ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) ಋತುವಿನಲ್ಲಿ 30ನೇ ಪಂದ್ಯದಲ್ಲಿ ಬರೀ ದಾಖಲೆಗಳೇ ಸೃಷ್ಟಿಯಾಗಿವೆ. ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಸೋತ ಆರ್ಸಿಬಿಯೂ ದಾಖಲೆಗಳನ್ನು ಸೃಷ್ಟಿಸಿವೆ. ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 3 ವಿಕೆಟ್ಗೆ ಬಾರಿಸಿದ 287 ರನ್ ವಿಶ್ವ ದಾಖಲೆಯಾದರೆ, ಚೇಸಿಂಗ್ ವೇಳೆ ಆರ್ಸಿಬಿ 7 ವಿಕೆಟ್ಗೆ ಬಾರಿಸಿದ 262 ರನ್ ಕೂಡ ಮತ್ತೊಂದು ದಾಖಲೆ. ಅಂತೆಯೇ ಎರಡೂ ತಂಡಗಳು ಸೇರಿಕೊಂಡು ಮಾಡಿದ 549 ರನ್ಗಳೂ ಮತ್ತೊಂದು ದಾಖಲೆ. ಆರ್ಸಿಬಿಗೆ ಗೆಲುವು ಸಿಕ್ಕಿಲ್ಲ ಎಂಬುದೇ ಹಿನ್ನಡೆ.
108 METER SIX BY 38-YEAR-OLD DINESH KARTHIK 🤯💪pic.twitter.com/CnOwcV5vPJ
— Johns. (@CricCrazyJohns) April 15, 2024
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯು ಹಲವಾರು ದಾಖಲೆಗಳಿಗೆ ಕಾರಣವಾಯಿತು. ಟ್ರಾವಿಸ್ ಹೆಡ್ 39 ಎಸೆತಕ್ಕೆ ಶತಕ ಬಾರಿಸುವ ಮೂಲಕ ಐಪಿಎಲ್ನ ಅತಿವೇಗದ 4ನೇ ಶತಕ ಬಾರಿಸಿದರು. ಪ್ರತ್ಯುತ್ತರವಾಗಿ ಆಡಿದ ಆರ್ಸಿಬಿಯೂ ಏಳುಬೀಳುಗಳ ನಡುವೆ ದಿನೇಶ್ ಕಾರ್ತಿಕ್ ಬಾರಿಸಿದ 83 ರನ್ಗಳ ನೆರವಿನಿಂದ 262 ರನ್ ಮಾಡಿದೆ. ಹೀಗಾಗಿ 25 ರನ್ಗಳ ಸಾಧಾರಣ ಅಂತರದಿಂದ ಸೋತಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಒಟ್ಟು 549 ರನ್ಗಳನ್ನು ಎರಡೂ ತಂಡಗಳು ಪೇರಿಸಿವೆ. ಈ ಮೂಲಕ ಕೆಲವೇ ದಿನಗಳ ಹಿಂದೆ ಎಸ್ಆರ್ಎಚ್ ಹಾಗೂ ಮುಂಬೈ ತಂಡ ಮಾಡಿದ್ದ 523 ರನ್ಗಳ ದಾಖಲೆಯನ್ನು ಮೀರಿಸಿದೆ.
ಐಪಿಎಲ್ನಲ್ಲಿ ಇತ್ತಂಡಗಳು ಸೇರಿ ಗಳಿಸಿದ ಗರಿಷ್ಠ ಮೊತ್ತಗಳ ವಿವರ ಇಲ್ಲಿದೆ
ಎಸ್ಆರ್ಎಚ್ v/s ಆರ್ಸಿಬಿ, 549 ರನ್, ಬೆಂಗಳೂರು 2024
ಎಸ್ಆರ್ಎಚ್ v/s ಮುಂಬಯಿ, 523 ರನ್, ಹೈದರಾಬಾದ್, 2024
ಸಿಎಸ್ಕೆ v/s ರಾಜಸ್ಥಾನ್ ರಾಯಲ್ಸ್. 469 ರನ್ ಚೆನ್ನೈ, 2010
ಪಿಬಿಕೆಎಸ್ v/s ಕೆಕೆಆರ್, 459 ರನ್, ಇಂದೋರ್, 2018
ಪಿಬಿಕೆಎಸ್ v/s ಎಲ್ಎಸ್ಜಿ, 458ರನ್, ಮೊಹಾಲಿ, 2023
ಮುಂಬಯಿ v/s ಪಿಬಿಕೆಎಸ್, 453 ರನ್, ಮುಂಬೈ, 2017
ಪಂದ್ಯದಲ್ಲಿ ಏನಾಯಿತು?
