Site icon Vistara News

Tom Curran : ಆರ್​ಸಿಬಿಯ ಹೊಸ ಬೌಲರ್​ಗೆ ನಾಲ್ಕುಪಂದ್ಯಗಳ ನಿಷೇಧ ಶಿಕ್ಷೆ

Tom Curron

ಬೆಂಗಳೂರು: ಇತ್ತೀಚೆಗೆ ನಡೆದ ಐಪಿಎಲ್​ ಮಿನಿ ಹರಾಜಿನಲ್ಲಿ 1.5 ಕೋಟಿ ರೂಪಾಯಿ ಪಡೆದುಕೊಂಡು ಆರ್​ಸಿಬಿ ತಂಡ ಸೇರಿರುವ ಬೌಲರ್​ ಟಾಮ್ ಕರ್ರನ್​ಗೆ ನಾಲ್ಕು ಪಂದ್ಯಗಳ ಶಿಕ್ಷೆ ಎದುರಾಗಿದೆ. ಡಿಸೆಂಬರ್ 11 ರಂದು ಲಾನ್ಸೆಸ್ಟರ್​ನಲ್ಲಿ ನಡೆದ ಹೋಬರ್ಟ್ ಹರಿಕೇನ್ಸ್ ವಿರುದ್ಧದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಪಂದ್ಯದ ಸಂದರ್ಭದಲ್ಲಿ ಅಂಪೈರ್​ಗೆ ಬೆದರಿಕೆ ಹಾಕಿದ ಆರೋಪ ಅವರು ಎದುರಿಸುತ್ತಿದ್ದಾರೆ. ಅವರನ್ನು ನಾಲ್ಕು ಪಂದ್ಯಗಳಿಂದ ಅಮಾನತು ಮಾಡಲಾಗಿದೆ. ಆದಾಗ್ಯೂ ಅವರ ತಂಡ ಸಿಡ್ನಿ ಸಿಕ್ಸರ್ಸ್ ತಮ್ಮ ಆಟಗಾರನ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಿದೆ.

ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಹೇಳಿಕೆಯ ಪ್ರಕಾರ, ನೀತಿ ಸಂಹಿತೆ ಆಯುಕ್ತ ಆಡ್ರಿಯನ್ ಆಂಡರ್ಸನ್ ಅವರು ಪಂದ್ಯಕ್ಕೆ ಮೊದಲು ಅಭ್ಯಾಸ ನಡೆಸುತ್ತಿದ್ದ ಕರ್ರನ್ ಅವರಿಗೆ ಪಿಚ್​ ಮೇಲೆ ಓಡಾಡದಂತೆ ಮೌಖಿಕವಾಗಿ ಸೂಚನೆ ನೀಡಿದ್ದರು. ಆದಾಗ್ಯೂ, ಬಲಗೈ ವೇಗಿ ಪಿಚ್​​ಗೆ ವಿರುದ್ಧ ತುದಿಗೆ ಹೋಗಿ ಮತ್ತೊಂದು ಅಭ್ಯಾಸ ಓಟವನ್ನು ಪ್ರಾರಂಭಿಸಿದರು. ಕರ್ರನ್ ಅವರ ಓಟವನ್ನು ನಿಲ್ಲಿಸಲು ಅಂಪೈರ್ ಅವರ ದಾರಿಗೆ ಅಡ್ಡ ನಿಂತಿದ್ದರು. ಈ ವೇಳೆ ಅಂಪೈರ್​​ಗೆ ಕೈ ತೋರಿಸಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಅಂತಿಮವಾಗಿ ಕರ್ರನ್​ ಜೋರಾಗಿ ಓಡಿ ಬಂದರು. ಬಳಿಕ ಅಂಪೈರ್​ ತಾವೇ ಜಾಗಬಿಟ್ಟುಕೊಡಬೇಕಾಯಿತು.

