Site icon Vistara News

World cup history : ಭಾರತ ಆತಿಥ್ಯದಲ್ಲಿ ನಡೆದ ಮೊದಲ ವಿಶ್ವ ಕಪ್ ಟೂರ್ನಿಯ ಕೌತುಕದ ಸಂಗತಿಗಳು ಇಲ್ಲಿವೆ

1987 world cup

1983ರ ವಿಶ್ವಕಪ್ ಫೈನಲ್​ನಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ನಂತರ ಭಾರತವು ಕ್ರಿಕೆಟ್ ಕ್ಷೇತ್ರದ ಹೊಸ ಶಕ್ತಿಯಾಗಿ ಬೆಳಗಲು (ICC World Cup 2023) ಆರಂಭಿಸಿತು (World Cup Recap). ಈ ಗೆಲುವು ಭಾರತದ ಅಸಂಖ್ಯಾತ ಕ್ರೀಡಾ ಪ್ರೇಮಿಗಳನ್ನು ಕ್ರಿಕೆಟ್​ ಕ್ಷೇತ್ರದತ್ತ ಸೆಳೆಯುವಂತೆ ಮಾಡಿತು. ದೇಶದ ಅಭಿಮಾನಿಗಳಿಗೆ ಸರಿಸಾಟಿಯಿಲ್ಲದ ಉತ್ಸಾಹ ಮೂಡಿಸಿತು ಹಾಗೂ ಭಾರತದಲ್ಲಿ ಕ್ರಿಕೆಟ್​ ಕ್ರಾಂತಿ ಶುರುವಾಯಿತು. ಭಾರತ ಉಪಖಂಡದಲ್ಲಿ ವಾಸಿಸುವ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಬಯಕೆಯಂತೆ 1987ರ ಕ್ರಿಕೆಟ್ ವಿಶ್ವಕಪ್​ನ ಆತಿಥ್ಯವನ್ನು ಭಾರತ ಮತ್ತು ಪಾಕಿಸ್ತಾನಕ್ಕೆ ಜಂಟಿಯಾಗಿ ನೀಡಲಾಯಿತು. ಅಂದ ಹಾಗೆ ಏಕ ದಿನ ಕ್ರಿಕೆಟ್​ ಪಂದ್ಯವನ್ನು ತಲಾ 60 ಓವರ್​ಗಳ ಇನಿಂಗ್ಸ್​​ನಿಂದ 50 ಓವರ್​ಗಳಿಗೆ ಇಳಿಸಿದ್ದು ಈ ಟೂರ್ನಿಯಲ್ಲಿಯೆ. ಅದಲ್ಲದೆ, ಈ ವಿಶ್ವ ಕಪ್​ ಬಿಳಿ ಬಣ್ಣದ ಜೆರ್ಸಿಯಲ್ಲಿ ಆಡಿದ ಕೊನೇ ಟೂರ್ನಿ. 1992ಕ್ಕೆ ಬಣ್ಣ ಬಣ್ಣದ ಜೆರ್ಸಿ ಹಾಗೂ ಹಗಲು ರಾತ್ರಿ ಪಂದ್ಯಗಳು ಬಂದವು.

