1992ರ ಏಕದಿನ ವಿಶ್ವಕಪ್ ಐದನೇ ಆವೃತ್ತಿಯಾಗಿದೆ. ಇದು ಫೆಬ್ರವರಿ 22ರಿಂದ ಮಾರ್ಚ್ 25, 1992 ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ನಡೆಯಿತು. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಲ್ಲಿ ನಡೆದ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಇಮ್ರಾನ್ ಖಾನ್ ನಾಯಕತ್ವದ ಪಾಕಿಸ್ತಾನವು ಚೊಚ್ಚಲ ಟ್ರೋಫಿಯನ್ನು ಎತ್ತಿಹಿಡಿದಿತ್ತು.
1992ರ ವಿಶ್ವಕಪ್ ಆರಂಭದಲ್ಲಿ ಪಾಕಿಸ್ತಾನ ತಂಡದ ಅತ್ಯಂತ ಕಳಪೆ ಪ್ರದರ್ಶನಕ್ಕೆ ಹೆಸರುವಾಸಿಯಾಗಿತ್ತು. ಆದರೂ ಈ ತಂಡ ಕಪ್ ಗೆದ್ದಿದ್ದು ವಿಶೇಷ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಕುಖ್ಯಾತ ಸೆಮಿಫೈನಲ್ ಪಂದ್ಯವೂ ನಡೆದಿದ್ದು ಇದೇ ಆವೃತ್ತಿಯಲ್ಲಿ. ವಿವಾದಾತ್ಮಕ ‘ಮಳೆ ನಿಯಮ’ದ ನೆರವಿನಿಂದ ಇಂಗ್ಲೆಂಡ್ ಫೈನಲ್ಗೆ ತಲುಪಿತು. ದಕ್ಷಿಣ ಆಫ್ರಿಕಾ ತಂಡದ ನಿರಾಸೆಗೆ ಸಮಾಧಾನ ಹೇಳಲು ನಿಯಮ ಒಪ್ಪಲಿಲ್ಲ. ಈ ಆವೃತ್ತಿಯಲ್ಲಿ ಭಾರತ ತಂಡ ಲೀಗ್ ಹಂತ 8 ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದು 6ರಲ್ಲಿ ಸೋತಿತು. ಏಳನೇ ಸ್ಥಾನ ಪಡೆದು ಟೂರ್ನಿಯಿಂದ ನಿರ್ಗಮಿಸಿತು.
ಆವಿಷ್ಕಾರಗಳು ಮತ್ತು ಬದಲಾವಣೆಗಳು
1992 ರ ವಿಶ್ವಕಪ್ನನಲ್ಲಿ ಮೊದಲ ಬಾರಿಗೆ ಬಣ್ಣದ ಜೆರ್ಸಿಗಳು, ಬಿಳಿ ಚೆಂಡುಗಳು ಮತ್ತು ಕಪ್ಪು ದೃಷ್ಟಿ ಪರದೆಗಳನ್ನು ಪರಿಚಯಿಸಲಾಯಿತು. ಆಟಗಳನ್ನು ಫ್ಲಡ್ ಲೈಟ್ ಗಳ ಅಡಿಯಲ್ಲಿ ಆಡಿಸಲಾಯಿತು. ಮೊದಲ ಬಾರಿಗೆ ಕ್ರಿಕೆಟ್ ವಿಶ್ವಕಪ್ ಅನ್ನು ದಕ್ಷಿಣ ಗೋಳಾರ್ಧದಲ್ಲಿ ಆಡಲಾಯಿತು. ವರ್ಣಭೇದ ನೀತಿಯ ನಂತರ ಟೆಸ್ಟ್ ಆಡುವ ರಾಷ್ಟ್ರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗದಕ್ಷಿಣ ಆಫ್ರಿಕಾ ಸೇರಿಕೊಂಡಿತು. ಇದು ನಾಲ್ಕು ವರ್ಷಗಳ ಬದಲು ಐದು ವರ್ಷಗಳ ಅಂತರದ ನಂತರ ಆಡಿದ ಏಕೈಕ ವಿಶ್ವಕಪ್ ಆವೃತ್ತಿ.
