Site icon Vistara News

World Cup History : ಆಂಗ್ಲರ ನಾಡಲ್ಲಿ ನಡೆದ 1999ರ ವಿಶ್ವ ಕಪ್​ ಆಸ್ಟ್ರೇಲಿಯಾ ತಂಡದ ಪಾಲಾಗಿದ್ದು ಹೀಗೆ

World Cup 1999 winners

ಹತ್ತು ವರ್ಷಗಳ ಅವಧಿಯಲ್ಲಿ ಐದು ವಿಭಿನ್ನ ರಾಷ್ಟ್ರಗಳಿಗೆ ಪ್ರಯಾಣಿಸಿದ ನಂತರ ಕ್ರಿಕೆಟ್ ವಿಶ್ವಕಪ್ 1999ರಲ್ಲಿ ಏಳನೇ ಆವೃತ್ತಿಗಾಗಿ ಇಂಗ್ಲೆಂಡ್​ಗೆ ಪ್ರಯಾಣಿಸಿತ್ತು. ಇಂಗ್ಲಿಷ್ ಬೇಸಿಗೆಯಲ್ಲಿ 38 ದಿನಗಳಲ್ಲಿ ನಡೆದ 42 ಪಂದ್ಯಗಳಲ್ಲಿ ಹನ್ನೆರಡು ತಂಡಗಳು ಪಾಲ್ಗೊಂಡಿದ್ದವು. ಅದಕ್ಕಿಂತ ಹಿಂದಿನ ವಿಶ್ವ ಕಪ್ ರೀತಿಯಲ್ಲೇ ಈ ವಿಶ್ವ ಕಪ್​ ಕೂಡ ಹಲವಾರು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು.

ಈ ವಿಶ್ವ ಕಪ್​ನಲ್ಲಿ ಮೊದಲ ಬಾರಿಗೆ ರೋಲಿಂಗ್ ಟ್ರೋಫಿಯನ್ನು ಪರಿಚಯಿಸಲಾಯಿತು. (ಚಾಂಪಿಯನ್ ಆದ ತಂಡ ಮುಂದಿನ ವಿಶ್ವ ಕಪ್​ ತನಕ ಟ್ರೋಫಿಯನ್ನು ತನ್ನಲ್ಲಿ ಇಟ್ಟುಕೊಂಡು ಬಳಿಕ ವಾಪಸ್​ ಕೊಡುವುದು. ಆದರೆ, ಟ್ರೋಫಿಯಲ್ಲಿ ಗೆದ್ದ ತಂಡದ ಹೆಸರು ಅಚ್ಚಾಗಿರುತ್ತದೆ.) ಈ ವಿಶ್ವ ಕಪ್​ಗೆ ಡ್ಯೂಕ್ ಎಂದು ಕರೆಯಲ್ಪಡುವ ಹೊಸ ರೀತಿಯ ಚೆಂಡನ್ನು ಬಳಸಲಾಯಿತು. ಹಿಂದಿನ ಆವೃತ್ತಿಗಳಲ್ಲಿ ಬಳಸಿದ ಚೆಂಡುಗಳಂತೆಯೇ ಡ್ಯೂಕ್​ ಚೆಂಡುಗಳು ಇವೆ ಎಂದು ಆಯೋಜಕರು ಸಮರ್ಥಿಸಿಕೊಂಡಿದ್ದರು. ಆದರೆ, ಈ ಚೆಂಡಿಗೆ ಚಲನೆ ಜಾಸ್ತಿ ಹಾಗೂ ಬೌಲರ್​ಗಳ ಪ್ರಯೋಗಕ್ಕೆ ಅಡಚಣೆ ಉಂಟು ಮಾಡಿದವು ಎಂದು ಹೇಳಲಾಗಿದೆ.

ಯಾವ ಮಾದರಿಯಲ್ಲಿ ನಡೆಯಿತು?