ಭಾರತ ಹಾಗೂ ಪಾಕಿಸ್ತಾನಕ್ಕೆ ವಿಶ್ವ ಕಪ್ ಆತಿಥ್ಯ ಸುಲಭವಾಗಿ ಬರಲಿಲ್ಲ. ಇದರ ಹಿಂದೆ ಅವಮಾನದ ಕಥೆಯೊಂದಿದೆ. 1983 ವಿಶ್ವ ಕಪ್​ ಫೈನಲ್​ ಇಂಗ್ಲೆಂಡ್​ನ ಲಾರ್ಡ್ಸ್​​ ಮೈದಾನದಲ್ಲಿ ನಡೆದಿತ್ತು. ಭಾರತ ಫೈನಲ್​ಗೇರಿದ ಕಾರಣ ಭಾರತದಿಂದ ಬಿಸಿಸಿಐನ ಹಲವು ಅಧಿಕಾರಿಗಳು ಇಂಗ್ಲೆಂಡ್​ಗೆ ತೆರಳಿದ್ದರು. ಬಿಸಿಸಿಐ (ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ) ಅಧ್ಯಕ್ಷರಾಗಿದ್ದ ಎನ್​ಕೆಪಿ ಸಾಳ್ವೆ ಅವರು ಆಯೋಜಕರನ್ನು ಸಂಪರ್ಕಿಸಿ ಪಂದ್ಯ ವೀಕ್ಷಣೆಗೆ ಪಾಸ್ ಕೊಡುವಂತೆ ಕೋರಿಕೊಂಡಿದ್ದರು. ಆದರೆ ಇಂಗ್ಲೆಂಡ್​ನ ಟಿಸಿಸಿಬಿ (ಟೆಸ್ಟ್ ಮತ್ತು ಕೌಂಟಿ ಕ್ರಿಕೆಟ್ ಬೋರ್ಡ್) ಕೇವಲ ಎರಡು ಪಾಸ್​ ಮಾತ್ರ ನೀಡಿತು.

ಹೆಚ್ಚಿನ ಪಾಸ್​​ಗಳನ್ನು ನೀಡಲು ಟಿಸಿಸಿಬಿ ನಿರಾಕರಿಸಿದ್ದರಿಂದ ಬಿಸಿಸಿಐ ಸಾಳ್ವೆ ಅವರು ಅವಮಾನಕ್ಕೊಳಗಾಗಿದ್ದರು. ಫೈನಲ್ ಪಂದ್ಯದ ಮರುದಿನ ಅಂದಿನ ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ಅಧ್ಯಕ್ಷ ಏರ್ ಮಾರ್ಷಲ್ ನೂರ್ ಖಾನ್ ಅವರೊಂದಿಗೆ ಸಭೆ ನಡೆಸಿದರು. ಇವರಿಬ್ಬರು ವಿಶ್ವಕಪ್ ಅನ್ನು ವಸಾಹತುಶಾಹಿಗಳ (ಇಂಗ್ಲೆಂಡ್​) ದೂರವಿರಿಸಲು ಯೋಜನೆ ರೂಪಿಸಿದರು. ಇತರ ರಾಷ್ಟ್ರಗಳಿಂದ ಬೆಂಬಲವನ್ನು ಗಳಿಸಿದರು. ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿ ರಾಷ್ಟ್ರಕ್ಕೆ 40,000 ಪೌಂಡ್ ಕೊಡುವ ಒಪ್ಪಂದ ಮಾಡಿಕೊಂಡಿತು.

ಹಣ ಕೊಟ್ಟ ಪರಿಣಾಮವಾಗಿ ಭಾಗವಹಿಸುವ ಇತರ ತಂಡಗಳ ಬೆಂಬಲದೊಂದಿಗೆ ವಿಶ್ವಕಪ್ ಅನ್ನು ಅಂತಿಮವಾಗಿ ಭಾರತ ಮತ್ತು ಪಾಕಿಸ್ತಾನಕ್ಕೆ ತರಲಾಯಿತು. ಈ ವಿಶ್ವ ಕಪ್​ ಅನ್ನು ಪ್ರಾಯೋಜಿಸಲು ಭಾರತ ಸರ್ಕಾರವು ಕೈಗಾರಿಕೋದ್ಯಮಿ ಧೀರೂಭಾಯಿ ಅಂಬಾನಿ ಅವರನ್ನು ಸಂಪರ್ಕಿಸಿತು. ಆದ್ದರಿಂದ 1987 ರ ವಿಶ್ವಕಪ್ ಅನ್ನು ಅಧಿಕೃತವಾಗಿ ಅವರ ಕಂಪನಿಯ ಹೆಸರಿನ ನಂತರ ‘ದಿ ರಿಲಯನ್ಸ್ ಕಪ್’ ಎಂದು ಕರೆಯಲಾಯಿತು.

