Site icon Vistara News

RCB vs PBKS: ಆರ್​ಸಿಬಿ-ಪಂಜಾಬ್​ ಐಪಿಎಲ್​ ಮುಖಾಮುಖಿಯೇ ಬಲು ರೋಚಕ 

RCB vs PBKS

ಬೆಂಗಳೂರು: ಈಗಾಗಲೇ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ಕಂಡಿರುವ ಪಂಜಾಬ್​ ಕಿಂಗ್ಸ್(RCB vs PBKS)​ ಮತ್ತು ಸೋಲು ಕಂಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡಗಳು ಸೋಮವಾರದ ಐಪಿಎಲ್​ ಪಂದ್ಯದಲ್ಲಿ ಸೆಣಸಾಡಲಿದೆ. ಉಭಯ ತಂಡಗಳ ಈ ಕಾದಾಟಕ್ಕೆ ಎಂ.ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂ ಅಣಿಯಾಗಿದೆ.

ಮುಖಾಮುಖಿ


ಪಂಜಾಬ್(Punjab Kings)​ ಮತ್ತು ಆರ್​ಸಿಬಿ(RCB) ಇದುವರೆಗಿನ ಐಪಿಎಲ್​ ಟೂರ್ನಿಯಲ್ಲಿ(RCB vs PBKS Head to Head) ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಪಂಜಾಬ್​ 17 ಪಂದ್ಯಗಳನ್ನು ಗೆದ್ದರೆ, ಆರ್​ಸಿಬಿ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆರ್​ಸಿಬಿ ತನ್ನ ತವರಿನಲ್ಲಿ ಪಂಜಾಬ್​ ವಿರುದ್ಧ 11 ಪಂದ್ಯಗಳನ್ನು ಆಡಿ 6ರಲ್ಲಿ ಗೆಲುವು ಕಂಡಿದೆ. ಪಂಜಾಬ್​ ಚಿನ್ನಸ್ವಾಮಿಯಲ್ಲಿ 5 ಪಂದ್ಯಗಳನ್ನು ಗೆದ್ದಿದೆ. ಇತ್ತಂಡಗಳ ಮೊದಲ ಐಪಿಎಲ್​ ಪಂದ್ಯ ನಡೆದದ್ದು ಚಿನ್ನಸ್ವಾಮಿ ಮೈದಾನದಲ್ಲೇ 2008ರಲ್ಲಿ ನಡೆದಿದ್ದ ಈ ಪಂದ್ಯವನ್ನು ಪಂಜಾಬ್​ 6 ವಿಕೆಟ್​ಗಳಿಂದ ಗೆದ್ದು ಬೀಗಿತ್ತು.

ಪಿಚ್​ ರಿಪೋರ್ಟ್​

ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ಗೆ ಹೇಳಿ ಮಾಡಿಸಿದಂತೆ. ಇದು​ ಸಂಪೂರ್ಣ ಬ್ಯಾಟಿಂಗ್​​ ಸ್ನೇಹಿ ಪಿಚ್​ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಇಲ್ಲಿ ಬೌಂಡರಿ ಗೆರೆ ಕೂಡ ಅಂತ್ಯಂತ ಸಮೀಪವಿರುವ ಕಾರಣ ಬ್ಯಾಟರ್​ಗಳು ಯಾವುದೇ ಒತ್ತಡವಿಲ್ಲದೆ ಬ್ಯಾಟ್​ ಬೀಸಬಹುದಾಗಿದೆ. ಆದರೆ ಬೌಲರ್​ಗಳು ಮಾತ್ರ ಶಕ್ತಿ ಮೀರಿ ಪ್ರಯತ್ನ ತೋರಬೇಕಿದೆ. ಎಷ್ಟೇ ದೊಡ್ಡ ಮೊತ್ತವನ್ನು ಬಾರಿಸಿದರೂ ಇಲ್ಲಿ ಚೇಸ್​ ಮಾಡಿ ಗೆಲುವು ಸಾಧಿಸಿಬಹುದು. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ರಾಜ್ಯದ ಕೆಲವೆಡೆ ಮಳೆಯಾಗಿದ್ದರೂ ಕೂಡ ಬೆಂಗಳೂರಿನಲ್ಲಿ ಯಾವುದೇ ಮಳೆಯ ಭೀತಿ ಇಲ್ಲ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ.

ಇದನ್ನೂ ಓದಿ RCB vs PBKS: ತವರಿನಲ್ಲಿ ಗೆಲುವಿನ ಖಾತೆ ತೆರೆದೀತೇ ಆರ್​ಸಿಬಿ? ಪಂಜಾಬ್​ ಎದುರಾಳಿ

ಸಂಭಾವ್ಯ ತಂಡಗಳು

ಪಂಜಾಬ್​: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಹಾರ್, ಅರ್ಶ್‌ದೀಪ್ ಸಿಂಗ್.

ಆರ್​ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್​ ಕೀಪರ್​), ಕರ್ಣ್ ಶರ್ಮಾ, ಲಾಕಿ ಫರ್ಗುಸನ್, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್.

ಐಪಿಎಲ್‌ ಪಂದ್ಯದಂದು ಕೊನೆ ರೈಲು 11.30ಕ್ಕೆ ವಿಸ್ತರಣೆ

ಬೆಂಗಳೂರಲ್ಲಿ ನಡೆಯುವ ಐಪಿಎಲ್‌ ಪಂದ್ಯಾವಳಿಯ ದಿನದಂದು ಮೆಟ್ರೋ ಸಂಚಾರದ (Metro Timings) ಸಮಯವನ್ನು ಬಿಎಂಆರ್‌ಸಿಎಲ್‌ ವಿಸ್ತರಿಸಿದೆ. ಈ ಮೂಲಕ ಆರ್​ಸಿಬಿ ಅಭಿಮಾನಿಗಳಿಗೆ ತಮ್ಮ ತಂಡವನ್ನು ಬೆಂಗಳಿಸುವ ಸಲುವಾಗಿ ಮೆಟ್ರೋ ಮಹತ್ವದ ನಿರ್ಧಾರ ಕೈಗೊಂಡಿದೆ. ಮಾ. 25, 29 ಹಾಗೂ ಏ.2ರಂದು ಪಂದ್ಯಾವಳಿ ನಡೆಯಲಿದೆ. ಆ ದಿನದಂದು ಪಂದ್ಯ ವೀಕ್ಷಣೆಗಾಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30ಕ್ಕೆ ವಿಸ್ತರಿಸಲಾಗಿದೆ.

ಪೇಪರ್‌ ಟಿಕೆಟ್‌ ಮಾರಾಟ

ಇನ್ನೂ ಪಂದ್ಯದ ದಿನಗಳಂದು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು 50 ರೂ. ಮಾರಾಟ ಮಾಡಲಾಗುತ್ತಿದೆ. ಇದು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8.00 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿರುವುದಿಲ್ಲ.

Exit mobile version