Site icon Vistara News

RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು

RCB vs GT

ಅಹಮದಾಬಾದ್​: ವಿಲ್​ ಜ್ಯಾಕ್ಸ್ ​(100*) ಅವರ ಶತಕ ಮತ್ತು ವಿರಾಟ್​ ಕೊಹ್ಲಿಯ(70*) ಅರ್ಧಶತಕದ ಸೊಗಸಾದ ಬ್ಯಾಟಿಂಗ್​ ನೆರವಿನಿಂದ ರಾಯಲ್​ ಜಾಲೆಂಜರ್ಸ್​ ಬೆಂಗಳೂರು(RCB vs GT) ತಂಡ ಗುಜರಾತ್​ ಟೈಟಾನ್ಸ್​ ವಿರುದ್ಧ ಭರ್ಜರಿ 9 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದು ಆರ್​ಸಿಬಿಗೆ 10 ಪಂದ್ಯಗಳಲ್ಲಿ ಒಲಿದ ಕೇವಲ ಮೂರನೇ ಗೆಲುವಾಗಿದೆ. ಗೆಲುವು ಕಂಡರೂ ಕೂಡ 6 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್​ ಟೈಟಾನ್ಸ್​ ಸಾಯಿ ಸುದರ್ಶನ್​(84*) ಮತ್ತು ಶಾರೂಖ್​ ಖಾನ್​(58) ಅರ್ಧಶತಕದ ಉಪಯುಕ್ತ ಬ್ಯಾಟಿಂಗ್​ ನೆರವಿನಿಂದ 20 ಓವರ್​ಗೆ 3 ವಿಕೆಟ್​ ಕಳೆದುಕೊಂಡು ಭರ್ತಿ 200 ರನ್​ ಪೇರಿಸಿತು. ಜವಾಬಿತ್ತ ಆರ್​ಸಿಬಿ ಫುಲ್​ ಬ್ಯಾಟಿಂಗ್​ ಜೋಶ್​ನೊಂದಿಗೆ ಕೇವಲ 16 ಓವರ್​ಗಳಲ್ಲಿ 1 ವಿಕೆಟ್​ನಷ್ಟಕ್ಕೆ 206 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ಕೊಹ್ಲಿ-ಜ್ಯಾಕ್ಸ್ ಬೊಂಬಾಟ್​ ಅರ್ಧಶತಕ


ಕಳೆದ ಪಂದ್ಯದಲ್ಲಿ ಆಮೆ ಗತಿಯ ಬ್ಯಾಟಿಂಗ್​ ನಡೆಸಿ ಟೀಕೆಗೆ ಗುರಿಯಾಗಿದ್ದ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಬ್ಯಾಟಿಂಗ್​ ಜೋಶ್​ ತೋರ್ಪಡಿಸಿದರು. ಅಜ್ಮತುಲ್ಲಾ ಒಮರ್ಜಾಯ್ ಎಸೆದ ಮೊದಲ ಓವರ್​ನಲ್ಲಿ ರನ್​ ಗಳಿಸಲು ಪರದಾಡಿದ ಕೊಹ್ಲಿ ಆ ಬಳಿಕ ಸಿಡಿದು ನಿಂತರು. ಅಘಫಾನಿಸ್ತಾನದ ಸಿನ್ನರ್​ಗಳಾದ ರಶೀದ್​ ಖಾನ್​, ನೂರ್​ ಅಹ್ಮದ್​ಗೆ ಸತತ ಸಿಕ್ಸರ್​ ಮತ್ತು ಬೌಂಡರಿಗಳ ರುಚಿ ತೋರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿದ ವಿಲ್​ ಜಾಕ್ಸ್​ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಅಜೇಯ ಶತಕ ಬಾರಿಸಿ ಮಿಂಚಿದರು. ಗೆಲುವಿನ ರನ್​ ಮತ್ತು ಶತಕವನ್ನು ಸಿಕ್ಸರ್​ ಮೂಲಕ ಪೂರ್ತಿಗೊಳಿಸಿದರು.