ಸಚಿನ್ ತೆಂಡೂಲ್ಕರ್ಗೆ ಮೊದಲ ವಿಶ್ವ ಕಪ್
ಅಂದ ಹಾಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಈ ವಿಶ್ವ ಕಪ್ ಚೊಚ್ಚಲ ವಿಶ್ವ ಕಪ್ ಆವೃತ್ತಿ. ಆ ವೇಳೆ ಅವರಿಗೆ 19 ವರ್ಷ. ಈ ಆವೃತ್ತಿಯಲ್ಲಿ ಸಚಿನ್ 47 ಕ್ಕೂ ಹೆಚ್ಚು ಸರಾಸರಿಯಲ್ಲಿ 283 ರನ್ ಗಳಿಸಿದರು ಮತ್ತು ಪಾಕಿಸ್ತಾನದ ವಿರುದ್ಧ 43 ರನ್ ಮತ್ತು ಜಿಂಬಾಬ್ವೆ ವಿರುದ್ಧ 55 ರನ್ ಬಾರಿಸಿದ್ದರು. ಎರಡೂ ಗೆಲುವುಗಳಲ್ಲಿ ಪಂದ್ಯಶ್ರೇಷ್ಠರಾಗಿದ್ದರು.
ತಂಡಗಳು ಮತ್ತು ಆಟಗಾರರು
1992 ರ ವಿಶ್ವಕಪ್ ಆರಂಭದಲ್ಲಿ ಅಂಡರ್ಡಾಗ್ ಅಗಿದ್ದ ಪಾಕಿಸ್ತಾನವು ತನ್ನ ಮೊದಲ ಮತ್ತು ಏಕೈಕ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಪಂದ್ಯಾವಳಿಯ ಆರಂಭಿಕ ಹಂತಗಳಲ್ಲಿ, ಪಾಕ್ ತಂಡ ಮೊದಲ 5 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿತ್ತು. ಆದರೆ ಇಮ್ರಾನ್ ಖಾನ್ ನೇತೃತ್ವದ ಪಾಕ್ ತಂಡದ ಅದೃಷ್ಟ ನೆಟ್ಟಗಿತ್ತು. ಪಂದ್ಯಾವಳಿಯಲ್ಲಿ ಪುನರಾಗಮನ ಮಾಡಿತು. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುತ್ತಿದ್ದ ಕಾರಣ ಬೇರೆ ತಂಡದ ಸೋಲು ಪಾಕ್ ತಂಡವನ್ನು ಸೆಮೀಸ್ಗೇರಿಸಿತು. ಅಲ್ಲಿ ಗೆದ್ದು ಫೈನಲ್ನಲ್ಲೂ ಇಂಗ್ಲೆಂಡ್ ತಂಡವನ್ನು ಮಣಿಸಿ ಟ್ರೋಫಿ ಗೆದ್ದರು.
ಪಾಕಿಸ್ತಾನ ವಿರುದ್ಧ 22 ರನ್ ಗಳಿಂದ ಸೋತು ಇಂಗ್ಲೆಂಡ್ ಸತತವಾಗಿ ಮೂರನೇ ಬಾರಿ ರನ್ನರ್ ಅಪ್ ಆಗಿ ತನ್ನ ಪ್ರಯಾಣವನ್ನು ಕೊನೆಗೊಳಿಸಿತು. ಇದು ವಿಶ್ವಕಪ್ ಫೈನಲ್ಗೆ ಇಂಗ್ಲಿಷ್ ಪಡೆಯ ಮೂರನೇ ಪ್ರವೇಶವಾಗಿತ್ತು ಮತ್ತು ಎಲ್ಲ ಬಾರಿಯೂ ಟ್ರೋಫಿ ಗೆಲ್ಲಲು ವಿಫಲರಾದರು. ಗ್ರಹಾಂ ಗೂಚ್ ನೇತೃತ್ವದ ತಂಡವು ಸ್ಪರ್ಧೆಯಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಐದನ್ನು ಗೆದ್ದ ನಂತರ ನಾಕೌಟ್ ಗೆ ಅರ್ಹತೆ ಪಡೆಯಿತು. ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 22 ರನ್ಗಳ ಜಯ ಸಾಧಿಸಿತ್ತು.
