Site icon Vistara News

RCB vs GT: ಆರ್​ಸಿಬಿ ಅಭಿಮಾನಿಗಳಿಗೆ ಇಂದು ಶೇ.99ರಷ್ಟು ನಿರಾಸೆ ಖಚಿತ; ಪಂದ್ಯ ನಡೆಯುವುದೇ ಅನುಮಾನ

RCB vs GT

ಬೆಂಗಳೂರು: ಪ್ಲೇ ಆಫ್​ ರೇಸ್​ನ ಕ್ಷೀಣ ಅವಕಾಶ ಹೊಂದಿರುವ ಆರ್​ಸಿಬಿ ಇಂದು ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(RCB vs GT) ಗುಜರಾತ್​ ಟೈಟಾನ್ಸ್​ ವಿರುದ್ಧ ಪಂದ್ಯವನ್ನಾಡಲಿದೆ. ಆದರೆ ಈ ಪಂದ್ಯ ನಡೆಯುವುದೇ ಅನುಮಾನ ಎನ್ನುವಂತಿದೆ. ಇದಕ್ಕೆ ಕಾರಣ ಮಳೆ ಭೀತಿ.

ಹೌದು, ಬೆಂಗಳೂರು (Bengaluru Rains) ಸೇರಿದಂತೆ ಹಲವೆಡೆ ಗುಡುಗು ಸಿಡಿಲು ಸಹಿತ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಕಳೆದ 2 ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗಿತ್ತು. ಅದು ಕೂಡ ಸಂಜೆಯ ವೇಳೆಯಲ್ಲಿ. ಹೀಗಾಗಿ ಇಂದು ಕೂಡ ಮಳೆಯ ಸಾಧ್ಯತೆ ಅಧಿಕವಾಗಿದೆ.

ಇನ್ನೂ ಇದೆ ಪ್ಲೇ ಆಫ್​ ಅವಕಾಶ


ಸದ್ಯ ಅಂಕಪಟ್ಟಿಯಲ್ಲಿ(IPL 2024 Points Table) ಕೊನೆಯ ಸ್ಥಾನಿಯಾಗಿದ್ದರೂ ಕೂಡ ಆರ್​ಸಿಬಿಯ(Royal Challengers Bengaluru) ಪ್ಲೇ ಆಫ್​ ಬಾಗಿಲು ಇನ್ನೂ ಮುಚ್ಚಿಲ್ಲ. ಇನ್ನೂ ಕೂಡ ಆರ್​ಸಿಬಿಯ ಪ್ಲೇ ಆಫ್​ ಆಸೆ ಜೀವಂತವಾಗಿಯೇ ಇದೆ.

ಸದ್ಯದ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ಮತ್ತು ಪವಾಡವೊಂದು ನಡೆದರೆ ಆರ್​ಸಿಬಿಗೆ ಪ್ಲೇ ಆಫ್​ ಟಿಕೆಟ್​ ಸಿಗಲಿದೆ. ಈಗಾಗಲೇ 10 ಪಂದ್ಯ ಆಡಿದ್ದು, 3 ಪಂದ್ಯ ಗೆದ್ದು, 7 ಪಂದ್ಯದಲ್ಲಿ ಸೋಲು ಕಂಡಿದೆ. 6 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 4 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಜತೆಗೆ ತನಗಿಂತ ಮೇಲಿರುವ ತಂಡಗಳು ಸತತ ಸೋಲು ಕಂಡರೆ ಕನಿಷ್ಠ 4ನೇ ಸ್ಥಾನಿಯಾಗಿ ಪ್ಲೇ ಆಫ್ ಗೇರುವ ಸಣ್ಣ ಅವಕಾಶವೊಂದಿದೆ. ಉಳಿದ 4 ಪಂದ್ಯಗಳ ಪೈಕಿ 2 ಪಂದ್ಯಗಳನ್ನು ಆರ್​ಸಿಬಿ ತವರಿನಲ್ಲಿ ಆಡಲಿದೆ. ಒಂದು ಪಂದ್ಯ ಹಾಲಿ ಚಾಂಪಿಯನ್​ ಚೆನ್ನೈ ವಿರುದ್ಧ. ಇದು ಆರ್​ಸಿಬಿಗೆ ಕೊನೆಯ ಲೀಗ್​ ಪಂದ್ಯವಾಗಿರಲಿದೆ. ಮೇ 18ರಂದು ಈ ಪಂದ್ಯ ನಡೆಯಲಿದೆ. ಒಂದೊಮ್ಮೆ ಇಂದು ನಡೆಯುವ ಪಂದ್ಯದಲ್ಲಿ ಆರ್​ಸಿಬಿ ಸೋತರೆ, ಅಥವಾ ಪಂದ್ಯ ರದ್ದಾದರೆ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಇದನ್ನೂ ಓದಿ IPL 2024 : ಮುಂಬೈ ವಿರುದ್ಧ ಕೆಕೆಆರ್​ಗೆ 24 ರನ್​ ಗೆಲುವು; ಪಾಂಡ್ಯಾ ಬಳಗಕ್ಕೆ ಮತ್ತೊಂದು ಆಘಾತ