ಪಂದ್ಯಾವಳಿಯು 1996 ರ ಆವೃತ್ತಿಯಂತೆಯೇ 12 ತಂಡಗಳನ್ನು ಒಳಗೊಂಡಿತ್ತು, ಆತಿಥೇಯ ಇಂಗ್ಲೆಂಡ್ ಮತ್ತು ಇತರ ಎಂಟು ಟೆಸ್ಟ್ ರಾಷ್ಟ್ರಗಳು ಮೆಗಾ ಈವೆಂಟ್​​ಗೆ ನೇರ ಪ್ರವೇಶ ಪಡೆದವು. ಆದರೆ 1997 ರ ಐಸಿಸಿ ಟ್ರೋಫಿಯಲ್ಲಿ ಉಳಿದ ಮೂರು ಸ್ಥಾನಗಳಿಗಾಗಿ 22 ರಾಷ್ಟ್ರಗಳು ಸ್ಪರ್ಧಿಸಿದ್ದವು. ಅದರಲ್ಲಿ ಬಾಂಗ್ಲಾದೇಶ ಮತ್ತು ಕೀನ್ಯಾ ಚಾಂಪಿಯನ್​​ ಹಾಗೂ ರನ್ನರ್ ಅಪ್ ಆಗುವ ಮೂಲಕ ವಿಶ್ವ ಕಪ್​ಗೆ ಅರ್ಹತೆ ಪಡೆದುಕೊಂಡವು. ಸ್ಕಾಟ್ಲೆಂಡ್ ಮೂರನೇ ಸ್ಥಾನದ ಪ್ಲೇಆಫ್ ಗೆಲ್ಲುವ ಮೂಲಕ ಸ್ಥಾನ ಪಡೆದುಕೊಂಡಿತ್ತು.

ಇದನ್ನೂ ಓದಿ : World Cup History : ಎರಡು ಪಂದ್ಯಗಳ ವಾಕ್​ ಓವರ್ ಪಡೆದು ವಿಶ್ವ ಕಪ್​ ಗೆದ್ದ ಶ್ರೀಲಂಕಾ!

ಇಂಗ್ಲೆಂಡ್ ಜೊತೆಗೆ ಸ್ಕಾಟ್ಲೆಂಡ್, ಐರ್ಲೆಂಡ್, ವೇಲ್ಸ್ ಮತ್ತು ನೆದರ್ಲ್ಯಾಂಡ್ಸ್ ಕೂಡ ಪಂದ್ಯಾವಳಿಯನ್ನು ಆಯೋಜಿಸಿದ್ದರಿಂದ ಒಟ್ಟು ಹದಿನೇಳು ತಾಣಗಳನ್ನು ಪಂದ್ಯಗಳನ್ನು ಆಡಿಸಲು ಬಳಸಲಾಯಿತು. ವಿಶ್ವ ಕಪ್ ಅನ್ನು ನಾಲ್ಕು ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತದೆ. ಆದರೆ ಈ ವಿಶ್ವ ಕಪ್​ ಅನ್ನು ಮೂರು ವರ್ಷದ ಬಳಿಕ ನಡೆಸಲಾಯಿತು ಎಂಬುದು ಕೂಡ ವಿಶೇಷ.

1999 ರ ವಿಶ್ವಕಪ್​ನಲ್ಲಿ ‘ಸೂಪರ್ ಸಿಕ್ಸ್’ ಎಂಬ ಹೊಸ ಸ್ವರೂಪವನ್ನು ಚಾಲ್ತಿಗೆ ತರಲಾಯಿತು. 12 ತಂಡಗಳನ್ನು ಮೊದಲು ತಲಾ ಆರು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಯಿತು, ಎರಡೂ ಗುಂಪುಗಳಿಂದ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆದವು. ಸೂಪರ್ ಸಿಕ್ಸ್ ಗೆ ಅರ್ಹತೆ ಪಡೆದ ತಂಡಗಳು ಇನ್ನೊಂದು ಗುಂಪಿನ ತಂಡಗಳ ವಿರುದ್ಧ ಆಡಿದವು. ಬಳಿಕ ತಮ್ಮದೇ ಗುಂಪಿನಿಂದ ಆಯ್ಕೆಯಾದ ತಂಡಗಳ ವಿರುದ್ಧ ಆಡಿದವು.

