ಕೇಪ್ಟೌನ್: ಮಹಿಳೆಯರ ಟಿ20 ವಿಶ್ವ ಕಪ್ನ (ICC Women’s T20 World Cup) ತನ್ನ ಎರಡನೇ ಪಂದ್ಯದಲ್ಲೂ ಭಾರತ ತಂಡ ಸುಲಭ ಜಯ ದಾಖಲಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಏಳು ವಿಕೆಟ್ಗಳ ಗೆಲುವು ಪಡೆಯುವ ಮೂಲಕ ಗುಂಪು 2ರಲ್ಲಿ ಅಗ್ರ ಸ್ಥಾನ ತನ್ನದಾಗಿಸಿಕೊಂಡಿದೆ. ಮತ್ತೊಂದು ಬಾರಿ ಮಿಂಚಿನ ಆಟ ಪ್ರದರ್ಶಿಸಿದ ವಿಕೆಟ್ ಕೀಪರ್ ರಿಚಾ ಘೋಷ್ (44 ರನ್, 32 ಎಸೆತ) ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.
ಇಲ್ಲಿ ನ್ಯೂಲ್ಯಾಂಡ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ವನಿತೆಯರು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 118 ರನ್ ಬಾರಿಸಿದರು. ಗುರಿ ಬೆನ್ನಟ್ಟಿ ಭಾರತ ತಂಡ 18.1 ಓವರ್ಗಳಲ್ಲಿ4 ವಿಕೆಟ್ ಕಳೆದುಕೊಂಡು119 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.
ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಶಫಾಲಿ ವರ್ಮಾ (28) ಸ್ವಲ್ಪ ಹೊತ್ತು ಕ್ರೀಸ್ನಲ್ಲಿದ್ದು ವಾಪಸಾದರೆ, ಸ್ಮೃತಿ ಮಂಧಾನ (10) ಅದಕ್ಕಿಂತ ಮೊದಲೇ ಪೆವಿಲಿಯನ್ ಸೇರಿಕೊಂಡರು. ಪಾಕಿಸ್ತಾನ ವಿರುದ್ಧದ ಪಂದ್ಯದ ಹೀರೊ ಜೆಮಿಮಾ ರೋಡ್ರಿಗಸ್ ಕೇವಲ ಒಂದು ರನ್ಗೆ ಔಟಾದರು. ಹೀಗಾಗಿ 43 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಬಿತ್ತು. ಈ ವೇಳೆ ಜತೆಯಾದ ನಾಯಕಿ ಹರ್ಮನ್ಪ್ರೀತ್ ಕೌರ್ (33 ರನ್) ಹಾಗೂ ರಿಚಾ 72 ರನ್ಗಳ ಜತೆಯಾಟ ನೀಡಿದರು. ಆದರೆ, ಕೊನೇ ಹಂತದಲ್ಲಿ ನಾಯಕ ಹರ್ಮನ್ಪ್ರೀತ್ ಔಟಾದರು.
ಇದನ್ನೂ ಓದಿ : Women’s T20 World Cup : ಜೆಮಿಮಾ ರೋಡ್ರಿಗಸ್ಗೆ ವಿರಾಟ್ ಕೊಹ್ಲಿಯೇ ಸ್ಫೂರ್ತಿ
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ಸ್ಟೆಫಾನಿ ಟೇಲರ್ (42) ಹಾಗೂ ಶೆಮೈನ್ ಕ್ಯಾಂಪ್ಬೆಲ್ (30) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಕೊನೇ ಹಂತದಲ್ಲಿ ಭಾರತದ ಬೌಲರ್ಗಳು ಭರ್ಜರಿ ಬೌಲಿಂಗ್ ನಡೆಸಿ ಎದುರಾಳಿ ತಂಡದ ಆಟಗಾರ್ತಿಯರು ಹೆಚ್ಚು ರನ್ ಗಳಿಸಿದಂತೆ ನೋಡಿಕೊಂಡರು. ಭಾರತ ಪರ ದೀಪ್ತಿ ಶರ್ಮ 15 ರನ್ಗಳಿಗೆ 3 ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ ಮಹಿಳೆಯರು : 20 ಓವರ್ಗಳಲ್ಲಿ 6 ವಿಕೆಟ್ಗೆ 118 (ಸ್ಟಫಾನಿ ಟೇಲರ್ 42, ಶೆಮೈನ್ ಕ್ಯಾಂಪ್ಬೆಲ್ 30; ದೀಪ್ತಿ ಶರ್ಮಾ 15ಕ್ಕೆ3).
ಭಾರತ ಮಹಿಳೆಯರು : 18.1 ಓವರ್ಗಳಲ್ಲಿ 4 ವಿಕೆಟ್ಗೆ 119 ( ಹರ್ಮನ್ಪ್ರೀತ್ ಕೌರ್ 33, ರಿಚಾ ಘೋಷ್ 44, ಶಫಾಲಿ ವರ್ಮಾ 28; ಕರಿಷ್ಮಾ ರಾಮ್ರಾಕ್ 14 ರನ್ಗಳಿಗೆ 2 ವಿಕೆಟ್).