Site icon Vistara News

West Indies Cricket: ಕ್ರಿಕೆಟ್‌ ಜಗತ್ತನ್ನು ಆಳಿದ್ದ ವಿಂಡೀಸ್‌ ಈಗ ಪಾತಾಳಕ್ಕೆ ಕುಸಿಯಲು ಇದುವೇ ಪ್ರಮುಖ ಕಾರಣ

West Indies captain Shai Hope

ಬೆಂಗಳೂರು: ಅದೊಂದು ಕಾಲವಿತ್ತು… ವೆಸ್ಟ್​ ಇಂಡೀಸ್(West Indies Cricket)​ ವಿರುದ್ಧ ಆಡುವುದೆಂದರೆ ಎಂತಹ ಆಟಗಾರರ ಎದೆಯೂ ಒಮ್ಮೆ ನಡುಗಲಾರಂಭಿಸುತಿತ್ತು. ಸೋಲಿನ ಭಯ ಮಾತ್ರವಲ್ಲ, ದೇಹದ ಯಾವ ಭಾಗಕ್ಕೆ ಎಷ್ಟು ಹಾನಿ ಆಗಲಿದೆ ಎಂಬ ಆತಂಕ ಕಾಡುತಿತ್ತು. ಈ ಬಾರಿ ಏನು ಕಾದಿದೆಯೊ ಎನ್ನುವಷ್ಟು ಹೆದರಿಕೆ. ವೆಸ್ಟ್‌ ಇಂಡೀಸ್‌ ತಂಡದ ಹೆಸರು ಕೇಳಿದರೆ ಆಟಗಾರರ ಕುಟುಂಬದವರೂ ಆತಂಕಕ್ಕೆ ಒಳಗಾಗುತ್ತಿದ್ದ ಕಾಲವದು. ಅಂತಹ ತಂಡದ ವಿರುದ್ಧ ಇಂದು ಯಾರು ಬೇಕಾದರೂ ಗೆಲ್ಲಬಹುದು ಎಂಬ ಸ್ಥಿತಿ ಬಂದೊದಗಿದೆ. ವಿಂಡೀಸ್​ ತಂಡದ ಈ ಸ್ಥಿತಿಗೆ ಇಲ್ಲಿನ ಕ್ರಿಕೆಟ್​ ಮಂಡಳಿಯ ದಿವಾಳಿಯೇ ಪ್ರಮುಖ ಕಾರಣ.

1975 ಮತ್ತು 1979 ರ ಚಾಂಪಿಯನ್‌ ವಿಂಡೀಸ್ 48 ವರ್ಷಗಳ ಏಕದಿನ ವಿಶ್ವ ಕಪ್​ ಇತಿಹಾಸದಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಗ್ರ 10 ತಂಡಗಳಲ್ಲಿ ಕಾಣಿಸಿಕೊಳ್ಳದಿರುವುದು ಇದೇ ಮೊದಲು. ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಸೋತು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಅರ್ಹತೆ(World Cup Qualifier) ಪಡೆಯುವ ರೇಸ್‌ನಿಂದ ಹೊರ ಬಿದ್ದ ಸಂಕಟಕ್ಕೆ ಸಿಲುಕಿದೆ. ಕಳೆದ ವರ್ಷ ನಡೆದ ಟಿ20 ವಿಶ್ವ ಕಪ್​ಗೂ ವಿಂಡೀಸ್​ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.