ಭಾರತ ವಿರುದ್ಧ ಜಿಂಬಾಬ್ವೆಗೆ ರೋಚಕ ಗೆಲುವು

ಆತಿಥೇಯ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಪಂದ್ಯದೊಂದಿಗೆ ವಿಶ್ವ ಕಪ್​ ಪ್ರಾರಂಭವಾಯಿತು. ಅಲ್ಲಿ ಇಂಗ್ಲೆಂಡ್ ಎಂಟು ವಿಕೆಟ್ ಗಳಿಂದ ಜಯಗಳಿಸಿತು. ಆದರೆ, ಲೀಸೆಸ್ಟರ್​ನಲ್ಲಿ ನಡೆದ ಗ್ರೂಪ್ ಹಂತದಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯ ಅತ್ಯಂತ ರೋಮಾಂಚಕವಾಗಿ ನಡೆಯಿತು. ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು. ಕೊನೆಯ ಓವರ್​ನಲ್ಲಿ ಭಾರತಕ್ಕೆ ಗೆಲ್ಲಲು 7 ರನ್​ಗಳ ಅವಶ್ಯಕತೆಯಿತ್ತು. ರಾಬಿನ್ ಸಿಂಗ್ (47 ಎಸೆತಗಳಲ್ಲಿ 35 ರನ್), ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಅವರನ್ನು ಹೆನ್ರಿ ಒಲಾಂಗ ಔಟ್ ಮಾಡುವ ಮೂಲಕ ಜಿಂಬಾಬ್ವೆಗೆ ಮೂರು ರನ್​ಗಳ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಭಾರತ ಆರಂಭದಲ್ಲೇ ಆಘಾತ ಎದುರಿಸಿತ್ತು.

ತಂದೆಗೆ ಶತಕವನ್ನು ಅರ್ಪಿಸಿದ ಸಚಿನ್ ತೆಂಡೂಲ್ಕರ್

ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ತಮ್ಮ ತಂದೆ ರಮೇಶ್​ ತೆಂಡೂಲ್ಕರ್ ಅವರು ವಿಶ್ವ ಕಪ್ ನಡೆಯುತ್ತಿದ್ದ ನಡುವೆ ಮೃತಪಟ್ಟಿದ್ದರು. ಸಚಿನ್ ಅವರ ಟೂರ್ನಿಯ ಮಧ್ಯದಿಂದಲೇ ಭಾರತಕ್ಕೆ ವಾಪಸಾಗಿದ್ದರು. ತಮ್ಮ ಕರ್ತವ್ಯಗಳನ್ನು ಮುಗಿಸಿದ ಅವರು ಮತ್ತೆ ವಿಶ್ವ ಕಪ್​ ಆಡಲು ತೆರಳಿದ್ದರು. ಆ ಬಳಿಕ ಕೀನ್ಯಾ ವಿರುದ್ಧ ಅಜೇ 140* (101)ಎಸೆತ ರನ್ ಗಳಿಸಿದರು. ಈ ಶತಕವನ್ನು ಅವರು ತಮ್ಮ ದಿವಂಗತ ತಂದೆಗೆ ಸಲ್ಲಿಸಿದ್ದು ದೊಡ್ಡ ಸುದ್ದಿಯಾಯಿತು. ಸಚಿನ್ ತೆಂಡೂಲ್ಕರ್ ಅವರ ಶತಕದ ನೆರವಿನಿಂದ ಭಾರತ 2 ವಿಕೆಟ್ ನಷ್ಟಕ್ಕೆ 329 ರನ್ ಗಳಿಸಿತ್ತಲ್ಲದೆ, 94 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

ಇದನ್ನೂ ಓದಿ : World Cup History: ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ್ದೇ ಪಾರುಪತ್ಯ; ಸರ್ವಾಧಿಕ 5 ಬಾರಿ ಚಾಂಪಿಯನ್​

ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಸತತ ಪಂದ್ಯಗಳನ್ನು ಸೋತಿದ್ದರಿಂದ ಆಸ್ಟ್ರೇಲಿಯಾವು ಪಂದ್ಯಾವಳಿಯಲ್ಲಿ ಉತ್ತಮ ಆರಂಭವನ್ನು ಪಡೆಯಲಿಲ್ಲ. ಇದು ಆ ತಂಡವನ್ನು ಅನಿಶ್ಚಿತ ಪರಿಸ್ಥಿತಿಗೆ ತಳ್ಳಿತ್ತು. ಪಂದ್ಯಾವಳಿಯಲ್ಲಿ ಜೀವಂತವಾಗಿರಲು ಸ್ಟೀವ್ ವಾ ನೇತೃತ್ವದ ತಂಡವು ಅಲ್ಲಿಂದ ಪುಟಿದೆದ್ದಿತ್ತು.