ಇದನ್ನೂ ಓದಿ : World Cup Recap : ಭಾರತ ಆತಿಥ್ಯದಲ್ಲಿ ನಡೆದ ಮೊದಲ ವಿಶ್ವ ಕಪ್ ಟೂರ್ನಿಯ ಕೌತುಕದ ಸಂಗತಿಗಳು ಇಲ್ಲಿವೆ
ತವರಿನ ಪರಿಸ್ಥಿತಿಯ ಲಾಭ ಪಡೆದು ಗ್ರೂಪ್ ಹಂತದಲ್ಲಿ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದ್ದ ನ್ಯೂಜಿಲೆಂಡ್, ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ನಲ್ಲಿ ಸೋತಿತು. ಕಿವೀಸ್ ತಂಡವು ಪಾಕಿಸ್ತಾನ ವಿರುದ್ಧ ನಾಲ್ಕು ವಿಕೆಟ್ ಗಳಿಂದ ಪರಾಭವಗೊಂಡಿತು. ಗುಂಪು ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಮಳೆ ನಿಯಮಕ್ಕೆ ಬಲಿಯಾಯಿತು. ಇಂಗ್ಲೆಂಡ್ ತಂಡದ ವಿರುದ್ಧದ ನಾಕೌಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 19 ರನ್ ಗಳಿಂದ ಸೋತು ಪಂದ್ಯಾವಳಿಯಿಂದ ನಿರ್ಗಮಿಸಿತು.
ಏನಿದು ಮಳೆ ನಿಯಮ ವಿವಾದ
ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸೆಮಿ ಫೈನಲ್ ಪಂದ್ಯ ಸಿಡ್ನಿಯಲ್ಲಿ ನಡೆದಿತ್ತು. ಪಂದ್ಯಕ್ಕೆ ಮೊದಲೇ ಮಳೆ ಬಂದ ಕಾರಣ ತಲಾ 45 ಓವರ್ಗಳ ಆಟಕ್ಕೆ ನಿರ್ಧರಿಸಲಾಯಿತು. ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿ 45 ಓವರ್ಗಳಲ್ಲಿ 6 ವಿಕೆಟ್ಗೆ 235 ರನ್ ಬಾರಿಸಿತು. ಚೇಸಿಂಗ್ ಆರಂಭವಾಗುತ್ತಿದ್ದಂತೆ ಮತ್ತೆ ಮಳೆ ಬಂತು. ಬಳಿಕ 42.5 ಓವರ್ಗಳಲ್ಲಿ 231 ರನ್ ಬಾರಿಸುವ ಗುರಿ ನೀಡಲಾಯಿತು. ಕೊನೆಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 13 ಎಸೆತಕ್ಕೆ 22 ರನ್ ಬೇಕಾಗಿತ್ತು. ಈ ವೇಳೆ ಮತ್ತೆ ಮಳೆ ಸುರಿಯಿತು. ಆದರೆ, ಮಳೆ ನಿಯಮ ಪ್ರಕಾರ ಓವರ್ಗಳನ್ನು ಕಡಿತಗೊಳಿಸಲಾಯಿತೇ ಹೊರತು ರನ್ಗಳನ್ನು ಮಾಡಿಲ್ಲ. ಎರಡು ಓವರ್ ಕಡಿತ ಮಾಡಿದ ಬಳಿಕ ದ. ಆಫ್ರಿಕಾ ತಂಡಕ್ಕೆ 1 ಎಸೆತದಲ್ಲಿ 22 ರನ್ ಮಾಡುವ ಗುರಿ ನೀಡಲಾಯಿತು. ಇದು ಅಸಾಧ್ಯ. ಇಂಗ್ಲೆಂಡ್ ಗೆದ್ದಿತು. ಆದರೆ, ಈ ಫಲಿತಾಂಶ ಟೂರ್ನಿಯ ಇತಿಹಾಸದಲ್ಲಿ ಕಪ್ಪುಚುಕ್ಕೆ.