ಭಾಗವಹಿಸಿದ ತಂಡಗಳು ಮತ್ತು ಸ್ವರೂಪ

ಆ ಸಮಯದಲ್ಲಿ ಟೆಸ್ಟ್ ಸ್ಥಾನಮಾನವನ್ನು ಹೊಂದಿದ್ದ ಏಳು ದೇಶಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ಸ್ಪರ್ಧೆ ನಡೆಯಿತು. ಇದಲ್ಲದೆ, ಜಿಂಬಾಬ್ವೆ 1986 ರ ಐಸಿಸಿ ಟ್ರೋಫಿಯನ್ನು ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು.

ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಯಿತು ಗುಂಪು ಹಂತಗಳಲ್ಲಿ ಎರಡು ಬಾರಿ ಪರಸ್ಪರ ಮುಖಾಮುಖಿಯಾದವು. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್ ಗೆ ಅರ್ಹತೆ ಪಡೆದವು. ಎರಡೂ ಪಂದ್ಯಗಳ ವಿಜೇತರು ಫೈನಲ್ ನಲ್ಲಿ ಸೆಣಸಿದರು. 1987 ರ ವಿಶ್ವಕಪ್ ತಂದ ಒಂದು ಪ್ರಮುಖ ಬದಲಾವಣೆಯೆಂದರೆ ಓವರ್​ಗಳ ಸಂಖ್ಯೆಯನ್ನು ಪ್ರತಿ ತಂಡಕ್ಕೆ 60 ರಿಂದ 50 ಓವರ್​ಗಳಿಗೆ ಇಳಿಸಲಾಯಿತು. ಕ್ರಿಕೆಟ್ ಪ್ರೇಮಿಗಳ ರಾಷ್ಟ್ರದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಲು ದೂರದರ್ಶನಕ್ಕೆ (ಡಿಡಿ ಚಾನೆಲ್​) ಪಂದ್ಯಗಳನ್ನು ನೇರ ಪ್ರಸಾರ ಮಾಡುವ ಹಕ್ಕನ್ನು ನೀಡಲಾಯಿತು.

ಒಂದು ರನ್ ನಿಂದ ಭಾರತಕ್ಕೆ ಸೋಲು!

ಅಂತಿಮವಾಗಿ ಪಂದ್ಯಾವಳಿಯು ಪ್ರಾರಂಭವಾಯಿತು. ಸಹ ಆತಿಥೇಯ ಪಾಕಿಸ್ತಾನವು ಶ್ರೀಲಂಕಾವನ್ನು ಮೊದಲ ಪಂದ್ಯದಲ್ಲಿ ಎದುರಿಸಿ 16ರನ್ ಗಳಿಂದ ಗೆದ್ದಿತು. ಆದಾಗ್ಯೂ, ಚೆನ್ನೈನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಪಂದ್ಯದ ಸಮಯದಲ್ಲಿ ಪ್ರೇಕ್ಷಕರ ಅಬ್ಬರ ಮಿತಿಮೀರಿತ್ತು. ಎರಡೂ ತಂಡಗಳು ಹಿಂದಿನ ವರ್ಷ ಇದೇ ಸ್ಥಳದಲ್ಲಿ ಐತಿಹಾಸಿಕ ಸಮಬಲದ ಟೆಸ್ಟ್​ ಸರಣಿಗೆ ಸಾಕ್ಷಿಯಾಗಿದ್ದವು. 270 ರನ್ ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾದ ನಂತರ ಭಾರತವು ಕೇವಲ ಒಂದು ರನ್​ಗಳ ವೀರೋಚಿತ ಸೋಲನ್ನು ಅನುಭವಿಸಿತ್ತು

