ಹೊಸದಿಲ್ಲಿ : ಮುಂಬರುವ ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಿಸಿಸಿಐ ಜಾರಿಗೆ ತಂದಿದೆ. ಅಂದರೆ ಪರಿಸ್ಥಿತಿಗೆ ಪೂರಕವಾಗಿ ಪಂದ್ಯದ ನಡುವೆ ಆಟಗಾರನನ್ನು ಬದಲಾಯಿಸುವ ನಿಯಮ ಅದಾಗಿದೆ. ಆದರೆ, ಈ ನಿಯಮಕ್ಕೆ ಮಾಜಿ ಕ್ರಿಕೆಟಿಗರು ಸಹಮತ ವ್ಯಕ್ತಪಡಿಸುತ್ತಿಲ್ಲ. ಇಂಥ ನಿಯಮಗಳಿಂದ ಸಮಸ್ಯೆ ಹೆಚ್ಚು ಎಂಬುದಾಗಿ ಅವರೆಲ್ಲರೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಕೂಡ ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಯಮದಿಂದಾಗಿ ಆಲ್ರೌಂಡರ್ಗಳ ಮೌಲ್ಯ ಕಡಿಮೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಂಡಗಳೆರಡು ಸ್ಪೆಷಲಿಸ್ಟ್ ಬ್ಯಾಟರ್ಗಳು ಅಥವಾ ಬೌಲರ್ಗಳನ್ನು ಅಗತ್ಯಕ್ಕೆ ತಕ್ಕ ಹಾಗೆ ಬಳಸಿಕೊಳ್ಳುವ ನಿಯಮ ಜಾರಿಗೆ ಅವಕಾಶ ಇದ್ದಾಗ ಮೊದಲು ಬ್ಯಾಟ್ ಮಾಡಿದ ತಂಡ ದೊಡ್ಡ ಮೊತ್ತ ಪೇರಿಸಿದರೆ ಚೇಸ್ ಮಾಡಲಿರುವ ತಂಡ ಬ್ಯಾಟಿಂಗ್ ಮಾಡುವ ವೇಳೆ ಸ್ಪೆಷಲಿಸ್ಟ್ ಬ್ಯಾಟರ್ ಆಡಿರುವ ಸಾಧ್ಯತೆಗಳಿವೆ ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಆಲ್ರೌಂಡರ್ಗಳಿಗೆ ಮಹತ್ವವೇ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ತಂಡವೊಂದನ್ನು ಸಂಯೋಜಿಸುವ ವೇಳೆ ಆಲ್ರೌಂಡರ್ಗಳನ್ನು ಆಯ್ಕೆ ಮಾಡುವ ಅಗತ್ಯವೇ ಇರುವುದಿಲ್ಲ. ತಂಡ ಪೂರ್ತಿ ಬ್ಯಾಟರ್ಗಳು ಮತ್ತು ಬೌಲರ್ಗಳು ಇದ್ದರೆ ಸಾಕು. ಇಂಥ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪ ಪ್ರದರ್ಶನ ನೀಡುವ ಆಟಗಾರರಿಗೆ ಬೆಲೆಯೇ ಇರುವುದಿಲ್ಲ. ಒಂದೆರಡು ಓವರ್ಗಳನ್ನು ಮಾಡಿ ಏಳು ಅಥವಾ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವವರ ಅಗತ್ಯವೇ ಇರುವುದಿಲ್ಲ ಎಂದು ಪಾಂಟಿಂಗ್ ಹೇಳಿದ್ದಾರೆ.
ಹರಾಜಿಗೆ ಮೊದಲೇ ನಿಯಮ ಘೋಷಣೆಯಾಗಬೇಕಿತ್ತು
ಐಪಿಎಲ್ ಹರಾಜು ನಡೆಯುವ ಮೊದಲೇ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಜಾರಿಗೆ ತರಬೇಕಾಗಿತ್ತು. ಹಾಗಿದ್ದರೆ ಇನ್ನೂ ಸ್ವಲ್ಪ ವಿಭಿನ್ನ ರೀತಿಯಲ್ಲಿ ಆಟಗಾರರ ಖರೀದಿ ಪ್ರಕ್ರಿಯೆ ನಡೆಸಬಹುದಾಗಿತ್ತು ಎಂಬುದಾಗಿ ಪಾಂಟಿಂಗ್ ಹೇಳಿದ್ದಾರೆ.
ಇದನ್ನೂ ಓದಿ : IPL 2023 : ಐಪಿಎಲ್ ಫ್ರಾಂಚೈಸಿಗಳಿಗೆ ಗಾಯದ ಗೋಳು ; ಇದುವರೆಗೆ 10 ಆಟಗಾರರು ಔಟ್!
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪ್ರಕಾರ ಐದು ಬದಲಿ ಆಟಗಾರರಲ್ಲಿ ಒಬ್ಬರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಬಹುದು. ಹೀಗಾಗಿ ಮುಂದಿನ ಆವೃತ್ತಿಯ ಐಪಿಎಲ್ನಲ್ಲಿ 11 ಆಟಗಾರರು ಹಾಗೂ 5 ಬದಲಿ ಆಟಗಾರರು ಸೇರಿದಂತೆ ಒಟ್ಟು 16 ಆಟಗಾರನ್ನು ಆಯ್ಕೆ ಮಾಡಲು ಅವಕಾಶವಿದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪ್ರಕಾರ ಇನಿಂಗ್ಸ್ ಆರಂಭವಾಗುವ ಮೊದಲು ಅಥವಾ ಒಂದು ಇನಿಂಗ್ಸ್ ಮುಕ್ತಾಯಗೊಂಡ ಬಳಿಕ ಹೊಸ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಓವರ್ ಮುಗಿದ ಬಳಿಕ ಮತ್ತು ವಿಕೆಟ್ ಬಿದ್ದಾಗಲೂ ಆಟಗಾರರನ್ನು ಬದಲಾಯಿಸಬಹುದು.
ಈ ನಿಯಮ ಕೂಡ ಸ್ವಲ್ಪ ಮಟ್ಟಿಗೆ ಗೊಂದಲಕಾರಿ ಎಂಬುದಾಗಿ ರಿಕಿ ಪಾಂಟಿಂಗ್ ಹೇಳಿದ್ದಾರೆ. ಇದು ಸ್ವಲ್ಪ ಗೊಂದಲಕಾರಿಯಾಗಿದೆ. ಅದರ ಪರಿಪೂರ್ಣತೆಗಾಗಿ ಕೆಲಸ ಮಾಡಬೇಕಾಗಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.