Site icon Vistara News

INDvsENG ODI | ಮಾರಕ ಬೌಲಿಂಗ್‌ ಮಾಡಿದ ಟೋಪ್ಲಿ, ಭಾರತಕ್ಕೆ 100 ರನ್‌ಗಳ ಸೋಲಿನ ಟೋಪಿ!

ಲಂಡನ್‌: ಇಂಗ್ಲೆಂಡ್‌ ಬೌಲರ್‌ ರೀಸ್‌ ಟೋಪ್ಲಿಯ‌ (೨೬ ರನ್‌ಗಳಿಗೆ ೬ ವಿಕೆಟ್‌) ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಭಾರತ ತಂಡ INDvsENG ODI ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ತಂಡದ ವಿರುದ್ಧ ೧೦೦ ರನ್‌ಗಳ ಹೀನಾಯ ಸೋಲಿಗೆ ಒಳಗಾಗಿದೆ. ಈ ಮೂಲಕ ಸರಣಿಯು ೧-೧ ಸಮಬಲ ಫಲಿತಾಂಶ ಪಡೆದುಕೊಂಡಿದೆ.

ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಭಾರತ ತಂಡದ ಸ್ಪಿನ್ನರ್‌ ಯಜ್ವೇಂದ್ರ ಚಹಲ್‌ (೪೭ರನ್‌ಗಳಿಗೆ ೪ ವಿಕೆಟ್) ಅವರ ನಿಖರ ಬೌಲಿಂಗ್‌ ದಾಳಿಯ ಬಲದಿಂದ ಎದುರಾಳಿ ತಂಡವನ್ನು ೪೯ ಓವರ್‌ಗಳಿಗೆ ೨೪೬ ರನ್‌ಗಳಿಗೆ ನಿಯಂತ್ರಿಸಿತು. ಗುರಿ ಬೆನ್ನಟ್ಟು ಆರಂಭಿಸಿದ ಭಾರತ ಆಂಗ್ಲರ ಪಡೆಯ ಬೌಲಿಂಗ್‌ಗೆ ತತ್ತರಿಸಿ ೩೮.೫ ಓವರ್‌ಗಳಲ್ಲಿ ೧೪೬ ರನ್‌ಗಳಿಗೆ ಸರ್ವಪತನ ಕಂಡಿತು. ಇದು ರೋಹಿತ್‌ ಶರ್ಮ ಕಾಯಂ ನಾಯಕತ್ವದಲ್ಲಿ ಭಾರತಕ್ಕೆ ಎದುರಾದ ಮೊದಲ ಒಡಿಐ ಸೋಲು.

ಭಾರತ ಪರ ಸೂರ್ಯಕುಮಾರ್‌ ಯಾದವ್‌ (೨೭), ಹಾರ್ದಿಕ್‌ ಪಾಂಡ್ಯ (೨೯), ರವೀಂದ್ರ ಜಡೇಜಾ (೨೯) ಹಾಗೂ ಮೊಹಮ್ಮದ್‌ ಶಮಿ (೨೩) ಸ್ವಲ್ಪ ಮಟ್ಟಿನ ಪ್ರತಿರೋಧ ತೋರಿದರೂ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಮೂಡಿಬರಲಿಲ್ಲ. ಅದರಲ್ಲೂ ಆರಂಭಿಕ ಕ್ರಮಾಂಕದ ಆಟಗಾರರಾದ ಶಿಖರ್‌ ಧವನ್‌ (೯), ನಾಯಕ ರೋಹಿತ್‌ ಶರ್ಮ(೦), ವಿರಾಟ್‌ ಕೊಹ್ಲಿ (೧೬), ರಿಷಭ್‌ ಪಂತ್‌ (೦) ನಿರಾಸೆಯ ಪ್ರದರ್ಶನ ನೀಡಿದರು.

ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟುವಲ್ಲಿ ಭಾರತದ ಬ್ಯಾಟರ್‌ಗಳು ಸಂಪೂರ್ಣ ವೈಫಲ್ಯ ಕಂಡರು. ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸರಣಿಯನ್ನು ಸುಲಭವಾಗಿ ವಶಪಡಿಸಿಕೊಳ್ಳಬಹುದು ಎಂದು ನಿರೀಕ್ಷೆ ಮಾಡಿದ್ದ ಭಾರತ ತಂಡ ಈ ಹಣಾಹಣಿಯಲ್ಲಿ ಕಳಪೆ ಪ್ರದರ್ಶ ನೀಡಿತು.

ಮೊಯೀನ್‌, ವಿಲ್ಲೀ ಆಧಾರ

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡದ ಆಟವೂ ಆಕರ್ಷಕವಾಗಿರಲಿಲ್ಲ. ಆರಂಭಿಕರಾದ ಜೇಸನ್‌ ರಾಯ್‌ (೨೩) ಹಾಗೂ ಜೇಸನ್‌ ರಾಯ್‌ (೩೮) ಉತ್ತಮ ಆರಂಭ ತಂದುಕೊಟ್ಟರೂ ನಂತರದ ಬ್ಯಾಟರ್‌ಗಳು ಬೇಗನೆ ಪೆವಿಲಿಯನ್‌ಗೆ ವಾಪಸಾದರು. ಆದರೆ, ಕೆಳ ಕ್ರಮಾಂಕದ ಬಾಟರ್‌ಗಳಾದ ಮೊಯೀನ್‌ ಅಲಿ (೪೭) ಹಾಗೂ ಡೇವಿಡ್‌ ವಿಲ್ಲಿ (೪೧) ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಇತ್ತಂಡಗಳ ಮೂರನೇ ಹಾಗೂ ಸರಣಿಯ ನಿರ್ಣಾಯಕ ಮೂರನೇ ಪಂದ್ಯ ಭಾನುವಾರ (ಜುಲೈ ೧೭) ನಡೆಯಲಿದೆ.

ಸ್ಕೋರ್‌ ವಿವರ

ಇಂಗ್ಲೆಂಡ್‌: ಇಂಗ್ಲೆಂಡ್‌ ೪೯ ಓವರ್‌ಗಳಲ್ಲಿ ೨೪೬ (ಜೇಸನ್‌ ರಾಯ್‌ ೨೩, ಜಾನಿ ಬೈರ್‌ಸ್ಟೋವ್‌ ೩೮, ಮೊಯೀನ್‌ ಅಲಿ ೪೭, ಡೇವಿಡ್‌ ವಿಲ್ಲಿ ೪೧; ಯಜ್ವೇಂದ್ರ ಚಹಲ್‌ ೪೭ಕ್ಕೆ೪, ಜಸ್‌ಪ್ರಿತ್‌ ಬುಮ್ರಾ ೪೯ಕ್ಕೆ೨, ಹಾರ್ದಿಕ್‌ ಪಾಂಡ್ಯ ೨೮ಕ್ಕೆ೨).

ಭಾರತ: ೩೮.೫ ಓವರ್‌ಗಳಲ್ಲಿ ೧೪೬ (ಸೂರ್ಯಕುಮಾರ್‌ ಯಾದವ್‌ ೨೭, ಹಾರ್ದಿಕ್‌ ಪಾಂಡ್ಯ ೨೯, ರವೀಂದ್ರ ಜಡೇಜಾ ೨೯, ಮೊಹಮ್ಮದ್‌ ಶಮಿ ೨೩; ರೀಸ್‌ ಟೋಪ್ಲಿ ೨೪ಕ್ಕೆ೬)

ಇದನ್ನೂ ಒದಿ: IND vs ENG ODI | ಬುಮ್ರಾ ಬೆಂಕಿ, ಭಾರತಕ್ಕೆ ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ

Exit mobile version