ಒಳ್ಳೆಯತನವೇ ಸೋಲಿಗೆ ಕಾರಣ

ಈ ಪಂದ್ಯವು ಆಸಕ್ತಿದಾಯಕವಾಗಿ ಉಳಿಯಲು ಇನ್ನೊಂದು ಸಂಗತಿಯಿದೆ. ಅದೇನೆಂದರೆ ಮೊದಲು ಬ್ಯಾಟ್​ ಮಾಡುತ್ತಿದ್ದ ಆಸ್ಟ್ರೇಲಿಯಾ ತಂಡದ ಡೀನ್ ಜೋನ್ಸ್ ಅವರು ಬಾರಿಸಿದ್ದ ಚೆಂಡನ್ನು ರವಿ ಶಾಸ್ತ್ರಿ ಲಾಂಗ್​ ಆನ್​​ನಲ್ಲಿ ಕೈ ಚೆಲ್ಲಿದ್ದರು. ಶಾಸ್ತ್ರಿಯ ಕೈಯಿಂದ ಜಾರಿದ್ದ ಚೆಂಡು ಬೌಂಡರಿಯಿಂದ ಆಚೆ ಬಿದ್ದಿತ್ತು. ಆದರೆ, ಭಾರತ ತಂಡದ ಆಟಗಾರರು ಚೆಂಡು ಬೌಂಡರಿ ಗೆರೆ ದಾಟುವ ಮೊದಲು ಒಳಗೆ ಪುಟಿದಿತ್ತು ಎಂದು ವಾದ ಮಾಡಿದರು. ಕೊನೆಗೆ ಅಂಪೈರ್ ಫೋರ್​ ಎಂದು ಸಂಕೇತ ನೀಡಿದರು ನಿರ್ಧಾರಕ್ಕೆ ಆಸ್ಟ್ರೇಲಿಯನ್ನರು ಅಸಮಾಧಾನಗೊಂಡರು. ಊಟದ ವಿರಾಮದ ಸಮಯದಲ್ಲಿ ಆ ತಂಡದ ವ್ಯವಸ್ಥಾಪಕರು ಭಾರತೀಯ ಡ್ರೆಸ್ಸಿಂಗ್ ಕೋಣೆಗೆ ಹೋಗಿ ತಮ್ಮ ನಿರಾಸೆ ವ್ಯಕ್ತಪಡಿಸಿದರು.

ಅಂತಿಮವಾಗಿ ಭಾರತ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಕ್ರೀಡಾ ಸ್ಫೂರ್ತಿಯ ಸಂಕೇತವಾಗಿ ಅವರ ಮನವಿಯನ್ನು ಒಪ್ಪಿಕೊಂಡರು. ಆಸ್ಟ್ರೇಲಿಯಾದ ಸ್ಕೋರ್ ಅನ್ನು 268 ರಿಂದ 270 ಕ್ಕೆ ಪರಿಷ್ಕರಿಸಲಾಯಿತು. ಈ ನಿರ್ಧಾರವು ಆಸೀಸ್ ಗೆ ಗೇಮ್ ಚೇಂಜರ್ ಆಗಿ ಪರಿಣಮಿಸಿತು. ಅವರು ಕೇವಲ ಒಂದು ರನ್ ನಿಂದ ಗೆದ್ದರು!

ವಿಂಡೀಸ್​ಗೆ ಆಘಾತ

ಟೂರ್ನಿಯ 18ನೇ ಪಂದ್ಯದಲ್ಲಿ ಜೈಪುರದಲ್ಲಿ ನಡೆಯಿತು. ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್​ ಇಂಡೀಸ್​ಗೆ ಇಂಗ್ಲೆಂಡ್ ಎದುರಾಯಿತು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ವಿವಿಯನ್ ರಿಚರ್ಡ್ಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇಂಗ್ಲೆಂಡ್​ ತಂಡ ಗ್ರಹಾಂ ಗೂಚ್ ಅವರ 92 (137) ರನ್​ಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿತು. ಪ್ರತಿಯಾಗಿ ಆಡಿದ ವಿಂಡೀಸ್ 235 ರನ್​ಗಳಿಗೆ ಆಲೌಟ್ ಆಗಿ 34 ರನ್​ಗಳಿಂದ ಸೋಲನುಭವಿಸಿತು. ಈ ಸೋಲು ವಿಶ್ವ ಕಪ್​ನಲ್ಲಿ ವೆಸ್ಟ್ ಇಂಡೀಸ್​ ತಂಡದ ಪ್ರಾಬಲ್ಯವನ್ನು ಕೊನೆಗೊಳಿಸಿತು ಏಕೆಂದರೆ ಆ ತಂಡ ಮೊದಲ ಬಾರಿಗೆ ಸೆಮಿಫೈನಲ್​ಗೆ ಮುಂಚಿತವಾಗಿ ಹೊರಕ್ಕೆ ಬಿತ್ತು.