ಲಂಕಾ ವಿರುದ್ದ ದಾಖಲೆ ಬರೆದ ಗಂಗೂಲಿ- ದ್ರಾವಿಡ್​

ಸೌರವ್ ಗಂಗೂಲಿ (158 ಎಸೆತಗಳಲ್ಲಿ 183 ರನ್) ಮತ್ತು ರಾಹುಲ್ ದ್ರಾವಿಡ್ (129 ಎಸೆತಗಳಲ್ಲಿ 145 ರನ್) ಏಕದಿನ ಕ್ರಿಕೆಟ್​​ನಲ್ಲಿ ಅಂದಿನ ಅತ್ಯಧಿಕ ಜೊತೆಯಾಟದ ದಾಖಲೆಯನ್ನು ಮುರಿದದ್ದು ಇದೇ ವಿಶ್ವ ಕಪ್​ನಲ್ಲಿ. ಅದು ಮಾಜಿ ಚಾಂಪಿಯನ್​ ಶ್ರೀಲಂಕಾ ತಂಡದ ವಿರುದ್ಧ. ಈ ಜೋಡಿ ಎರಡನೇ ವಿಕೆಟ್​ಗೆ 269 ಎಸೆತಗಳಲ್ಲಿ 318 ರನ್​ಗಳನ್ನು ಸೇರಿಸಿತ್ತು. ಇದರ ನೆರವಿನಿಂದ ಭಾರತವು ಏಕದಿನ ಕ್ರಿಕೆಟ್​ನಲ್ಲಿ 373/6 ಸ್ಕೋರ್ ಗಳಿಸಿತ್ತು. ಇದರ ಪರಿಣಾಮವಾಗಿ ಭಾರತ ಪಂದ್ಯವನ್ನು 157 ರನ್​ಗಳ ಭಾರೀ ಅಂತರದಿಂದ ಗೆಲುವು ಸಾಧಿಸಿತು. ಹಾಲಿ ಚಾಂಪಿಯನ್ ಶ್ರೀಲಂಕಾ ಪಂದ್ಯಾವಳಿಯಿಂದ ಹೊರಬಿದ್ದಿತು.

ಇದಾದ ಬಳಿಕ ಆತಿಥೇಯ ಇಂಗ್ಲೆಂಡ್ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಭಾರತದ ವಿರುದ್ಧ 62 ರನ್​​ಗಳಿಂದ ಸೋತಿದ್ದರಿಂದ ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾಯಿತು. ಪಂದ್ಯಾವಳಿಯ ಮತ್ತೊಂದು ಅಚ್ಚರಿಯ ಫಲಿತಾಂಶ ಎರಡನೇ ಗುಂಪಿನ ಕೊನೆಯ ಪಂದ್ಯದಲ್ಲಿ ಪ್ರಕಟವಾಯಿತು. ಅಲ್ಲಿ ಮೊದಲ ಬಾರಿಗೆ ಬಾಂಗ್ಲಾದೇಶವು ಪಾಕಿಸ್ತಾನವನ್ನು 62 ರನ್​ಗಳಿಂದ ಸೋಲಿಸಿತು.

ಸೂಪರ್ ಸಿಕ್ಸ್ ನ ಎರಡನೇ ಪಂದ್ಯವೂ ಅತ್ಯಂತ ರೋಚಕವಾಗಿ ನಡೆಯಿತು. ಪಾಕಿಸ್ತಾನ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ಕೊನೇ ಓವರ್​ನಲ್ಲಿ ಗೆಲುವು ಕಂಡಿತು. ಲ್ಯಾನ್ಸ್ ಕ್ಲೂಸ್ನರ್ 46* (41) ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ 221 ರನ್ ಗಳ ಗುರಿಯನ್ನು ಬೆನ್ನಟ್ಟಲು ಸಹಾಯ ಮಾಡಿದರು.

ಸಕ್ಲೈನ್ ಮುಷ್ತಾಕ್ ಹ್ಯಾಟ್ರಿಕ್ ದಾಖಲೆ

ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಸೂಪರ್ ಸಿಕ್ಸ್ ನ ಏಳನೇ ಪಂದ್ಯದಲ್ಲಿ, ಪಾಕ್​ ಆಫ್ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ವಿಶ್ವಕಪ್ ನಲ್ಲಿ ಎರಡನೇ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡರು. ವಾಸಿಂ ಅಕ್ರಮ್ ನಂತರ ಎರಡು ಏಕದಿನ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕ್ರಿಕೆಟ್​​ನ ದೊಡ್ಡ ವೇದಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಸತತ ಮೂರನೇ ಬಾರಿಗೆ ಮುಖಿಯಾಗುವುದರೊಂದಿಗೆ ಮತ್ತೊಂದು ಕೌತುಕದ ಪಂದ್ಯಕ್ಕೆ ಸಾಕ್ಷಿಯಾಯಿತು. ವಿಶೇಷವೆಂದರೆ, ಆ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಕಾರ್ಗಿಲ್ ಯುದ್ಧ ನಡೆಯುತ್ತಿತ್ತು. ಎರಡು ದೇಶಗಳ ನಡುವೆ ಯುದ್ಧ ನಡೆಯುತ್ತಿರುವಾಗಲೇ ಆ ದೇಶದ ಎರಡು ತಂಡಗಳು ಪರಸ್ಪರ ಕ್ರೀಡೆಯಲ್ಲಿ ಪಾಲ್ಗೊಂಡಿದ್ದು ಕೂಡ ಕ್ರೀಡಾ ಕ್ಷೇತ್ರದ ಏಕೈಕ ಉದಾಹರಣೆ. ವೆಂಕಟೇಶ್ ಪ್ರಸಾದ್ 27 ರನ್​ಗಳಿಗೆ 5 ವಿಕೆಟ್​ ನೆರವಿನಿಂದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ವಿರುದ್ಧ 47 ರನ್ ವಿಜಯ ಸಾಧಿಸಿತ್ತು.

