Site icon Vistara News

WPL 2023 : ಅಂತೂ ಇಂತೂ ಗೆದ್ದ ಆರ್​ಸಿಬಿ, ಯುಪಿ ವಿರುದ್ಧ 5 ವಿಕೆಟ್​ ಜಯ

RCB, who won both, won by 5 wickets against UP

#image_title

ಮುಂಬಯಿ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ (RCB) ಅಂತೂ ಇಂತೂ ಡಬ್ಲ್ಯುಪಿಎಲ್​ (WPL 2023) ಉದ್ಘಾಟನಾ ಆವೃತ್ತಿಯಲ್ಲಿ ಮೊದಲ ವಿಜಯ ಕಂಡಿತು. ಬುಧವಾರ ನಡೆದ ಡಬ್ಲ್ಯುಪಿಎಲ್​ನ (WPL 2023) 13ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 5 ವಿಕೆಟ್​ ಗೆಲುವು ಸಾಧಿಸುವುದರೊಂದಿಗೆ ಮರ್ಯಾದೆ ಉಳಿಸಿಕೊಂಡಿತು. ಆರಂಭಿಕ ಬ್ಯಾಟರ್​ಗಳು ಇಲ್ಲೂ ವೈಫಲ್ಯ ಎದುರಿಸಿದರೂ ಕನಿಕಾ ಅಹುಜಾ 46 ರನ್​ ಬಾರಿಸಿ ಗೆಲುವು ತಂದುಕೊಟ್ಟರು.

ಆರ್​ಸಿಬಿ ಗೆಲುವಿನ ಸಂಭ್ರಮ ಹೀಗಿದೆ

ಇಲ್ಲಿನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಆರ್​ಸಿಬಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಯುಪಿ ವಾರಿಯರ್ಸ್ ತಂಡ 19.3 ಓವರ್​ಗಳಲ್ಲಿ 135 ರನ್​ಗಳಿಗೆ ಆಲ್​ಔಟ್ ಆಯಿತು. ಗುರಿ ಬೆನ್ನಟ್ಟಿದ ಸ್ಮೃತಿ ಮಂಧಾನಾ ಪಡೆ 18 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡ 136 ರನ್​ ಬಾರಿಸಿ ಗೆಲುವು ಸಾಧಿಸಿತು.

ಸಣ್ಣ ಮೊತ್ತದ ಗುರಿಯಾದರೂ ಮತ್ತೆ ಮತ್ತೆ ಆರ್​​ಸಿಬಿ ಪಡೆ ಬ್ಯಾಟಿಂಗ್​ ವೈಫಲ್ಯ ಎದುರಿಸಿತು. ಸ್ಮೃತಿ ಮಂಧಾನ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೊಂದು ಬೃಹತ್ ವೈಫಲ್ಯ ಕಂಡರೆ, ಸೋಫಿ ಡಿವೈನ್​ 6 ಎಸೆತಗಳಲ್ಲಿ 14 ರನ್​ ಬಾರಿಸಿ ಸ್ಫೋಟಿಸುವ ಲಕ್ಷಣ ತೋರಿದರೂ, ಯುಪಿ ನಾಯಕಿ ಹೀಲಿ ಅವರ ಫೀಲ್ಡಿಂಗ್ ಯೋಜನೆಗೆ ಬಲಿಯಾದರು. ಎಲಿಸ್​ ಪೆರಿ 10 ರನ್ ಬಾರಿಸಿದರೆ ಹೇದರ್​ ನೈಟ್​ 24 ರನ್​ಗಳಿಗೆ ಔಟಾದರು.