ಚೇತನ್​ ಶರ್ಮಾ ಹ್ಯಾಟ್ರಿಕ್​ ಸಾಧನೆ

ನಾಗ್ಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಭಾರತದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತದ ವೇಗಿ ಚೇತನ್ ಶರ್ಮಾ ಹ್ಯಾಟ್ರಿಕ್ ಸಾಧನೆ ಮಾಡಿದರು. ವಿಶ್ವ ಕಪ್​ನಲ್ಲಿ ಈ ದಾಖಲೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 42ನೇ ಓವರ್​ನ ಕೊನೆಯ ಮೂರು ಎಸೆತಗಳಲ್ಲಿ ಕೆನ್ ರುದರ್ಫೋರ್ಡ್, ಇಯಾನ್ ಸ್ಮಿತ್ ಮತ್ತು ಎವೆನ್ ಚಾಟ್​ಪೀಲ್ಡ್​ ಅವರ ಸ್ಟಂಪ್​​ಗಳನ್ನು ಶರ್ಮಾ ಎಗರಿಸಿದ್ದರು.ಇದು ಭಾರತದ ಮೊದಲ ಹ್ಯಾಟ್ರಿಕ್ ಮತ್ತು ವಿಶ್ವಕಪ್ ಇತಿಹಾಸದಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆ.

ಗವಾಸ್ಕರ್ ಮೊದಲ ಹಾಗೂ ಏಕೈಕ ಶತಕ

ಚೇತನ್​ ಶರ್ಮಾ 10 ಓವರ್​ಗಳಲ್ಲಿ 51 ರನ್​ಗಳಿಗೆ 3 ವಿಕೆಟ್ ಪಡೆದ ಕಾರಣ ನ್ಯೂಜಿಲೆಂಡ್ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ 42.2 ಓವರ್​ಗಳಲ್ಲಿ ಗುರಿಯನ್ನು ಬೆನ್ನಟ್ಟಿ ಗುಂಪು ಹಂತದ ಮೊದಲ ತಂಡವಾಗಿ ಸೆಮಿಫೈನಲ್​ಗೇರಿತು. ಜತೆಗೆ ಪಾಕ್​ ವಿರುದ್ಧದ ಸೆಮಿಫೈನಲ್​ ಮುಖಾಮುಖಿಯನ್ನು ತಪ್ಪಿಸಿಕೊಂಡಿತು. ಪಂದ್ಯದಲ್ಲಿ ಬ್ಯಾಟರ್​​ ಸುನಿಲ್ ಗವಾಸ್ಕರ್ 103* (88) ರನ್ ಗಳಿಸಿ ಭಾರತದ ಗೆಲುವಿಗೆ ನೆರವಾದರು. ವಿಶೇಷವೆಂದರೆ, ಇದು ಗವಾಸ್ಕರ್ ಅವರ ಏಕದಿನ ಕ್ರಿಕೆಟ್​ ವೃತ್ತಿಜೀವನದ ಮೊದಲ ಮತ್ತು ಏಕೈಕ ಶತಕವಾಗಿದೆ.

