Site icon Vistara News

RCB vs MI: ಸೂರ್ಯ ಬ್ಯಾಟಿಂಗ್​ ಪ್ರತಾಪಕ್ಕೆ ಕಂಗಾಲಾದ ಆರ್​ಸಿಬಿ; 7 ವಿಕೆಟ್​ ಹೀನಾಯ ಸೋಲು

RCB vs MI

ಮುಂಬಯಿ: ಆರ್​ಸಿಬಿಯ ಸೋಲಿನ ಅಧ್ಯಾಯ ಮತ್ತೆ ಮುಂದುವರಿದಿದೆ. ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್​ಗಳ ಹೀನಾಯ ಸೋಲಿಗೆ ತುತ್ತಾಗಿದೆ. ಸೂರ್ಯಕುಮಾರ್​ (52), ಇಶಾನ್ ಕಿಶನ್​(69) ಅವರ ಬ್ಯಾಟಿಂಗ್​ ಹೋರಾಟ, ಜಸ್​ಪ್ರೀತ್​ ಬುಮ್ರಾ( 5 ವಿಕೆಟ್​) ಅವರ ಘಾತಕ ಬೌಲಿಂಗ್ ದಾಳಿ​ ಮುಂಬೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಇಲ್ಲಿನ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಬೃಹತ್​ ಮೊತ್ತದ ಮೇಲಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ತಂಡ, ದಿನೇಶ್​ ಕಾರ್ತಿಕ್​(53*), ರಜತ್​ ಪಾಟಿದಾರ್​(50) ಮತ್ತು ನಾಯಕ ಫಾಫ್​ ಡುಪ್ಲೆಸಿಸ್(61)​ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 196 ರನ್​ ಬಾರಿಸಿತು. ದೊಡ್ಡ ಮೊತ್ತವನ್ನು ಬಹಳ ಜೋಶ್​ನಿಂದಲೇ ಬೆನ್ನತ್ತಿದ ಮುಂಬೈ ಇಶಾನ್​ ಕಿಶನ್​ ಮತ್ತು ಸೂರ್ಯಕುಮಾರ್​ ಅವರ ಪ್ರಚಂಡ ಬ್ಯಾಟಿಂಗ್​ ನೆರವಿನಿಂದ 15.3 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 199 ರನ್​ ಬಾರಿಸಿ ವಿಜಯ ಪತಾಕೆ ಹಾರಿಸಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಮುಂಬೈಗೆ ಎಡಗೈ ಆಟಗಾರ ಇಶಾನ್​ ಕಿಶನ್​ ಬಿರುಸಿನ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಒದಗಿಸಿದರು. ಈ ವೇಳೆ ಮ್ಯಾಕ್ಸ್​ವೆಲ್​ ಅವರಿಂದ ಒಂದು ಜೀವದಾನ ಕೂಡ ಲಭಿಸಿತು. ಇದರ ಸಂಪೂರ್ಣ ಲಾಭವೆತ್ತಿದ ಅವರು ಆರ್​ಸಿಬಿ ಬೌಲರ್​ಗಳಿಗೆ ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ದಂಡಿಸಿದರು. ಅದರಲ್ಲೂ ಮೊಹಮ್ಮದ್​ ಸಿರಾಜ್​ ಅವರ ಒಂದೇ ಓವರ್​ನಲ್ಲಿ 2 ಸಿಕ್ಸರ್​ ಮತ್ತು ಒಂದು ಬೌಂಡರಿ ಚಚ್ಚಿದರು.

ಜಿದ್ದಿಗೆ ಬಿದ್ದವಂತೆ ಬ್ಯಾಟ್​ ಬೀಸಿದ ಇಶಾನ್​ ಕಿಶನ್​ ಬರೋಬ್ಬರಿ 5 ಸಿಕ್ಸರ್​ ಮತ್ತು 7 ಬೌಂಡರಿ ನೆರವಿನಿಂದ 69 ರನ್​ ಬಾರಿಸಿದರು. ಇವರ ಈ ಆಕ್ರಮಣಕಾರಿ ಬ್ಯಾಟಿಂಗ್​ನಿಂದ ತಂಡಕ್ಕೆ ಮೊದಲ ವಿಕೆಟ್​ಗೆ 101 ರನ್​ ಹರಿದು ಬಂತು. ಈ ಮೊತ್ತ ಕೇವಲ 8.1 ಓವರ್​ನಲ್ಲಿ ದಾಖಲಾಯಿತು. ಇಶಾನ್​ ವಿಕೆಟ್​ ಪತನದ ಬಳಿಕವೂ ಮುಂಬೈ ರನ್​ ವೇಗಕ್ಕೆ ಯಾವುದೇ ಅಡಿಯಾಗಲಿಲ್ಲ. ರೋಹಿತ್​ ಶರ್ಮ ಮತ್ತು ಸೂರ್ಯಕುಮಾರ್ ಯಾದವ್​​ ಬಿರುಸಿನ ಬ್ಯಾಟಿಂಗ್​ ನಡೆಸಿದರು.