ಇದನ್ನೂ ಓದಿ : ಖೇಲ್‌ ರತ್ನ ಸಿಗದ ನಿರಾಸೆಯಲ್ಲಿ ಕೋರ್ಟ್​ ಮೆಟ್ಟಿಲೇರಲು ಮುಂದಾದ ಜ್ಯೋತಿ ಸುರೇಖಾ

ತಪ್ಪು ಮಾಡಿರುವ ಹಿನ್ನೆಲೆಯಲ್ಲಿ ಕರ್ರನ್ ವಿರುದ್ಧ ಲೆವೆಲ್ 3 ಅಪರಾಧದ ಆರೋಪ ಹೊರಿಸಲಾಯಿತು. ಸಿಎ ನೀತಿ ಸಂಹಿತೆಯ ಕಲಂ 2.17 ರ ಅಡಿಯಲ್ಲಿ ನಾಲ್ಕು ಅಮಾನತು ಅಂಕಗಳನ್ನು ನೀಡಲಾಯಿತು. ಕಲಂ 2.17ರ ಪ್ರಕಾರ ಪಂದ್ಯದ ವೇಳೆ ಅಂಪೈರ್ ಅಥವಾ ಮ್ಯಾಚ್ ರೆಫರಿಯನ್ನು ಭಾಷೆ ಅಥವಾ ನಡವಳಿಕೆಯಿಂದ (ಸನ್ನೆಗಳು ಸೇರಿದಂತೆ) ಬೆದರಿಸುವುದು ಅಥವಾ ಬೆದರಿಸಲು ಪ್ರಯತ್ನಿಸುವುದುಈ ಶಿಕ್ಷೆ ಒಳಪಟ್ಟಿರುತ್ತದೆ. ಆದಾಗ್ಯೂ, ಸಿಕ್ಸರ್ಸ್ ಪೆನಾಲ್ಟಿಯನ್ನು ಪ್ರಶ್ನಿಸಲು ತಮ್ಮ ಹಕ್ಕನ್ನು ಬಳಸಲು ನಿರ್ಧರಿಸಿದೆ. ತೀರ್ಪತನ್ನು ಪ್ರಶ್ನಿಸಲು ಏಳು ದಿನಗಳ ಕಾಲಾವಕಾಶವಿದೆ.

ಟಾಮ್ ತಿಳಿದೋ ಅಥವಾ ಉದ್ದೇಶಪೂರ್ವಕವಾಗಿ ಪಂದ್ಯದ ಅಧಿಕಾರಿಯನ್ನು ಬೆದರಿಸಿಲ್ಲ ಎಂದು ಟಾಮ್ ಅವರ ಕ್ಲಬ್ ಸಮರ್ಥಿಸಿಕೊಂಡಿದೆ. ಕಾನೂನು ಸಲಹೆಯ ಮೇರೆಗೆ ನಾವು ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವ ನಮ್ಮ ಹಕ್ಕನ್ನು ಚಲಾಯಿಸುತ್ತೇವೆ. ಈ ಅವಧಿಯಲ್ಲಿ ನಾವು ಟಾಮ್ ಅವರನ್ನು ಬೆಂಬಲಿಸುತ್ತೇವೆ ಮತ್ತು ಅವರು ಮೈದಾನಕ್ಕೆ ಮರಳುವುದನ್ನು ಎದುರು ನೋಡುತ್ತೇವೆ ಎಂದು ಸಿಡ್ನಿ ಸಿಕ್ಸರ್ಸ್ ತಂಡದ ಮುಖ್ಯಸ್ಥ ರಾಚೆಲ್ ಹೇನ್ಸ್ ಕ್ಲಬ್​ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೊಯ್ಸೆಸ್ ಹೆನ್ರಿಕ್ಸ್ ನೇತೃತ್ವದ ಸಿಕ್ಸರ್​ ತಂಡವು ಭರವಸೆದಾಯಕವಾಗಿ ಪ್ರಾರಂಭಿಸಿದೆ. ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಹೋಬರ್ಟ್ ಹರಿಕೇನ್ಸ್ ವಿರುದ್ಧ ತಮ್ಮ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಡಿಸೆಂಬರ್ 22ರ ಶುಕ್ರವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಸಿಕ್ಸರ್ಸ್ ಸೆಣಸಲಿದೆ.

Exit mobile version