ಇದನ್ನೂ ಓದಿ : World Cup History: ಲಾರ್ಡ್ಸ್​ ಅಂಗಳದಲ್ಲಿ ಚೊಚ್ಚಲ ವಿಶ್ವಕಪ್​ ಎತ್ತಿದ ‘ಕಪಿಲ್ ಡೆವಿಲ್ಸ್’

ಭಾರತ-ಪಾಕಿಸ್ತಾನದ ನಿರೀಕ್ಷೆ ಹುಸಿಗೊಳಿಸಿದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್

ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಆಸ್ಟ್ರೇಲಿಯಾ, ಕರಾಚಿಯಲ್ಲಿ ನಡೆದ ಮೊದಲ ಸೆಮಫೈನಲ್​​ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿತು. ಡೇವಿಡ್ ಬೂನ್ ಅವರ 65 (91) ಅರ್ಧ ಶತಕದ ನೆರವಿನಿಂದ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 267 ರನ್ ಗಳಿಸಿತು. ಉತ್ತರವಾಗಿ ಪಾಕಿಸ್ತಾನ ತಂಡವು ಚೇಸಿಂಗ್ ಹಾದಿಯಲ್ಲಿ ಉತ್ತಮವಾಗಿತ್ತು. ನಾಯಕ ಇಮ್ರಾನ್ ಖಾನ್ (84 ಎಸೆತಗಳಲ್ಲಿ 58 ರನ್) ಔಟಾದ ನಂತರ ತಮ್ಮ ತಂಡ ಕುಸಿಯಿತು. ಪರಿಣಾಮ ಆಸ್ಟ್ರೇಲಿಯಾವು ಪಂದ್ಯವನ್ನು 18 ರನ್ಗಳಿಂದ ಗೆದ್ದುಕೊಂಡಿತು.

ಮುಂಬೈನಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಿತು. ಪಂದ್ಯಕ್ಕೂ ಮುನ್ನ ಭಾರತದ ಎಡಗೈ ಸ್ಪಿನ್ನರ್​ಗಳಾದ ರವಿಶಾಸ್ತ್ರಿ ಮತ್ತು ಮಣಿಂದರ್ ಸಿಂಗ್ ಒಡ್ಡುವ ಬೆದರಿಕೆಯ ಬಗ್ಗೆ ಇಂಗ್ಲೆಂಡ್​​ಗೆ ಚೆನ್ನಾಗಿ ತಿಳಿದಿತ್ತು. ನಾಯಕ ಮೈಕ್ ಗ್ಯಾಟಿಂಗ್ ಮತ್ತು ಆರಂಭಿಕ ಆಟಗಾರ ಗ್ರಹಾಂ ಗೂಚ್ ತಮ್ಮ ಸ್ವೀಪ್ ತಂತ್ರವನ್ನು ಬಳಸಲು ನಿರ್ಧರಿಸಿದ್ದರು..

ಪಂದ್ಯಕ್ಕೆ ತಯಾರಿ ನಡೆಸಲು ಗೂಚ್ ಎರಡು ದಿನಗಳ ಕಾಲ ಎಡಗೈ ಸ್ಪಿನ್ನರ್​ಗಳ ವಿರುದ್ಧ ಬ್ಯಾಟಿಂಗ್ ಮಾಡಿದ್ದರು. ಮತ್ತು ನೆಟ್ಸ್​​ನಲ್ಲಿ ಕೇವಲ ಸ್ವೀಪ್ ಮಾಡಿದ್ದರು. ಅಂತೆಯೇ ಗೂಚ್ (136 ಎಸೆತಗಳಲ್ಲಿ 115 ರನ್) ಮತ್ತು ಗ್ಯಾಟಿಂಗ್ (62 ಎಸೆತಗಳಲ್ಲಿ 56 ರನ್) ಉತ್ತಮವಾಗಿ ಆಡಿದ ಕಾರಣ ಇಂಗ್ಲೆಂಡ್​ 6 ವಿಕೆಟ್​ಗೆ 254 ರನ್ ಬಾರಿಸಿತು. ಪ್ರತಿಯಾಗಿ ಭಾರತ 219 ರನ್​ಗಳಿಗೆ ಆಲೌಟ್ ಆಗಿ ಟೂರ್ನಿಯಿಂದ ಹೊರಬಿದ್ದಿತು.