ಇವರೆಲ್ಲರಿಗೂ ಕೊನೇ ವಿಶ್ವಕಪ್
ಕ್ರಿಕೆಟ್ ದಂತಕತೆಗಳಾದ ಇಮ್ರಾನ್ ಖಾನ್, ಅಲನ್ ಬಾರ್ಡರ್, ಗ್ರಹಾಂ ಗೂಚ್, ಇಯಾನ್ ಬಾಥಮ್, ಕಪಿಲ್ ದೇವ್ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಅವರಿಗೆ 1992ರ ವಿಶ್ವಕಪ್ ಕೊನೆಯ ಜಾಗತಿಕ ಟೂರ್ನಿ. ಪಂದ್ಯಾವಳಿಯ ಕೊನೆಯಲ್ಲಿ, ಲಾಭ ಪಡೆದಿದ್ದು ಪಾಕ್ ನಾಯಕ ಇಮ್ರಾನ್ ಖಾನ್. ಅವರು ಪಾಕ್ ಕ್ರಿಕೆಟ್ ಅಭಿಮಾನಿಗಳ ಮುಖದಲ್ಲಿ ನಗು ತಂದಿದ್ದರು.
ಟೂರ್ನಮೆಂಟ್ ಸ್ವರೂಪ
ವಿಶ್ವಕಪ್ನ ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿ, 1992ರ ವಿಶ್ವಕಪ್ನಲ್ಲಿ ಎಂಟು ತಂಡಗಳ ಬದಲು ಒಂಬತ್ತು ತಂಡಗಳು ಇದ್ದವು. 1990 ರ ಐಸಿಸಿ ಟ್ರೋಫಿಯ ಫೈನಲ್ನಲ್ಲಿ ನೆದರ್ಲ್ಯಾಂಡ್ಸ್ ಅನ್ನು ಸೋಲಿಸಿದ ನಂತರ ಅಸೋಸಿಯೇಟ್ ತಂಡವಾದ ಜಿಂಬಾಬ್ವೆ ಎಂಟು ನಿಯಮಿತ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸದಸ್ಯರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯಿತು.
ಇದನ್ನೂ ಓದಿ: World Cup Recap : 1975 ಉದ್ಘಾಟನಾ ಆವೃತ್ತಿಯ ವಿಶ್ವ ಕಪ್ ಹೇಗಿತ್ತು? ಟ್ರೋಫಿ ಗೆದ್ದವರು ಯಾರು? ಇಲ್ಲಿದೆ ಎಲ್ಲ ವಿವರ
ತಂಡಗಳನ್ನು ಗುಂಪುಗಳಾಗಿ ವಿಂಗಡಿಸುವ ಬದಲು ರೌಂಡ್-ರಾಬಿನ್ ಹಂತವನ್ನು ಪರಿಚಯಿಸಲಾಯಿತು. ರೌಂಡ್-ರಾಬಿನ್ ಹಂತದಲ್ಲಿ ಪ್ರತಿ ತಂಡವು ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡಿತು. ಮೊದಲ ಸುತ್ತಿನ ಅಂತ್ಯದ ನಂತರ, ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಆಡಲು ನಾಕೌಟ್ಗಳಿಗೆ ಅರ್ಹತೆ ಪಡೆದವು. ಸೆಮಿಫೈನಲ್ ವಿಜೇತರು ಎಂಸಿಜಿಯಲ್ಲಿ ಫೈನಲ್ ಪಂದ್ಯಕ್ಕೆ ಎಂಟ್ರಿ ಪಡೆದರು.