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ತಂಡ ವಿಶ್ವ ದಾಖಲೆಯ 287 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್ಸಿಬಿ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 7 ವಿಕೆಟ್ಗೆ 262 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಆರ್ಸಿಬಿ ಪರ ಒನ್ ಮ್ಯಾನ್ ಆರ್ಮಿ ರೀತಿ ಹೋರಾಟ ಸಂಘಟಿಸಿದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ 35 ಎಸೆತಗಳಲ್ಲಿ 83 ರನ್ ಬಾರಿಸಿದರು. ಆದರೆ, ಉಳಿದವರ ಅಸಮರ್ಥತೆಯಿಂದಾಗಿ ಆರ್ಸಿಬಿ ಸೋತಿತು.
ಇದನ್ನೂ ಓದಿ: Travis Head : ಆರ್ಸಿಬಿ ಬೌಲರ್ಗಳ ಬುರುಡೆ ಮೇಲೆ ಬಾರಿಸಿ ವೇಗದ ಶತಕದ ಪಟ್ಟಿಗೆ ಸೇರಿದ ಟ್ರಾವಿಸ್ ಹೆಡ್
ಮತ್ತೆ ಬ್ಯಾಟಿಂಗ್ ಫೇಲ್
ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಆರ್ಸಿಬಿ ಪೂರಕವಾಗಿಯೇ ಆಡಿತು. ಚೇಸಿಂಗ್ಗೆ ಪೂರಕವಾಗಿದ್ದ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ (20 ಎಸೆತಕ್ಕೆ 40 ರನ್), ಫಾಫ್ ಡು ಪ್ಲೆಸಿಸ್ (28 ಎಸೆತಕ್ಕೆ 62 ರನ್) ಉತ್ತಮ ಆರಂಭ ತಂದುಕೊಟ್ಟರು. ಇವರು ಮೊದಲ ವಿಕೆಟ್ಗೆ 80 ರನ್ ಪೇರಿಸಿದರು. ಆ ಬಳಿಕ ಆರ್ಸಿಬಿ ತಂಡದ ಪತನ ಶುರುವಾಯಿತು. ವಿಲ್ ಜಾಕ್ಸ್ 7 ರನ್ ಬಾರಿಸಿದರೆ, ರಜತ್ ಪಾಟೀದಾರ್ ಮತ್ತೊಮ್ಮೆ ವೈಫಲ್ಯ ಎದುರಿಸಿ 9 ರನ್ಗೆ ನಿರ್ಗಮಿಸಿದರು. ಮೊದಲ ಬಾರಿಗೆ ಆರ್ಸಿಬಿಯ ಆಡುವ ಬಳಗ ಸೇರಿದ್ದ ಸೌರವ್ ಚೌಹಾಣ್ ಶೂನ್ಯಕ್ಕೆ ನಿರ್ಗಮಿಸಿದರು.
ದಿನೇಶ್ ಕಾರ್ತಿಕ್ ಅಬ್ಬರ
122 ರನ್ಗೆ 5 ವಿಕೆಟ್ ಕಳೆದುಕೊಂಡ ಆರ್ಸಿಬಿ ಮತ್ತೊಂದು ಬಾರಿ ದೊಡ್ಡ ರನ್ಗಳ ಅಂತರದಿಂದ ಸೋಲುವ ಸೂಚನೆ ಪಡೆಯಿತು. ಆದರೆ, ಈ ವೇಳೆ ಬ್ಯಾಟ್ ಮಾಡಲು ಬಂದ ದಿನೇಶ್ ಕಾರ್ತಿಕ್ ಬೆಂಗಳೂರಿನ ಸ್ಟೇಡಿಯಮ್ ಸುತ್ತಲೂ ಅಬ್ಬರಿಸಿದರು. ಕೇವಲ 35 ಎಸೆತ ಎದುರಿಸಿದ ಅವರು 7 ಸಿಕ್ಸರ್ ಹಾಗೂ 5 ಬೌಂಡರಿ ಸಮೇತ 83 ರನ್ ಬಾರಿಸಿದರು. ಅವರ ಬ್ಯಾಟಿಂಗ್ನಿಂದಾಗಿ ಆರ್ಸಿಬಿಗೆ 200 ರನ್ಗಳ ಗಡಿ ದಾಟಲು ಸಾಧ್ಯವಾಯಿತು. ಕೊನೆಯಲ್ಲಿ ಮಹಿಪಾಲ್ ಲಾಮ್ರೋರ್ 19 ರನ್ ಬಾರಿಸಿದರೆ ಅನುಜ್ ರಾವತ್ 25 ರನ್ ಮಾಡಿದರು. ಇವರ ಆಟದಿಂದಾಗಿ ಆರ್ಸಿಬಿಯ ಮರ್ಯಾದೆ ಉಳಿಯಿತು.