ಪಿಚ್​ ರಿಪೋರ್ಟ್​


ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಯಾವಾಗಲೂ ಬ್ಯಾಟಿಂಗ್ ಸ್ನೇಹಿ ಸ್ಥಳವಾಗಿದೆ. ಇದುವರೆಗೆ ಇಲ್ಲಿ ನಡೆದ ಬಹುತೇಕ ಪಂದ್ಯಗಳು ಕೂಡ ಚೇಸಿಂಗ್​ ನಡೆಸಿದ ತಂಡವೇ ಹೆಚ್ಚು ಬಾರಿ ಗೆದ್ದಿದೆ. ಇದುವರೆಗೆ ಇಲ್ಲಿ 92 ಐಪಿಎಲ್​ ಪಂದ್ಯಗಳು ನಡೆದಿದ್ದು, 49 ಬಾರಿ ಚೇಸಿಂಗ್​ ನಡೆಸಿದ ತಂಡ ಜಯಶಾಲಿಯಾಗಿದೆ. 39 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿದೆ. ಆದರೆ ಕಳೆದ 10 ಪಂದ್ಯಗಳ ಫಲಿತಾಂಶ ನೋಡುವುದಾದರೆ 6 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿದೆ.

ವಿರಾಟ್​ ಕೊಹ್ಲಿ ಈ ಮೈದಾನದಲ್ಲಿ ಇದುವರೆಗೆ 2924 ರನ್​ ಬಾರಿಸಿದ್ದಾರೆ. ಜತೆಗೆ ಈ ಬಾರಿಯ ಐಪಿಎಲ್​ನಲ್ಲಿಯೂ ಕೊಹ್ಲಿ ಉತ್ತಮವಾಗಿ ರನ್​ ಗಳಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿಯೂ ಇವರ ಬ್ಯಾಟಿಂಗ್​ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್​ಸಿಬಿಗೆ ಪ್ಲೇ ಆಫ್​ಗೆ ಹೋಗಬೇಕಿದ್ದರೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಗುಜರಾತ್​ ಅಡಗಾಲಿಕ್ಕಿತ್ತು. ಶುಭಮನ್​ ಗಿಲ್​ ಶತಕ ಬಾರಿಸಿ ಆರ್​ಸಿಬಿಗೆ ಸೋಲಿನ ರುಚಿ ತೋರಿಸಿದ್ದರು.

ಗುಜರಾತ್​ ಆಡಿದ 10 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 8 ಅಂಕ ಗಳಿಸಿ 8ನೇ ಸ್ಥಾನದಲ್ಲಿದೆ. ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ ಉಳಿದ 4 ಪಂದ್ಯಗಳನ್ನು ಕೂಡ ಗೆಲ್ಲಬೇಕಿದೆ. ಹೀಗಾಗಿ ಆರ್​ಸಿಬಿ ವಿರುದ್ಧದ ಪಂದ್ಯ ಗೆಲ್ಲಲೇ ಬೇಕಾದ ಒತ್ತಡ ಶುಭಮನ್​ ಗಿಲ್​ ಪಡೆಯ ಮೇಲಿದೆ.

ಉಭಯ ತಂಡಗಳು


ಆರ್​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​), ಸ್ವಪ್ನಿಲ್ ಸಿಂಗ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

ಗುಜರಾತ್​: ವೃದ್ಧಿಮಾನ್ ಸಹಾ (ವಿಕೆಟ್​ ಕೀಪರ್​), ಶುಭಮನ್​ ಗಿಲ್ (ನಾಯಕ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ಸಾಯಿ ಕಿಶೋರ್, ನೂರ್ ಅಹ್ಮದ್, ಮೋಹಿತ್ ಶರ್ಮಾ.

Exit mobile version