ಬೆಂಗಳೂರು: ಈ ಬಾರಿ ಹೊಸ ಅಧ್ಯಾಯ ಎಂದು ಹೇಳಿಕೊಂಡು ಆರಂಭಿಕ ಹಂತದಲ್ಲಿ ಸತತ ಸೋಲಿಗೆ ಸಿಲುಕಿ ಇನ್ನೇನು ಟೂರ್ನಿಯಿಯಿಂದ ಹೊರಬೀಳಬೇಕು ಎನ್ನುವಷ್ಟರಲ್ಲಿ ಪುಟಿದೆದ್ದ ಆರ್ಸಿಬಿ(RCB vs CSK), ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ 4ನೇ ತಂಡವಾಗಿ ಪ್ಲೇ ಆಫ್ಗೆ ಅಧಿಕೃತ ಎಂಟ್ರಿ ಕೊಟಿದೆ. ಪ್ಲೇ ಆಫ್ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್ ಬಾರಿಸುತ್ತಿದ್ದರೂ ಆರ್ಸಿಬಿ ಪ್ಲೇ ಆಫ್ನಿಂದ ಹೊರ ಬೀಳುತ್ತಿತ್ತು.
ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್ಸಿಬಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಮೊದಲ ವಿಕೆಟ್ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ಗೆ 191 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್ ಎನಿಸಿಕೊಂಡಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಚೆನ್ನೈಗೆ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಮೊದಲ ಎಸೆತದಲ್ಲೇ ಆಘಾತವಿಕ್ಕಿದರು. ನಾಯಕ ಋತುರಾಜ್ ಗಾಯಕ್ವಾಡ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಚೆನ್ನೈ ಡೇಂಜಸರ್ ಬ್ಯಾಟರ್ ಡೇರಿಯಲ್ ಮಿಚೆಲ್(4) ಅವರ ವಿಕೆಟ್ ಕೂಡ ಕಳೆದುಕೊಂಡಿತು. ಆರ್ಸಿಬಿ ಪಾಳಯದಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಸಾಗಲಿಲ್ಲ. ಮೂರನೇ ವಿಕೆಟ್ಗೆ ರಹಾನೆ ಮತ್ತು ರಚಿನ್ ರವೀಂದ್ರ ಸೇರಿಕೊಂಡು ಉತ್ತಮ ಜತೆಯಾಟವೊಂದನ್ನು ಸಂಘಟಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಉಭಯ ಆಟಗಾರರ ಈ ಬ್ಯಾಟಿಂಗ್ನಿಂದ ತಂಡಕ್ಕೆ 10 ಸರಾಸರಿಯಲ್ಲಿ ರನ್ ಹರಿದುಬಂತು.
ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಫರ್ಗುಸನ್ ಕೊನೆಗೂ ಬೇರ್ಪಡಿಸಿದರು. 33 ರನ್ ಗಳಿಸಿದ ವೇಳೆ ರಹಾನೆ ವಿಕೆಟ್ ಕಳೆದುಕೊಂಡರು. ರಹಾನೆ ಮತ್ತು ರಚಿನ್ ಸೇರಿಕೊಂಡು ಮೂರನೇ ವಿಕೆಟ್ಗೆ 66 ರನ್ ಒಟ್ಟುಗೂಡಿಸಿದರು. ಕರ್ನಾಟಕ ಮೂಲದವರೇ ಆದ ನ್ಯೂಜಿಲ್ಯಾಂಡ್ ಆಟಗಾರ ರಚಿನ್ ರವೀಂದ್ರ ಅರ್ಧಶತಕ ಬಾರಿಸುವ ಮೂಲಕ ಕನ್ನಡಿಗರಿಗೇ ಕಂಟಕವಾಗುವ ಸೂಚನೆ ನೀಡಿದರು. ಆದರೆ ಇವರ ಬ್ಯಾಟಿಂಗ್ ಅಬ್ಬರಕ್ಕೆ ಸ್ವಪ್ನಿಲ್ ಸಿಂಗ್ ಬ್ರೇಕ್ ಹಾಕಿದರು. ಮ್ಯಾಕ್ಸ್ವೆಲ್ ಓವರ್ನಲ್ಲಿ ಜೀವದಾನ ಪಡೆದರೂ ಕೂಡ ಇದೇ ಓವರ್ನಲ್ಲಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಬಲೆಗೆ ಬಿದ್ದರು. ರಚಿನ್ 37 ಎಸೆತಗಳಿಂದ 61 ರನ್(5 ಬೌಂಡರಿ, 3 ಸಿಕ್ಸರ್) ಬಾರಿಸಿದರು. ಈ ವಿಕೆಟ್ ಪತನದ ಬಳಿಕ ಶಿವಂ ದುಬೆ(7) ವಿಕೆಟ್ ಕೂಡ ಬಿತ್ತು.
ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ಧೋನಿ ಸೇರಿಕೊಂಡು 201 ರನ್ ಬಾರಿಸಲು ಶಕ್ತಿ ಮೀರಿ ಪ್ರಯತ್ನಪಟ್ಟರೂ ಕೂಡ ಇದು ಸಾಧ್ಯವಾಗಲಿಲ್ಲ. ಧೋನಿ ಕ್ರೀಸ್ನಲ್ಲಿ ಇರುತ್ತಿದ್ದರೆ ಚೆನ್ನೈಗೆ ಗೆಲುವು ಖಚಿತವಾಗಿರುತ್ತಿತ್ತು. 6 ಎಸೆತಗಳಲ್ಲಿ 17 ರನ್ ಬೇಕಿದ್ದಾಗ ಧೋನಿ ಯಶ್ ದಯಾಳ್ ಅವರ ಮೊದಲ ಎಸೆತವನ್ನೇ ಸ್ಟೇಡಿಯಂನಿಂದ ಹೊರಗೆಡೆ ಬಾರಿಸಿ 6 ರನ್ ಕಲೆಹಾಕಿದರು. ಈ ಸಿಕ್ಸರ್ 110 ಮೀಟರ್ ದೂರಕ್ಕೆ ಸಿಡಿಯಿತು. ಆದರೆ ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಇಲ್ಲಿಗೆ ಚೆನ್ನೈ ಸೋಲು ಕೂಡ ಖಚಿತಗೊಂಡಿತು. ಅಂತಿಮ 2 ಎಸೆತದಲ್ಲಿ 10 ರನ್ ಗಳಿಸುವ ಯತ್ನದಲ್ಲಿ ಜಡೇಜಾ ವಿಫಲರಾದರು. ಧೋನಿ 13 ಎಸೆತಗಳಿಂದ 25 ರನ್ ಚಚ್ಚಿದರು.
18ರ ಅದೃಷ್ಟ ಗೆದ್ದ ಆರ್ಸಿಬಿ
ವಿಶೇಷವೆಂದರೆ ಆರ್ಸಿಬಿಗೆ ಮೇ 18 ಎನ್ನುವುದು ಬಹಳ ಅದೃಷ್ಟದ ದಿನವಾಗಿತ್ತು. ಹೌದು, ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಈ ದಿನದಂದು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿತ್ತು. ಹೀಗಾಗಿ ಇಂದು ಕೂಡ ಆರ್ಸಿಬಿ ಗೆಲುವು ಸಾಧಿಸಬಹುದು ಎನ್ನುವುದು ಅಭಿಮಾನಿಗಳ ಬಲವಾದ ನಂಬಿಕೆಯಾಗಿತ್ತು. ಅದರಂತೆ ಆರ್ಸಿಬಿ ಗೆಲುವು ಸಾಧಿಸಿ ಅಭಿಮಾನಿಗಳ ನಂಬಿಕೆಯನ್ನು ಉಳಿಸಿಕೊಂಡಿದೆ. ಮೇ 18ರಂದು ಆರ್ಸಿಬಿ ವಿರುದ್ಧ ಚೆನ್ನೈ 3ನೇ ಸೋಲಿಗೆ ತುತ್ತಾಯಿತು.