ಅಪ್ರತಿಮ ಕ್ಷಣಗಳು
ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ಸಹ-ಆತಿಥೇಯ ಮತ್ತು ನೆರೆಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪರಸ್ಪರ ಮುಖಾಮುಖಿಯಾಗುವುದರೊಂದಿಗೆ ಪಂದ್ಯಾವಳಿ ಪ್ರಾರಂಭವಾಯಿತು. ಆರಂಭಿಕ ಪಂದ್ಯದಲ್ಲಿ ಆಸೀಸ್ ತಂಡವನ್ನು 37 ರನ್ ಗಳಿಂದ ಮಣಿಸಿದ ಕಿವೀಸ್ ತಂಡ ಉತ್ತಮ ಆರಂಭ ಪಡೆಯಿತು. ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಎಂಸಿಜಿಯಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತ್ತು.
ಇದನ್ನೂ ಓದಿ: World Cup History: ರೋಚಕ ಫೈನಲ್ನಲ್ಲಿ ಗೆದ್ದು ಬೀಗಿ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿದ ವೆಸ್ಟ್ ಇಂಡೀಸ್!
ಈ ವಿಶ್ವಕಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಅತಿದೊಡ್ಡ ಪೈಪೋಟಿಗಳ ಆರಂಭಕ್ಕೆ ಸಾಕ್ಷಿಯಾಯಿತು. ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಂಸಿಜಿಯ) ನಲ್ಲಿ, ಭಾರತವು ಸಾಂಪ್ರದಾಯಿಕ ಎದುರಾಳಿ ತಂಡದ ವಿರುದ್ಧ 43 ರನ್ಗಳ ಜಯವನ್ನು ದಾಖಲಿಸಿತು ಭಾರತ. ಅಲ್ಲದೆ, ಏಕದಿನ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ತನ್ನ ಪ್ರಾಬಲ್ಯವನ್ನು ಪ್ರಾರಂಭಿಸಿತು. ಇದು ಇಂದಿಗೂ ಜೀವಂತವಾಗಿದೆ.
ಫೈನಲ್ನಲ್ಲಿ ಪಾಕಿಸ್ತಾನವು ಇಂಗ್ಲೆಂಡ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿತು ಹಾಗೂ 22 ರನ್ಗಳಿಂದ ಗೆದ್ದುಕೊಂಡಿತು. ಆರಂಭಿಕ ಆಟಗಾರರಾದ ಅಮೀರ್ ಸೊಹೈಲ್ ಮತ್ತು ರಮೀಜ್ ರಾಜಾ ಬೇಗನೆ ಪೆವಿಲಿಯನ್ ಗೆ ಮರಳಿದ್ದರಿಂದ ಮೆನ್ ಇನ್ ಗ್ರೀನ್ ಕೆಟ್ಟ ಅರಂಭ ಪಡೆಯಿತು. ತಂಡದ ನಾಯಕ ಇಮ್ರಾನ್ ಜವಾಬ್ದಾರಿ ಹೊತ್ತುಕೊಂಡು ತಂಡಕ್ಕೆ 72 ರನ್ ಕೊಡುಗೆ ನೀಡಿದರು. ಜಾವೇದ್ ಮಿಯಾಂದಾದ್ ಕೂಡ ಅರ್ಧಶತಕ ಬಾರಿಸಿದರು. ಆಗ ಯುವ ಆಟಗಾರರಾಗಿದ್ದ ಇಂಜಮಾಮ್-ಉಲ್-ಹಕ್ 35 ಎಸೆತಗಳಲ್ಲಿ 42 ರನ್ ಗಳಿಸಿ ತಂಡಕ್ಕೆ 249 ರನ್ ಗಳಿಸಲು ಸಹಾಯ ಮಾಡಿದರು.
ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ವಾಸಿಮ್ ಅಕ್ರಮ್ ಗಮನ ಸೆಳೆಯುವ ಪ್ರದರ್ಶನ ನೀಡಿದರು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರು ತಮ್ಮ ತಂಡದ ಇನ್ನಿಂಗ್ಸ್ನ ಅಂತಿಮ ಓವರ್ಗಳಲ್ಲಿ ಇಂಗ್ಲೆಂಡ್ ಬೌಲಿಂಗ್ ವಿಭಾಗವನ್ನು ಬೆದರಿಸಿದರು. ಕೇವಲ 18 ಎಸೆತಗಳಲ್ಲಿ 33 ರನ್ ಸಿಡಿಸಿ ಔಟಾದರು. ಅಲ್ಲದೆ, ಇಯಾನ್ ಬಾಥಮ್, ಅಲನ್ ಲ್ಯಾಂಬ್ ಮತ್ತು ಕ್ರಿಸ್ ಲೂಯಿಸ್ ಅವರ ಅಮೂಲ್ಯ ವಿಕೆಟ್ಗಳನ್ನು ಕಬಳಿಸುವ ಮೂಲಕ ಗೆಲುವಿನ ರೂವಾರಿ ಎನಿಸಿಕೊಂಡರು. ಅದ್ಭುತ ಆಲ್ರೌಂಡರ್ ಪ್ರದರ್ಶನಕ್ಕಾಗಿ ಅಕ್ರಮ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ಅತ್ಯುತ್ತಮ ಪ್ರದರ್ಶನಗಳು
ಪಾಕಿಸ್ತಾನದ ಚೊಚ್ಚಲ ಪ್ರಶಸ್ತಿ ಗೆಲುವಿನಲ್ಲಿ ಜಾವೇದ್ ಮಿಯಾಂದಾದ್, ರಮೀಜ್ ರಾಜಾ, ವಾಸಿಂ ಅಕ್ರಮ್ ಮತ್ತು ಮುಷ್ತಾಕ್ ಅಹ್ಮದ್ ಪ್ರಮುಖ ಕೊಡುಗೆ ನೀಡಿದರು. ಮಿಯಾಂದಾದ್ 9 ಪಂದ್ಯಗಳಲ್ಲಿ 5 ಅರ್ಧಶತಕಗಳೊಂದಿಗೆ 437 ರನ್ ಗಳಿಸಿದ್ದು, ಒಟ್ಟಾರೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ರಮೀಜ್ ರಾಜಾ 8 ಪಂದ್ಯಗಳಲ್ಲಿ 349 ರನ್ ಗಳಿಸಿದ್ದು, ಟೂರ್ನಿಯಲ್ಲಿ ಪಾಕಿಸ್ತಾನ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಇದನ್ನೂ ಓದಿ : ICC World Cup 2023 : ವಿಶ್ವ ಕಪ್ ನಡೆಯುವ 10 ಸ್ಟೇಡಿಯಮ್ಗಳ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಎಲ್ಲ ವಿವರ
ವಾಸಿಂ ಅಕ್ರಮ್ 10 ಪಂದ್ಯಗಳಲ್ಲಿ 3.76 ಎಕಾನಮಿಯಲ್ಲಿ 18 ವಿಕೆಟ್ಗಳನ್ನು ಪಡೆಯುವ ಮೂಲಕ ವೇಗಿಯಾಗಿ ತಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದರು. ಸ್ಪಿನ್ ದಾಳಿಯನ್ನು ಮುನ್ನಡೆಸಿದ ಮುಷ್ತಾಕ್ ಅಹ್ಮದ್ ಒಂಬತ್ತು ಪಂದ್ಯಗಳಲ್ಲಿ 3.98 ಎಕಾನಮಿಯಲ್ಲಿ 16 ವಿಕೆಟ್ಗಳನ್ನು ಪಡೆದರು. ಇಯಾನ್ ಬೋಥಮ್ 10 ಪಂದ್ಯಗಳಲ್ಲಿ 3.43ರ ಸರಾಸರಿಯಲ್ಲಿ 16 ವಿಕೆಟ್ ಕಬಳಿದರೂ ಅವರಿಗೆ ಟ್ರೋಫಿ ಸಿಗಲಿಲ್ಲ.