ಇದನ್ನೂ ಓದಿ IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

ವಿರಾಟ್​ ಕೊಹ್ಲಿ 44 ಎಸೆತಗಳಿಂದ 70(6 ಬೌಂಡರಿ ಮತ್ತು 3 ಸಿಕ್ಸರ್​) ರನ್​ ಬಾರಿಸಿದರು. ವಿಲ್​ ಜಾಕ್ಸ್​ 41 ಎಸೆತಗಳಿಂದ ಬರೋಬ್ಬರಿ 10 ಸಿಕ್ಸರ್​ ಮತ್ತು 5 ಬೌಂಡರಿ ಬಾರಿಸಿ ಭರ್ತಿ 100 ರನ್​ ಪೇರಿಸಿದರು. ಇದು ಅವರ ಚೊಚ್ಚಲ ಐಪಿಎಲ್​ ಶತಕವಾಗಿದೆ. ಆರ್​ಸಿಬಿ ಇದೇ ಆಟವನ್ನು ಆರಂಭಿಕ ಹಂತದಲ್ಲಿ ತೋರ್ಪಡಿಸುತ್ತಿದ್ದರೆ ಇಂದು ಪ್ಲೇ ಆಫ್​ ಸನಿಹಕ್ಕೆ ಬಂದು ನಿಲ್ಲುತ್ತಿತ್ತು. ಗುಜರಾತ್​ ಪರ ರಶೀದ್​ ಖಾನ್​ 51 ರನ್​ ಬಿಟ್ಟುಕೊಟ್ಟರೆ, ಮೋಹಿತ್​ ಶರ್ಮ ಕೇವಲ 2 ಓವರ್​ಗೆ 41 ರನ್​ ಚಚ್ಚಿಸಿಕೊಂಡರು.

ಸಾಯಿ -ಶಾರೂಖ್ ಜತೆಯಾಟ ವ್ಯರ್ಥ


ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್​ ತಂಡಕ್ಕೆ ಸಿನ್ನರ್​ಗಳಾದ ಸ್ವಪ್ನಿಲ್ ಸಿಂಗ್ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ಆರಂಭದಲ್ಲೇ ಆಘಾತವಿಕ್ಕಿದರು. ಸ್ವಪ್ನಿಲ್ ಸಿಂಗ್ ಅವರು ವೃದ್ಧಿಮಾನ್​ ಸಾಹಾ(5) ವಿಕೆಟ್​ ಕಡೆವಿದರೆ, ಮ್ಯಾಕ್ಸ್​ವೆಲ್ ನಾಯಕ ಶುಭಮನ್​ ಗಿಲ್​(16) ವಿಕೆಟ್​ ಕಿತ್ತರು. ಆರಂಭಿಕ ಆಘಾತ ಕಂಡ ಗುಜತಾರ್​ ತಂಡವನ್ನು ಮೇಲೆತ್ತಿದ್ದು ತಮಿಳುನಾಡು ಮೂಲಕದ ಆಟಗಾರರಾದ ಸಾಯಿ ಸುದರ್ಶನ್​ ಮತ್ತು ಶಾರೂಖ್​ ಖಾನ್​.

ಉಭಯ ಆಟಗಾರರು ಆರ್​ಸಿಬಿ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ಅರ್ಧಶತಕ ಪೂರ್ತಿಗೊಳಿಸಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ಜೋಡಿ ಮೂರನೇ ವಿಕೆಟ್​ಗೆ ಅತ್ಯಮೂಲ್ಯ 86 ರನ್​ ಜತೆಯಾಟ ನಡೆಸಿತು. ಅರ್ಧಶತಕ ಪೂರ್ತಿಗೊಂಡು ಅಪಾಯಕಾರಿಯಾಗಿ ಗೋಚರಿಸಿದ್ದ ಶಾರೂಖ್​ ಖಾನ್​ ಮೊಹಮ್ಮದ್​ ಸಿರಾಜ್​ ಅವರ ಯಾರ್ಕರ್​ ಎಸೆತಕ್ಕೆ ಕ್ಲೀನ್​ ಬೌಲ್ಡ್​ ಆದರು. ಒಟ್ಟು 30 ಎಸೆತ ಎದುರಿಸಿ 5 ಸಿಕ್ಸರ್​ ಮತ್ತು 3 ಬೌಂಡರಿ ನೆರವಿನಿಂದ 58 ರನ್​ ಬಾರಿಸಿದರು. ಪಂದ್ಯ ಸೋತ ಕಾರಣ ಉಭಯ ಆಟಗಾರರ ಈ ಉತ್ತಮ ಜತೆಯಾಟ ವ್ಯರ್ಥಗೊಂಡಿತು.

ಶಾರೂಖ್ ವಿಕೆಟ್​ ಪತನದ ಬಳಿಕ ಆಡಲಿಳಿದ ಡೇವಿಡ್​ ಮಿಲ್ಲರ್ ಕೂಡ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ಅಜೇಯ 26 ರನ್​ ಬಾರಿಸಿದರು. ಸಾಯಿ ಸುದರ್ಶನ್ ಬರೋಬ್ಬರಿ 8 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ 84 ರನ್​ ಗಳಿಸಿ ಅಜೇಯರಾಗಿ ಉಳಿದರು. ಆರ್​ಸಿಬಿ ಪರ ಸಿರಾಜ್​, ಸ್ವಪ್ನಿಲ್ ಸಿಂಗ್ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ತಲಾ ಒಂದು ವಿಕೆಟ್​ ಪಡೆದರು. ಗ್ರೀನ್​ ಮೂರು ಓವರ್​ಗೆ 42 ರನ್​ ಬಿಟ್ಟುಕೊಟ್ಟು ದುಬಾರಿಯಾಗಿ ಕಂಡುಬಂದರು.

Exit mobile version