ಕ್ಯಾಚ್​ ಬಿಟ್ಟು ಮ್ಯಾಚ್ ಬಿಟ್ಟ ಗಿಬ್ಸ್​

ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಒಂಬತ್ತನೇ ಸೂಪರ್ ಸಿಕ್ಸ್ ಪಂದ್ಯ ಅತಿದೊಡ್ಡ ಕ್ಷಣಕ್ಕೆ ಸಾಕ್ಷಿಯಾಯಿತು. ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 271 ರನ್ ಬಾರಿಸಿತ್ತು. ಹರ್ಷೆಲ್​ ಗಿಲ್ಸ್​ 131 ಎಸೆತಕ್ಕೆ 101 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾಗಿದ್ದರು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 11.3 ಓವರ್ ಗಳಲ್ಲಿ 48 ರನ್​​ಗಳಿಗೆ 3 ವಿಕೆಟ್​ ಕಳೆದುಕೊಂಡಿತ್ತು. ನಾಯಕ ಸ್ಟೀವ್ ವಾ ಕ್ರೀಸ್​ನಲ್ಲಿದ್ದರು. ತಿರುವು ಏನೆಂದರೆ ಮಾರ್ಕ್ ವಾ ಅವರ ಅತ್ಯಂತ ಸುಲಭ ಕ್ಯಾಚನ್ನು ಹರ್ಷೆಲ್ಸ್​ ಗಿಬ್ಸ್​ ಕೈ ಚೆಲ್ಲಿದ್ದರು. ಇವು ವಿಶ್ವ ಕಪ್ ಇತಿಹಾದ ಅತ್ಯಂತ ದುಬಾರಿ ಕ್ಯಾಚ್ ಡ್ರಾಪ್ ಎನಿಸಿತು.

ಇದನ್ನೂ ಓದಿ : World cup history : ದುರ್ಬಲ ಪಾಕಿಸ್ತಾನ ಚಾಂಪಿಯನ್ ಆಗಿದ್ದು ಹೇಗೆ? 1992ರ ವಿಶ್ವ ಕಪ್​ ಸ್ಟೋರಿ ಇಲ್ಲಿದೆ

ಜೀವದಾನದ ಅವಕಾಶ ಬಳಸಿಕೊಂಡ ಮಾರ್ಕ್ ವಾ ಶತಕ ಬಾರಿಸಿದರು. 110 ಎಸೆತಗಳಲ್ಲಿ 120 ರನ್ ಬಾರಿಸಿದ ಅವರ ಆ ಇನಿಂಗ್ಸ್ ವಿಶ್ವ ಕಪ್​ ಕ್ರಿಕೆಟ್​ನ ಶ್ರೇಷ್ಠ ಇನಿಂಗ್ಸ್​ ಎನಿಸಿಕೊಂಡಿತು. ಪಂದ್ಯದ ಬಳಿಕ ಮಾರ್ಕ್​ ವಾ ಅವರು ಹರ್ಷೆಲ್​ ಗಿಬ್ಸ್ ಅವರ ಕ್ಯಾಚ್ ಕುರಿತು ಪ್ರತಿಕ್ರಿಯಿಸಿ, ಗಿಬ್ಸ್​​ ನೀವು ನಿಮ್ಮ ತಂಡದ ಆಟವನ್ನೇ ಕೈ ಬಿಟ್ಟಿದ್ದೀರಿ ಎಂದು ಹೇಳಿದ್ದರು. ಅದು ಮುಂದಕ್ಕೆ ಗೆಳೆಯ ನೀವು ವಿಶ್ವಕಪ್ ಅನ್ನೇ ಕೈ ಚೆಲ್ಲಿದಿ ಎಂದು ಜನಪ್ರಿಯಗೊಂಡಿತು.