ಹಣಕಾಸು ಸಮಸ್ಯೆಯೇ ತಂಡದ ವೈಫಲ್ಯಕ್ಕೆ ಕಾರಣ

ಹಲವು ವರ್ಷಗಳ ಕಾಲ ಕ್ರಿಕೆಟ್‌ ಜಗತ್ತನ್ನು ಆಳಿದ್ದ ವಿಂಡೀಸ್‌ ಈಗ ಪಾತಾಳಕ್ಕೆ ಕುಸಿದಿದೆ. ಟೆಸ್ಟ್‌, ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಕೆಳ ಕ್ರಮಾಂಕದಲ್ಲಿದೆ. ಆಟಗಾರರಿಗೆ ವೇತನ ನೀಡಲಾಗದಷ್ಟು ಸಮಸ್ಯೆಯನ್ನು ಮಂಡಳಿ ಎದುರಿಸುತ್ತಿದೆ. ಹೀಗಾಗಿ ಆಟಗಾರರು ಸಿಡಿದೆದ್ದು ತಂಡಕ್ಕೆ ರಾಜಿನಾಮೆ ನೀಡುತ್ತಿದ್ದಾರೆ. ಗುತ್ತಿಗೆ ಒಪ್ಪಂದ ಸಂಬಂಧ ಬಿಕ್ಕಟ್ಟು ಸೃಷ್ಟಿಯಾಗಿ ನಾಲ್ಕೈದು ವರ್ಷ ಕಳೆದಿದೆ. ಈಗಲೂ ಈ ಸಮಸ್ಯೆ ಹಾಗೆಯೇ ಇದೆ. ಇದೇ ಕಾರಣಕ್ಕೆ ಹಲವು ಆಟಗಾರರು ಈಗಾಗಲೇ ತಂಡ ತೊರೆದಿದ್ದಾರೆ. ಇನ್ನು ಕೆಲ ಆಟಗಾರರು ರಾಜಿನಾಮೆ ನೀಡದಿದ್ದೂ ತಂಡ ಆಯ್ಕೆಗೆ ಲಭ್ಯವಿಲ್ಲ. ಇದರ್ಲಿ ಸುನೀಲ್​ ನಾರಾಯಣ್​, ಆ್ಯಂಡ್ರೆ ರಸೆಲ್​ ಪ್ರಮುಖರು. 2019ರ ಬಳಿಕ ಉಭಯ ಆಟಗಾರರು ರಾಷ್ಟ್ರೀಯ ತಂಡದ ಪರ ಆಡಿಲ್ಲ. ಕಾರಣ ವೇತನ ಸಮಸ್ಯೆ. ಆದರೆ ಈ ಆಟಗಾರರು ಇತರ ದೇಶದಲ್ಲಿ ನಡೆಯುವ ಟಿ20 ಲೀಗ್​ನಲ್ಲಿ ಆಡಿ ಉತ್ತಮ ಪ್ರದರ್ಶನ ತೋರಿತ್ತಿದ್ದಾರೆ.

ಇದನ್ನೂ ಓದಿ World Cup Qualifier: 48 ವರ್ಷಗಳ ಏಕದಿನ ವಿಶ್ವ ಕಪ್​ ಇತಿಹಾಸದಲ್ಲೇ ವಿಂಡೀಸ್​ಗೆ ಮೊದಲ ಬಾರಿ ನಿರಾಸೆ

2014ರಲ್ಲಿ ವೆಸ್ಟ್‌ಇಂಡೀಸ್‌ ತಂಡದವರು ಭಾರತ ಪ್ರವಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿ ಸ್ವದೇಶಕ್ಕೆ ಹಿಂತಿರುಗಿದ್ದು ಎಲ್ಲರಿಗೂ ಗೊತ್ತೇ ಇದೆ. ಮಂಡಳಿಯೊಂದಿಗೆ ಒಪ್ಪಂದಕ್ಕೆ ಸಿದ್ಧರಿಲ್ಲದ ಕಾರಣ ಆಟಗಾರರು ಈ ಪ್ರವಾಸವನ್ನು ಮೊಟಕುಗೊಳಿಸಿದ್ದರು. ಹೆಚ್ಚು ವೇತನಕ್ಕಾಗಿ ಪಟ್ಟು ಹಿಡಿದಿದ್ದ ಅನೇಕ ಆಟಗಾರು ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಆಡಲು ಹಿಂದೇಟು ಹಾಕಿದ್ದರು. ಹಲವು ಆಟಗಾರರು ವಿಂಡೀಸ್​ ತಂಡವನ್ನು ಪ್ರತಿನಿಧಿಸುವುದನ್ನು ಬಿಟ್ಟು ಟ್ವೆಂಟಿ–20 ಲೀಗ್‌ನಲ್ಲಿ ಆಡುತ್ತಾ ಹಣ ಸಂಪಾದಿಸುತ್ತಿದ್ದಾರೆ. ಇದೇ ಕಾರಣಕ್ಕೆ ವಿಂಡೀಸ್​ ತಂಡ ಇಂದು ಪಾತಳಕ್ಕೆ ಕುಸಿಯಲು ಪ್ರಮುಖ ಕಾರಣ.

Exit mobile version