ಆಸ್ಟ್ರೇಲಿಯಾ ​ ಚಾಂಪಿಯನ್​

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಹಿಂದೆ ಫೈನಲ್ಸ್​ಗಳಲ್ಲಿ ಸೋತು ಟ್ರೋಫಿ ಗೆಲ್ಲಲು ವಿಫಲವಾದ ಎರಡೂ ತಂಡಗಳು ವಿಶ್ವ ಚಾಂಪಿಯನ್ ಕಿರೀಟ ಧರಿಸಲು ಉತ್ಸುಕರಾಗಿದ್ದವು. ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಅಲನ್ ಬಾರ್ಡರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು, ಡೇವಿಡ್ ಬೂನ್ (125 ಎಸೆತಗಳಲ್ಲಿ 75 ರನ್) ಮತ್ತೊಮ್ಮೆ ತಮ್ಮ ತಂಡಕ್ಕೆ 3 ವಿಕೆಟ್​ಗೆ 253 ರನ್​ ಬಾರಿಸಲು ನೆರವಾದರು.

ಪ್ರತಿಯಾಗಿ ಇಂಗ್ಲೆಂಡ್​ ಉತ್ತಮವಾಗಿ ಆಡಿತು ನಾಯಕ ಮೈಕ್ ಗ್ಯಾಟಿಂಗ್ (44 ಎಸೆತಗಳಲ್ಲಿ 41 ರನ್) ಆಸೀಸ್​ ಬೌಲರ್​ಗಳನ್ನು ಹಿಮ್ಮೆಟ್ಟಿಸಿದರು. ಭಾರತದ ವಿರುದ್ಧದ ಸ್ವೀಪ್​ ತಂತ್ರಗಳನ್ನು ಬಳಸಿದ್ದ ಗ್ಯಾಟಿಂಗ್​ ಆಸೀಸ್ ವಿರುದ್ಧವೂ ಪ್ರಯೋಗಿಸಿ ಸಫಲರಾಗುತ್ತಿದ್ದರು. ಬಳಿಕ ಆಸೀಸ್​ ನಾಯಕ ಆಲನ್​ ಬಾರ್ಡರ್​ ದಾಳಿಗಿಳಿದಿದ್ದರು. ಅಂತಿಮವಾಗಿ ಗ್ಯಾಟಿಂಗ್ ವಿಕೆಟ್​ ಪಡೆದರು. ಇಂಗ್ಲೆಂಡ್​ನ ಇತರ ಆಟಗಾರರು ಪ್ರಯತ್ನ ಮಾಡಿದರೂ ಏಳು ರನ್​ಗಳಿಂದ ಸೋತು ಚಾಂಪಿಯನ್ ಆಗುವ ಅವಕಾಶ ಪಡೆದುಕೊಂಡಿತು ಆದರೆ, ಅಲನ್ ಬಾರ್ಡರ್ ಬಳಗ ಮೊದಲ ಟ್ರೋಫಿ ಗೆದ್ದಿತ್ತು. ಮುಂಬರುವ ವರ್ಷಗಳಲ್ಲಿ ವಿಶ್ವ ಕ್ರಿಕೆಟ್​ನಲ್ಲಿ ಆ ತಂಡ ಪ್ರಾಬಲ್ಯಕ್ಕೆ ಇದು ಅಡಿಪಾಯ ಎನಿಸಿತು.

ಇಂಗ್ಲೆಂಡ್ನ ಗ್ರಹಾಂ ಗೂಚ್ ಎಂಟು ಇನ್ನಿಂಗ್ಸ್​​ನಲ್ಲಿ 58.87 ಸರಾಸರಿಯಲ್ಲಿ 471 ರನ್ ಗಳಿಸಿದ್ದರು. ಮತ್ತೊಂದೆಡೆ, ಆಸ್ಟ್ರೇಲಿಯಾದ ಕ್ರೇಗ್ ಮೆಕ್ಡರ್ಮಾಟ್ ಎಂಟು ಇನಿಂಗ್ಸ್​ಗಳಲ್ಲಿ 18.94 ಸರಾಸರಿಯಲ್ಲಿ 18 ವಿಕೆಟ್​ಗಳನ್ನು ಪಡೆದಿದ್ದರು.

Exit mobile version