Site icon Vistara News

IPL 2023 : ರಿಕಿ ಪಾಂಟಿಂಗ್ ಕೋಚಿಂಗ್ ಹುದ್ದೆಗೆ ಕುತ್ತು ತಂದಿದೆ ಡೆಲ್ಲಿ ಕ್ಯಾಪಿಟಲ್ಸ್​ ಪ್ರದರ್ಶನ

Ricky Ponting's coaching position has been stung by Delhi Capitals' performance

#image_title

ಬೆಂಗಳೂರು : ಇಂಡಿಯನ್ ಪ್ರೀಮಿಯರ್‌ ಲೀಗ್‌ನ 16ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ. ಅಂಕಪಟ್ಟಿಯಲ್ಲಿ ಖಾತೆ ತೆರೆಯದೇ ಉಳಿದ ಏಕಮಾತ್ರ ತಂಡ ಡೆಲ್ಲಿ. ಡೇವಿಡ್‌ ವಾರ್ನರ್‌ ನೇತೃತವವದಲ್ಲಿ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಐದೂ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ. ಇದು ಫ್ರಾಂಚೈಸಿ ಮಾಲೀಕರಾದ ಪಾರ್ಥ್​ ಜಿಂದಾಲ್​​ಗೆ ಅಸಮಾಧಾನ ತಂದಿದೆ. ಹೀಗಾಗಿ 2024 ಟೂರ್ನಿಗೆ ಡೆಲ್ಲಿ ತಂಡ ಕೋಚಿಂಗ್‌ ವಿಭಾಗದಲ್ಲಿ ಬದಲಾವಣೆಯಾಗಲಿದೆ. ಪ್ರಮುಖವಾಗಿ ಕೋಚ್‌ ರಿಕಿ ಪಾಂಟಿಂಗ್‌ ಅವರ ಸ್ಥಾನಕ್ಕೂ ಕಂಟಕ ಬರಲಿದೆ.

ಮುಂದಿನ ಆವೃತ್ತಿಯ ಐಪಿಎಲ್‌ಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚಿಂಗ್‌ ವಿಭಾಗದಲ್ಲಿ ಸಂಪೂರ್ಣ ಬದಲಾವಣೆ ಘಟಿಸಲಿವೆ. ಕಳೆದ 3-4 ಆವೃತ್ತಿಗಳಿಂದಲೂ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿರುವ ರಿಕಿ ಪಾಂಟಿಂಗ್‌ ಅವರನ್ನು ಬದಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಜೊತೆಗೆ ತಂಡದ ಕ್ರಿಕೆಟ್‌ ನಿರ್ದೇಶಕ ಆಗಿರುವ ಸೌರವ್‌ ಗಂಗೂಲಿ ಕೂಡ ಮುಂದುವರಿಯುವುದಿಲ್ಲ ಎಂಬುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸದ್ಯ ಡೆಲ್ಲಿ ತಂಡದ ಕೋಚಿಂಗ್‌ ಬಳಗದಲ್ಲಿ ರಿಕಿ ಪಾಂಟಿಂಗ್‌ ಮತ್ತು ಸೌರವ್‌ ಗಂಗೂಲಿ ಹೊರತಾಗಿ ಜೇಮ್ಸ್‌ ಹೋಪ್ಸ್‌ (ಸಹಾಯಕ ಕೋಚ್‌), ಅಜಿತ್‌ ಅಗರ್ಕರ್‌ (ಸಹಾಯಕ ಕೋಚ್‌), ಶೇನ್‌ ವಾಟ್ಸನ್‌ (ಸಹಾಯಕ ಕೋಚ್‌), ಪ್ರವೀಣ್‌ ಆಮ್ರೆ (ಬ್ಯಾಟಿಂಗ್‌ ಕೋಚ್‌) ಮತ್ತು ಬಿಜು ಜಾರ್ಜ್‌ (ಸಹಾಯಕ ಕೋಚ್‌) ಇದ್ದಾರೆ. ಸದ್ಯಕ್ಕೆ ಇವರ ಸ್ಥಾನ ಗಟ್ಟಿ. ಯಾರನ್ನೂ ಬದಲಾವಣೆ ಮಾಡುವುದಿಲ್ಲ ಎಂದು ಹೇಳಲಾಗಿದೆ. ಅವರೆಲ್ಲರ ಕೆಲಸ ಸದ್ಯಕ್ಕೆ ಸೇಫ್​. ಇನ್ನುಳಿದ ಪಂದ್ಯಗಳಲ್ಲಿ ತಂಡದ ಪ್ರದರ್ಶನವನ್ನು ಆಧರಿಸಿ ಮುಂದಿನ ಆವೃತ್ತಿಗೆ ಅವರ ಅಳಿವು, ಉಳಿವು ನಿರ್ಧಾರವಾಗಲಿದೆ.

ಇದನ್ನೂ ಓದಿ ವ: IPL 2023 : ಚೆನ್ನೈ ವಿರುದ್ಧ 8 ರನ್​ಗಳಿಂದ ಸೋತ ಆರ್​ಸಿಬಿ, ಪ್ಲೆಸಿಸ್​, ಮ್ಯಾಕ್ಸ್​ವೆಲ್​ ಹೋರಾಟ ವ್ಯರ್ಥ

“ಹಾಲಿ ಟೂರ್ನಿ ಮಧ್ಯದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಆದರೆ, ಕಳೆದ ಎರಡು ಆವೃತ್ತಿಗಳಲ್ಲಿನ ನೀರಸ ಪ್ರದರ್ಶನ ತಂಡದ ಮಾಲೀಕರಾದ ಜಿಎಮ್‌ಆರ್‌ ಮತ್ತು ಜೆಸ್‌ಎಸ್‌ಡಬ್ಲ್ಯು ಮೌಲ್ಯ ಕುಸಿತಕ್ಕೆ ಕಾಣವಾಗಿದೆ. ಮಾಲೀಕರು ಈ ಬಗ್ಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಮುಂದಿನ ಆವೃತ್ತಿಗೆ ಕೋಚಿಂಗ್​ ಬಳಗ ಚಿಕ್ಕದಾಗಲಿದೆ. ಕೆಲವರು ಮಾತ್ರ ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೂಲಗಳು ತಿಳಿಸಿವೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನ ಮುಂದಿನ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಆಡಲಿದೆ. ಈ ಪಂದ್ಯದಲ್ಲೂ ತಂಡ ಸೋತಿದ್ದೇ ಆದರೆ ಪ್ಲೇ ಆಫ್​ ಹಂತದ ಆಸೆ ಬಿಡಬಹುದು.

Exit mobile version