ಪಂದ್ಯಾವಳಿಯ ಸೆಮಿಫೈನಲ್​ನಲ್ಲಿ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾದವು . 214 ರನ್​ಗಳ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ 45.5 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆದಾಗ್ಯೂ, ಲ್ಯಾನ್ಸ್ ಕ್ಲೂಸ್ನರ್ 31* (16 ಎಸೆತ) ತಂಡವನ್ನು ಗೆಲುವ ದಡಕ್ಕೆ ತಂದಿಟ್ಟರು. ಕೊನೇ ನಾಲ್ಕು ಎಸೆತಗಳಲ್ಲಿ ಒಂದು ರನ್​ ಬೇಕಾಗಿತ್ತು ಹಾಗೂ ಒಂದು ವಿಕೆಟ್​ ಉಳಿದುಕೊಂಡಿತ್ತು.

ಮತ್ತೆ ಚೋಕರ್ಸ್​ ಎನಿಸಿತು ದಕ್ಷಿಣ ಆಫ್ರಿಕಾ

ಆದಾಗ್ಯೂ, ಅಲನ್ ಡೊನಾಲ್ಡ್ ಗೆ ನೀಡಿದ ತಪ್ಪು ಸಂದೇಶದಿಂದಾಗಿ ಆಟ ಟೈ ಆಯಿತು. ಆಸ್ಟ್ರೇಲಿಯಾ ಸೂಪರ್ ಸಿಕ್ಸ್​ ಹಂತದಲ್ಲಿ ದಕ್ಷಿಣ ಆಫ್ರಿಕಾಗಿಂತ ಹೆಚ್ಚಿನ ಸ್ಥಾನ ಪಡೆದಿದ್ದ ಕಾರಣ ಫೈನಲ್​ಗೆ ಮುನ್ನಡೆಯಿತು. ಪರಿಣಾಮವಾಗಿ, ನಾಕೌಟ್ ಪಂದ್ಯವನ್ನು ಗೆಲ್ಲಲು ಮತ್ತೊಮ್ಮೆ ವಿಫಲವಾದ ದಕ್ಷಿಣ ಆಫ್ರಿಕಾದ ಚೋಕರ್ಸ್ ಪಟ್ಟ ಮುಂದುವರಿಯಿತು.

ವಿಶ್ವ ಕಪ್ ಇತಿಹಾಸ ಮತ್ತು ಇನ್ನಿತರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನ್ಯೂಜಿಲ್ಯಾಂಡ್ ವಿರುದ್ಧ ಮತ್ತೊಂದು ಸೆಮಿಫೈನಲ್ ಗೆದ್ದ ಪಾಕಿಸ್ತಾನ ಫೈನಲ್​ಗೇರಿತು. ಪ್ರಶ್ತಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ಕೇವಲ 132 ರನ್​ಗಳಿಗೆ ಆಲ್​ಔಟ್​ ಆಯಿತು. ಶೇನ್ ವಾರ್ನ್ 9 ಓವರ್​ಗಳಲ್ಲಿ 33 ರನ್ ನೀಡಿ 4 ವಿಕೆಟ್ ಪಡೆದರು. ಉತ್ತರವಾಗಿ ಆಸ್ಟ್ರೇಲಿಯಾ ಕೇವಲ 20.1 ಓವರ್​ಗಳಲ್ಲಿ ಗುರಿ ತಲುಪಿತು. ಪರಿಣಾಮವಾಗಿ, ಆಸ್ಟ್ರೇಲಿಯಾವು ಪಂದ್ಯವನ್ನು ಎಂಟು ವಿಕೆಟ್ ಗಳಿಂದ ಗೆದ್ದು ಎರಡನೇ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು.

ಈ ಗೆಲುವು ಕಾಂಗರೂಗಳ ಪ್ರಾಬಲ್ಯದ ಯುಗಕ್ಕೆ ನಾಂದಿ ಹಾಡಿತು. 2007 ರ ತನಕ ಹ್ಯಾಟ್ರಿಕ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಟೂರ್ನಿಯಲ್ಲಿ 281 ರನ್ ಹಾಗೂ 17 ವಿಕೆಟ್ ಕಬಳಿಸಿದ ಲ್ಯಾನ್ಸ್ ಕ್ಲೂಸ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Exit mobile version