ಕನಿಕಾ ತಿರುಗೇಟು

60 ರನ್​ಗಳಿಗೆ ನಾಲ್ಕು ವಿಕೆಟ್​ ಕಳೆದುಕೊಂಡು ಸಮಸ್ಯೆ ಸುಳಿಗೆ ಬಿದ್ದ ಆರ್​ಸಿಬಿಯನ್ನು ಕನಿಕಾ ಅಹುಜಾ ಕಾಪಾಡಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಅವರು 8 ಫೋರ್​ ಹಾಗೂ 1 ಸಿಕ್ಸರ್​ ಸಮೇತ 46 ರನ್​ ಬಾರಿಸಿದರು. ಆದರೆ, ಎಕ್ಲೆಸ್ಟೋನ್​ ಎಸೆತಕ್ಕೆ ಬೌಲ್ಡ್​ ಆಗುವ ಮೂಲಕ ನಾಲ್ಕು ರನ್​ಗಳಿಂದ ಚೊಚ್ಚಲ ಅರ್ಧ ಶತಕ ಬಾರಿಸುವ ಅವಕಾಶ ಕಳೆದುಕೊಂಡರು. ಅವರಿಗೆ ಉತ್ತಮ ನೆರವು ಕೊಟ್ಟ ರಿಚಾ ಘೋಷ್​ 31 ರನ್​ ಕಲೆಹಾಕಿದರು. ಈ ಜೋಡಿ ಐದನೇ ವಿಕೆಟ್​ಗೆ 60 ರನ್ ಗಳಿಸಿತು.

ಆರ್​ಸಿಬಿ ಭರ್ಜರಿ ಬೌಲಿಂಗ್​

ಅದಕ್ಕಿಂತ ಮೊದಲು ಟಾಸ್​ ಸೋತು ಬ್ಯಾಟಿಂಗ್​ಗೆ ಆಹ್ವಾನ ಪಡೆದ ಯುಪಿ ವಾರಿಯರ್ಸ್​ ಬಳಗ ಆರಂಭದಲ್ಲಿ ಆಘಾತ ಎದುರಿಸಿತು. ನಾಯಕಿ ಅಲಿಸಾ ಹೀಲಿ (1) ಹಾಗೂ ದೇವಿಕಾ ವೈದ್ಯ (0) ವಿಕೆಟ್​ ಪಡೆದ ಸೋಫಿ ಡಿವೈನ್​ ಆರ್​ಸಿಬಿಗೆ ಮುನ್ನಡೆ ಕಲ್ಪಿಸಿಕೊಟ್ಟರು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಕಿರಣ್​ ನವ್​ಗಿರೆ 22 ರನ್​ ಬಾರಿಸಿ ಸ್ವಲ್ಪ ಹೊತ್ತು ಕ್ರೀಸ್ ಕಾಯ್ದುಕೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ತಾಹಿಲಾ ಮೆಕ್​ಗ್ರಾಥ್​ 2 ರನ್​ಗೆ ಔಟಾದರು.

ಗ್ರೇಸ್​ ಸ್ಫೋಟಕ ಬ್ಯಾಟಿಂಗ್​

ಮಧ್ಯಮ ಕ್ರಮಾಂಕದಲ್ಲಿ ಆಡಲು ಇಳಿದ ಆಲ್​ರೌಂಡರ್​ ಗ್ರೇಸ್ ಹ್ಯಾರಿಸ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. 32 ಎಸೆತಗಳಲ್ಲಿ ಅವರು 46 ರನ್​ ಬಾರಿಸಿ 29 ರನ್​ಗಳಿಗೆ ನಾಲ್ಕು ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದರು. ದೀಪ್ತಿ ಶರ್ಮಾ ಕೂಡ 22 ರನ್​ ಬಾರಿಸಿ ತಂಡದ ಮೊತ್ತ 100 ರನ್​ ಗಡಿ ದಾಟುವಂತೆ ನೋಡಿಕೊಂಡರು. ಕೊನೆಯಲ್ಲಿ ಮತ್ತೆ ಬಿರುಸಿನ ದಾಳಿ ನಡೆಸಿದ ಆರ್​ಸಿಬಿ ಸ್ಕೋರ್​ ಗ್ರಾಫ್​ ಏರದಂತೆ ನೋಡಿಕೊಂಡಿತು.

Exit mobile version