ಕೊಹ್ಲಿ-ಡುಪ್ಲೆಸಿಸ್ ಉತ್ತಮ ಜತೆಯಾಟ
ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಮೊದಲ ಓವರ್ನಲ್ಲಿ ಕೇವಲ 2 ರನ್ ಮಾತ್ರ ಗಳಿಸಿತು. ಆ ಬಳಿಕದ 2 ಓವರ್ನಲ್ಲಿ ಸಿಡಿದು ನಿಂತ ಕೊಹ್ಲಿ ಮತ್ತು ಡುಪ್ಲೆಸಿಸ್ 29 ರನ್ ಬಾಚಿದರು. 3 ಓವರ್ಗೆ 31 ರನ್ ಹರಿದು ಬಂತು. ಇದೇ ವೇಳೆ ಮಳೆ ಕೂಡ ಸುರಿಯಿತು. ಕೆಲ ಕಾಲ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಮಳೆ ನಿಂತ ಮೇಲೆ ಪಿಚ್ ವರ್ತನೆ ಕೊಂಚ ಬದಲಾಯಿತು. ಸ್ಪಿನ್ನರ್ಗಳು ನಿಯಂತ್ರ ಸಾಧಿಸಿದರು. ಇದರಿಂದ ಆರ್ಸಿಬಿಯ ರನ್ ಗಳಿಕೆಯೂ ಕೆಲ ಕಾಲ ನಿಧಾನಗತಿಯಿಂದ ಸಾಗಿತು.
ಪಿಚ್ ವರ್ತನೆಯನ್ನು ಅರಿತುಕೊಂಡ ಬಳಿಕ ಕೊಹ್ಲಿ ಮತ್ತು ಡು ಪ್ಲೆಸಿಸ್ ಮತ್ತೆ ಬಿರುಸಿನ ಬ್ಯಾಟಿಂಗ್ಗೆ ಮುಂದಾದರು. ಅನುಭವಿ ರವೀಂದ್ರ ಜಡೇಜಾಗೆ ಡು ಪ್ಲೆಸಿಸ್ ಸತತವಾಗಿ 2 ಸಿಕ್ಸರ್ ಚಚ್ಚಿದರು. ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ಬೌಂಡರಿ ಲೈನ್ನಲ್ಲಿ ಡ್ಯಾರಿಲ್ ಮಿಚೆಲ್ ಹಿಡಿದ ಅಸಾಮಾನ್ಯ ಕ್ಯಾಚ್ಗೆ ಬಲಿಯಾದರು. 47 ರನ್ ಗಳಿಸಿ ಕೇವಲ 3 ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಅವರ ಈ ಸೊಗಸಾದ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ದಾಖಲಾಯಿತು. ಕೊಹ್ಲಿ 4 ಸಿಕ್ಸರ್ ಬಾರಿಸುವ ಮೂಲಕ ಈ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದರು. ಕೊಹ್ಲಿ ಒಟ್ಟು 36 ಸಿಕ್ಸರ್ ಬಾರಿಸಿದ್ದಾರೆ. ಲಕ್ನೋ ತಂಡ ನಿಕೋಲಸ್ ಪೂರನ್ ಕೂಡ 36 ಸಿಕ್ಸರ್ ಬಾರಿಸಿದ್ದಾರೆ. ಇದು ಮಾತ್ರವಲ್ಲದೆ ಕೊಹ್ಲಿ ಈ ಬಾರಿ 700 ರನ್ಗಳ ಗಡಿ ದಾಟಿದರು.