ಡೇವಿಡ್ ಬೂನ್ ಮತ್ತು ಪೀಟರ್ ನೋಯೆಲ್ ಕರ್ಸ್ಟನ್ ಈ ವಿಶ್ವ ಕಪ್ನಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿದ್ದರು. ಇಬ್ಬರೂ ದಂತಕಥೆಗಳು ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಗ್ರ ರನ್ ಸ್ಕೋರರ್ ಪಟ್ಟಿಯಲ್ಲಿ ಸ್ಥಾನ ಪಡೆದರು. ಕರ್ಸ್ಟನ್ ಎಂಟು ಪಂದ್ಯಗಳಲ್ಲಿ 66.55 ಸ್ಟ್ರೈಕ್ ರೇಟ್ನಲ್ಲಿ 410 ರನ್ ಗಳಿಸಿದರು. 1987 ರಲ್ಲಿ ಆಸ್ಟ್ರೇಲಿಯಾವನ್ನು ಮೊದಲ ಬಾರಿಗೆ ಟ್ರೋಫಿ ಗೆಲುವಿಗೆ ಮುನ್ನಡೆಸಿದ ಬೂನ್ ಮತ್ತೆ ಉತ್ತಮ ಪ್ರದರ್ಶನ ನೀಡಿದ್ದರು. ಅವರು ಎಂಟು ಪಂದ್ಯಗಳಲ್ಲಿ ಎರಡು ಶತಕಗಳೊಂದಿಗೆ 368 ರನ್ ಗಳಿಸಿದರು.
ಐತಿಹಾಸಿಕ ಸಂದರ್ಭ
ಪಾಕಿಸ್ತಾನವು 1992 ರಲ್ಲಿ ತಮ್ಮ ಮೊದಲ ವಿಶ್ವಕಪ್ ಟ್ರೋಫಿಯನ್ನು ಗೆದ್ದಿತು. ವೆಸ್ಟ್ ಇಂಡೀಸ್, ಭಾರತ ಮತ್ತು ಆಸ್ಟ್ರೇಲಿಯಾದ ನಂತರ ಪ್ರಶಸ್ತಿಯನ್ನು ಗೆದ್ದ ನಾಲ್ಕನೇ ತಂಡವಾಯಿತು. ಇಮ್ರಾನ್ ಖಾನ್ ತಮ್ಮ 39 ನೇ ವಯಸ್ಸಿನಲ್ಲಿ ತಮ್ಮ ಗಮನಾರ್ಹ ನಾಯಕತ್ವ ಸಾಧನೆಯೊಂದಿಗೆ ವಿಶ್ವಕಪ್ ಗೆದ್ದ ಅತ್ಯಂತ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇಂಗ್ಲೆಂಡ್ ಮತ್ತು ಭಾರತದ ನಂತರ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ಕ್ರಿಕೆಟ್ ವಿಶ್ವಕಪ್ ಆತಿಥ್ಯ ವಹಿಸಿದ ಮೂರನೇ ದೇಶಗಳಾಗಿವೆ. ರನ್ನರ್ ಅಪ್ ಇಂಗ್ಲೆಂಡ್ ವಿಶ್ವಕಪ್ನಲ್ಲಿ ಸತತ ಐದು ಬಾರಿ ನಾಕೌಟ್ಗೆ ಅರ್ಹತೆ ಪಡೆದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಕ್ರಿಕೆಟ್ ಮೇಲೆ ಪರಿಣಾಮ
1992 ರ ವಿಶ್ವಕಪ್ ನಂತರ, ಭಾರತೀಯ ಉಪಖಂಡದಲ್ಲಿ ಕ್ರಿಕೆಟ್ನ ಜನಪ್ರಿಯತೆ ಹೆಚ್ಚಾಯಿತು. ಪಾಕಿಸ್ತಾನದ ವಿಶ್ವಕಪ್ ಗೆಲುವು 1990 ರ ದಶಕದ ಕೊನೆಯಲ್ಲಿ ಕ್ರಿಕೆಟ್ ಅನ್ನು ತಮ್ಮ ದೇಶದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯನ್ನಾಗಿ ಮಾಡಿತು. ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕಾದ ಭಾಗವಹಿಸುವಿಕೆಯು ಕ್ರಿಕೆಟ್ ಅನ್ನು ದಕ್ಷಿಣ ಆಫ್ರಿಕಾದ ಬಿಳಿಯರಲ್ಲಿ ತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದನ್ನಾಗಿ ಮಾಡಿತು.