ಸಿಡಿದ ಸೂರ್ಯಕುಮಾರ್​


ಕಳೆದ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಸೂರ್ಯಕುಮಾರ್​ ಈ ಪಂದ್ಯದಲ್ಲಿ ಸಿಡಿದು ನಿಂತರು. ನಟರಾಜ ಭಂಗಿಯಲ್ಲಿ​ ಬ್ಯಾಟ್​ ಬೀಸಿ ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡನ್ನು ಹೊಡೆದು ನೆರೆದಿದ್ದ ತವರಿನ ಪ್ರೇಕ್ಷಕರಿಗೆ ಬರಪೂರ ರಂಚನೆ ನೀಡಿದರು. ರೋಹಿತ್​ ಶರ್ಮ ತಲಾ ಮೂರು ಸಿಕ್ಸರ್​ ಮತ್ತು ಬೌಂಡರಿ ಸಹಾಯದಿಂದ 38 ರನ್​ ಗಳಿಸಿ ಟಾಪ್ಲಿ ಹಿಡಿದ ಅತ್ಯದ್ಭುತ ಕ್ಯಾಚ್​ಗೆ ವಿಕೆಟ್​ ಕೈಚೆಲ್ಲಿದರು. ಕೇವಲ 17 ಎಸೆತಗಳಿಂದ ಅರ್ಧಶತಕ ಬಾರಿಸಿದ ಸೂರ್ಯಕುಮಾರ್​ ಯಾದವ್​ ಒಟ್ಟು 52 ರನ್​ ಬಾರಿಸಿ ಮಿಂಚಿದರು. ಅವರ ಈ ಸೊಗಸಾದ ಬ್ಯಾಟಿಂಗ್​ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್​ ದಾಖಲಾಯಿತು. ಅಂತಿಮವಾಗಿ ನಾಯಕ ಹಾರ್ದಿಕ್​ ಪಾಂಡ್ಯ(21) ಮತ್ತು ತಿಲಕ್​ ವರ್ಮ(16) ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದನ್ನೂ ಓದಿ IPL 2024 Points Table: ರಾಜಸ್ಥಾನ್​ಗೆ ಮೊದಲ ಸೋಲು; ಅಂಕಪಟ್ಟಿಯಲ್ಲಿ ಪ್ರಮುಖ ಬದಲಾವಣೆ

ವ್ಯರ್ಥಗೊಂಡ ಕಾರ್ತಿಕ್​ ಆಟ


ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ಪರ ನಾಯಕ ಡು ಪ್ಲೆಸಿಸ್ 61 ರನ್​ ಮತ್ತು ಆಡಿದ 5 ಪಂದ್ಯಗಳಲ್ಲಿಯೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿ ಟೀಕೆಗೆ ಗುರಿಯಾಗಿದ್ದ ರಜತ್​ ಪಾಟಿದಾರ್​ ಈ ಪಂದ್ಯದಲ್ಲಿ 25 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿ ತಮ್ಮ ಬ್ಯಾಟಿಂಗ್​ ಫಾರ್ಮ್​ ಕಂಡುಕೊಂಡರು. ಚೊಚ್ಚಲ ಐಪಿಎಲ್​ ಪಂದ್ಯವನ್ನಾಡಿದ ವಿಲ್ ಜ್ಯಾಕ್ಸ್ 8 ರನ್​ ಗಳಿಸಿ ನಿರಾಸೆ ಮೂಡಿಸಿದರು. ಮ್ಯಾಕ್ಸ್​ವೆಲ್​ ಶೂನ್ಯ ಸುತ್ತಿದರು. ಅಂತಿಮ ಹಂತದಲ್ಲಿ ಸಿಡಿದು ನಿಂತ ದಿನೇಶ್​ ಕಾರ್ತಿಕ್​ 23 ಎಸೆತಗಳಿಂದ ಅಜೇಯ 53 ರನ್​ ಬಾರಿಸಿದರು. ಅವರ ಈ ಇನಿಂಗ್ಸ್​ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಯಿತು.

ದಾಖಲೆ ಬರೆದ ಬುಮ್ರಾ


ಮೊನಚಾದ ಬೌಲಿಂಗ್​ ದಾಳಿ ನಡೆಸಿ 21 ರನ್​​ಗೆ 5 ವಿಕೆಟ್​ ಕಿತ್ತ ಮುಂಬೈ ಇಂಡಿಯನ್ಸ್(Mumbai Indians)​ ತಂಡದ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರು ಆರ್​ಸಿಬಿ(Royal Challengers Bengaluru) ತಂಡದ ವಿರುದ್ಧ ಅತ್ಯಧಿಕ ವಿಕೆಟ್​ ಕಿತ್ತ ಮೊದಲ ಬೌಲರ್ ಎಂಬ ದಾಖಲೆ ಬರೆದರು.ಇದಕ್ಕೂ ಮುನ್ನ ಈ ದಾಖಲೆ ಜಂಟಿಯಾಗಿ ರವೀಂದ್ರ ಜಡೇಜಾ ಮತ್ತು ಸಂದೀಪ್ ಶರ್ಮ ಹೆಸರಿನಲ್ಲಿತ್ತು. ಉಭಯ ಆಟಗಾರರು 26 ವಿಕೆಟ್​​ ಪಡೆದಿದ್ದರು. ಇದೀಗ ಬುಮ್ರಾ 29 ವಿಕೆಟ್​ ಪಡೆಯುವ ಮೂಲಕ ದಾಖಲೆಯನ್ನು ತನ್ನ ಹೆಸರಿಗೆ ಬರೆದಿದ್ದಾರೆ. ಸುನೀಲ್​ ನರೈನ್​ 24 ವಿಕೆಟ್​, ಆಶೀಶ್​ ನೆಹ್ರಾ ಮತ್ತು ಹರ್ಭಜನ್​ ಸಿಂಗ್​ ತಲಾ 23 ವಿಕೆಟ್​ ಪಡೆದಿದ್ದಾರೆ.

Exit mobile version