತು.
ಇದೀಗ ನಾಳೆ ನಡೆಯುವ ಪಂದ್ಯವೂ ಕೂಡ ಮೇ 18 ಶನಿವಾರವಾಗಿದೆ. ಜತೆಗೆ ಪಂದ್ಯಕ್ಕೆ ಮಳೆಯ ಭೀತಿ ಕೂಡ ಇದೆ. 11 ವರ್ಷಗಳ ಹಿಂದೆ ನಡೆದಿದ್ದ ಪಂದ್ಯಕ್ಕೂ ನಾಳೆ ನಡೆಯುವ ಪಂದ್ಯಕ್ಕೂ ದಿನಾಂಕ, ದಿವಸ ಮತ್ತು ಮಳೆಯ ಅಂಕಿ ಸಂಖ್ಯೆಗಳ ಚಮತ್ಕಾರ ತಾಳೆಯಾಗುತ್ತಿದ್ದು ಈ ಆಧಾರದಲ್ಲಿ ಆರ್‌ಸಿಬಿ ಗೆಲುವು ಸಾಧಿಸಲಿದೆ ಎಂದು ಅಭಿಮಾನಿಗಳು ಭವಿಷ್ಯ ನುಡಿಯಲಾರಂಭಿಸಿದ್ದಾರೆ.
ಹವಾಮಾನ ಇಲಾಖೆ ಈಗಾಗಕೇ ಪಂದ್ಯಕ್ಕೆ ಶೇ.89 ರಷ್ಟು ಮಳೆ(Rain forecast for Bengaluru) ಇದೆ ಎಂದು, ಒಂದು ವಾರಗಳ ಹಿಂದೆಯೇ ಎಚ್ಚರಿಕೆ ನೀಡಿತ್ತು. ಶುಕ್ರವಾರ ಬೆಳಗ್ಗಿನಿಂದಲೇ ಬೆಂಗಳೂರಿನಲ್ಲಿ ಭಾರೀ ಮಳೆಯೂ ಆಗಿದೆ. ಹೀಗಾಗಿ ಶನಿವಾರವೂ ಮಳೆ ಇರುವುದು ಖಚಿತಗೊಂಡಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಆರ್‌ಸಿಬಿ ಪ್ಲೇ ಆಫ್ನಿಂದ ಹೊರಬೀಳಲಿದೆ. 15 ಅಂಕ ಪಡೆಯುವ ಚೆನ್ನೈ ಪ್ಲೇ ಆಫ್ಗೆ ಎಂಟ್ರಿ ಕೊಡಲಿದೆ. ಈಗಾಗಲೇ ಮೂರು ತಂಡಗಳಾದ ಕೆಕೆಆರ್, ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ಪ್ಲೇ ಆಫ್ ತಲುಪಿದೆ. ಒಂದು ಸ್ಥಾನ ನಾಳೆ ನಿರ್ಧಾರವಾಗಲಿದೆ.
ಇದನ್ನೂ ಓದಿ IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್, ಆರ್ಆರ್ ಬಳಿಕ ಪ್ಲೇಆಫ್ಗೇರಿದ ಎಸ್ಆರ್ಎಚ್
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿರುವ ಕಾರಣ. ಮಳೆ ಬಂದರೂ ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಮಳೆ ಬಂದರೂ ಸೀಮಿತ ಓವರ್ಗಳ ಪಂದ್ಯವನ್ನು ನಿರೀಕ್ಷಿಸಬಹುದು.
ಒಂದೊಮ್ಮೆ ಆರ್‌ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದರೂ ಕೂಡ ಪ್ಲೇ ಆಫ್ ಟಿಕೆಟ್ ಖಚಿತವಾಗುವುದಿಲ್ಲ. ರನ್‌ರೇಟ್ ಲೆಕ್ಕಾಚಾರದಲ್ಲಿ ಚೆನ್ನೈಯನ್ನು ಆರ್‌ಸಿಬಿ ಕನಿಷ್ಠ 18 ರನ್ನುಗಳಿಂದ ಮಣಿಸಬೇಕಿದೆ. ಚೇಸಿಂಗ್ ಲೆಕ್ಕಾಚಾರ ಬೇರೆಯೇ ಇದೆ. ಕನಿಷ್ಠ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು. ಸಣ್ಣ ಅಂತರದ ಗೆಲುವು ಕಂಡರೆ ಕಷ್ಟ.