ಇದನ್ನೂ ಓದಿ IPL 2024 : ಹಾರ್ದಿಕ್ ಪಾಂಡ್ಯಗೆ ನಿಷೇಧ ಹೇರಿದ ಬಿಸಿಸಿಐ; ಮುಂದಿನ ಪಂದ್ಯದಲ್ಲಿ ಆಡದಂತೆ ತಾಕೀತು
ಕೊಹ್ಲಿ ವಿಕೆಟ್ ಪತನದ ಬಳಿಕ ಆಡಲಿಳಿದ ರಜತ್ ಪಾಟೀದಾರ್ ಕೂಡ ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತ ನೀಡಿದರು. ಆದರೆ ಸ್ಟ್ರೇಟ್ ಡ್ರೈ ಮಾಡುವ ಯತ್ನದಲ್ಲಿ ನಾನ್ ಸ್ಟ್ರೈಕರ್ನಲ್ಲಿದ್ದ ಡು ಪ್ಲೆಸಿಸ್ ಅವರನ್ನು ರನೌಟ್ ಆಗುವಂತೆ ಮಾಡಿದರು. ಪಾಟಿದಾರ್ ಹೊಡೆದ ಚೆಂಡು ಸ್ಯಾಂಟ್ನರ್ ಅವರ ಕೈಗೆ ತಗುಲಿ ನೇರವಾಗಿ ವಿಕೆಟ್ಗೆ ತಗುಲಿತು. ಕ್ರೀಸ್ ಬಿಟ್ಟು ನಿಂತಿದ್ದ ಡು ಪ್ಲೆಸಿಸ್ ರನೌಟ್ ಸಂಕಟಕ್ಕೆ ಸಿಲುಕಿದರು. ಡು ಪ್ಲೆಸಿಸ್ ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 54 ರನ್ ಬಾರಿಸಿದರು.
ಜೀವದಾನ ಪಡೆದ ಗ್ರೀನ್
ಮೂರನೇ ವಿಕೆಟ್ಗೆ ಜತೆಯಾದ ಕ್ಯಾಮರೂನ್ ಗ್ರೀನ್ ಮತ್ತು ಪಾಟಿದಾರ್ ಕೂಡ ಉತ್ತಮ ಜತೆಯಾಟವೊಂದನ್ನು ಸಂಘಟಿಸಿದರು. ಇದೇ ವೇಳೆ ಗ್ರೀನ್ ಅವರು ನಾಯಕ ಋತುರಾಜ್ ಗಾಯಕ್ವಾಡ್ ಅವರಿಂದ ಕ್ಯಾಚ್ ಕೈ ಚೆಲ್ಲಿ ಜೀವದಾನವೊಂದನ್ನು ಪಡೆದರು. ಈ ವೇಳೆ ಗ್ರೀನ್ 18 ರನ್ ಗಳಿಸಿದ್ದರು. ಸಿಕ್ಕ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿದ ಗ್ರೀನ್ ಅಜೇಯ 38 ರನ್ ಬಾರಿಸಿ ಚೆನ್ನೈಗೆ ಕಂಟಕವಾದರು. ಪಾಟಿದಾರ್ ಮತ್ತು ಗ್ರೀನ್ 3ನೇ ವಿಕೆಟ್ಗೆ ಅತ್ಯಮೂಲ್ಯ 71 ರನ್ಗಳ ಜತೆಯಾಟ ನಿಭಾಯಿಸಿದರು. ಪಾಟಿದಾರ್ ಕೂಡ ಕೊಹ್ಲಿಯಂತೆ ಮಿಚೆಲ್ ಕ್ಯಾಚ್ಗೆ ವಿಕೆಟ್ ಕಳೆದುಕೊಂಡರು. 23 ಎಸೆತ ಎದುರಿಸಿ 41 ರನ್ ಬಾರಿಸಿದರು. ಈ ವೇಳೆ 4 ಸಿಕ್ಸರ್ ಮತ್ತು 3 ಬೌಂಡರಿ ಸಿಡಿಯಿತು. ಬಳಿಕ ಬಂದ ದಿನೇಶ್ ಕಾರ್ತಿಕ್(14) ಮತ್ತು ಗ್ಲೆನ್ ಮ್ಯಾಕ್ಸ್ವೆಲ್(16) ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಚೆನ್ನೈ ಪರ ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದರೂ ಕೂಡ 61 ರನ್ ಬಿಟ್ಟು ಕೊಟ್ಟು ದುಬಾರಿಯಾದರು. ಅನುಭವಿ ರವೀಂದ್ರ ಜಡೇಜಾ ವಿಕೆಟ್ ಲೆಸ್ ಎನಿಸಿಕೊಂಡರು.